ಕ್ಷುಲ್ಲಕ ವಿಚಾರಕ್ಕೆ ಕೌಟುಂಬಿಕ ಕಲಹ:ತಂಗಿಯ ಕೊಂದ ಅಣ್ಣ

Spread the love

(ವರದಿ: ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ, ಜ.2: ಕ್ಷುಲ್ಲಕ ವಿಚಾರಕ್ಕೆ ಕೌಟುಂಬಿಕ ಕಲಹ ನಡೆದು ಅಣ್ಣನೇ ತನ್ನ ಸಹೋದರಿಯ ಕುತ್ತಿಗೆ ಕೊಯ್ದು ಹತ್ಯೆ ಮಾಡಿರುವ ಘಟನೆ ಪಟ್ಟಣದ ಈದ್ದಾ ಮೊಹಲ್ಲಾದಲ್ಲಿ ನಡೆದಿದೆ.

ಪಟ್ಟಣದ ಈದ್ಗಾ ಮೊಹಲ್ಲಾದ ಸೈಯದ್ ಪಾಷಾ ಅವರ ನಾಲ್ಕನೇ ಮಗಳು ಐಮನ್ ಬಾನು (23) ಕೊಲೆಯಾದ ಯುವತಿ. ಈಕೆಯ ಅಣ್ಣ ಫರ್ಮನ್ ಪಾಷಾ ಕೊಲೆ ಮಾಡಿದ ಆರೋಪಿ.

ರಾತ್ರಿ ಅಣ್ಣ,ತಂಗಿ ಜಗಳವಾಡಿದ್ದಾರೆ‌ ಅದನ್ನು ಬಿಡಿಸಲು ಬಂದ ತಂದೆ, ಅತ್ತಿಗೆ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಘಟನೆ ಸಂಬಂಧ ಆರೋಪಿಯನ್ನು ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಸೈಯದ್ ಪಾಷಾ ಅವರಿಗೆ ಮೂರು ಹೆಣ್ಣು ಎರಡು ಗಂಡು ಒಟ್ಟು ಐದು ಮಕ್ಕಳು. ದೂರುದಾರರ ಹಿರಿಯ ಮಗ ಸೈಯದ್ ರೋಶನ್ ಅವರು ರಾತ್ರಿ ಮಗು ಮಲಗಿಕೊಳ್ಳುವ ವಿಚಾರ ಎತ್ತಿದ್ದಾರೆ.ಆಗ ಆರೋಪಿ ಫರ್ಮನ್ ಪಾಷಾ ನಾನು ಊಟ ಮಾಡುವವರೆಗೆ ಮಗು ಮಲಗಿಕೊಳ್ಳುವುದು ಬೇಡ ಎಂದು ತಗಾದೆ ತೆಗೆದಿದ್ದಾನೆ.

ಇದಕ್ಕೆ ಮೃತ ಐಮನ್ ಬಾನು ಎಲ್ಲಾ ಇವನು ಹೇಳಿದ ಹಾಗೆ ನಡೆಯಬೇಕು ಮಲಗಿಕೊಳ್ಳಲಿ ಬಿಡು ಎಂದು ಹೇಳಿದ್ದಾಳೆ ಈ ವೇಳೆ ಸಣ್ಣದಾಗಿ ಗಲಾಟೆ ಶುರುವಾಗಿ ಜೋರಾಗಿದೆ. ಈ ವೇಳೆ ಕೋಪದಲ್ಲಿ ಸಹೋದರಿ ಐಮನ್ ಬಾನು ಮೇಲೆ ಫರ್ಮನ್ ಪಾಷಾ ಹಲ್ಲೆ ಮಾಡಿ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದು ಕೊಲೆ ಮಾಡಿದ್ದಾನೆ.

ಈ ವೇಳೆ ಜಗಳ ಬಿಡಿಸಲು ಬಂದ ಅತ್ತಿಗೆ ತಸ್ಲಿಮ್ ತಾಜ್ ಳ ಕುತ್ತಿಗೆಗೂ ಚಾಕುವಿನಿಂದ ಕುಯ್ದು ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಹಾಗೂ ತಡೆಯಲು ಬಂದ ತಂದೆ ಸೈಯದ್ ಪಾಷಾ ಮೇಲೂ ಹಲ್ಲೆ ನಡೆಸಿ ಕೈ ಮುರಿದಿದ್ದಾನೆ. ಗಾಯಗೊಂಡ ತಸ್ಲಿಮ್ ತಾಜ್, ಸೈಯದ್ ಪಾಷಾ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರು ಹಾಗೂ ಚಾಮರಾಜನಗರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಐಮನ್ ಬಾನು ಮೃತದೇಹವನ್ನು ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ವರ್ಷಾ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

ಈ ಸಂಬಂಧ ಮೃತಳ ಹಿರಿಯ ಸಹೋದರ ಸೈಯದ್ ರೋಷನ್ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪಟ್ಟಣ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.