ಕುಸಿದು ಬೀಳುತಿದೆ ಮಹಾನ್ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿವಾಸ

Spread the love

ಪಿರಿಯಾಪಟ್ಟಣ: ಗೆಜ್ಜೆಪೂಜೆ, ಶರಪಂಜರ ಸೇರಿದಂತೆ ಹಲವಾರು ಪ್ರಸಿದ್ಧ ಚಲನಚಿತ್ರಗಳನ್ನು ನಾಡಿಗೆ ನೀಡಿದ ಕನ್ನಡ ಚಲನಚಿತ್ರಗಳ ಮಹಾನ್ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರನ್ನು ಎಲ್ಲರೂ ತೆರೆಮರೆಗೆ ಸೇರಿಸಿ ಬಿಟ್ಟಿದ್ದಾರೆ ಅನಿಸುತ್ತಿದೆ.

ಪಟ್ಟಣ ಕಣಗಾಲ್ ಅವರು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಕಣಗಾಲು ಗ್ರಾಮದಲ್ಲಿ ಜನಿಸಿದವರು. ಅವರು ಆಡಿ ಬೆಳೆದ ಮನೆ ಈಗ ಕುಸಿದು ಪಾಳು ಬಿದ್ದಿದೆ,ಆದರೆ ಕೇಳುವವರೇ ಇಲ್ಲದಂತಾಗಿದೆ.

ಪಟ್ಟಣ ಕಣಗಾಲ್ ಅವರು ನಿಧನ ಹೊಂದಿ ದಶಕಗಳೇ ಕಳೆದರೂ ಇದುವರೆಗಿನ ಯಾವುದೇ ಸರ್ಕಾರಗಳು ಕೂಡ ಕಣಗಾಲಿನಲ್ಲಿರುವ ಪುಟ್ಟಣ್ಣ ಅವರ ನಿವಾಸವನ್ನು ಅಭಿವೃದ್ಧಿಪಡಿಸಲೇ ಇಲ್ಲ.

ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೂ ತಾವು ಕಲೆ, ಸಾಹಿತ್ಯ, ಚಲನಚಿತ್ರ ಸಂಗೀತ, ನಾಟಕ,ಕನ್ನಡ ಭಾಷೆ ಎಲ್ಲದಕ್ಕೂ ಹೆಚ್ಚು ಒತ್ತು ನೀಡುತ್ತೇವೆ, ಕನ್ನಡದ ಅಭಿವೃದ್ಧಿಯೇ ನಮ್ಮ ದ್ಯೇಯ ಎಂದು ಹೇಳಿಕೊಳ್ಳುತ್ತವೆ ಆದರೆ ಇದೆಲ್ಲ ಭಾಷಣಗಳಿಗೆ ಮಾತ್ರ ಸೀಮಿತ ಎಂಬುದು ಪುಟ್ಟಣ್ಣ ಕಣಗಾಲ್ ಅವರ ನಿವಾಸವನ್ನು ನೋಡಿದವರಿಗೆ ಅನಿಸುವುದು ಸಹಜ.

ಪುಟ್ಟಣ್ಣ ಅವರು ಜನಿಸಿದ ಮನೆ ತೊಟ್ಟಿ ಮನೆ, ಬಹಳ ದೊಡ್ಡದಾಗಿದೆ ಆದರೆ ಮನೆಯ ಮುಂಭಾಗದ ಹೆಂಚುಗಳು ಹಾಳಾಗಿ ಒಡೆದು ಹೋಗಿದೆ. ಗೋಡೆ ಕೂಡ ಕುಸಿಯುತ್ತಿದೆ,ಕಂ ಬಗಳು ಬೀಳುವಂತಿವೆ, ಚಾವಣಿ ಆಗಲೇ ಬಿದ್ದಂತಾಗಿದೆ.

ತಮ್ಮ ಊರಿಗೆ ಗ್ರಾಮ ಪಂಚಾಯಿತಿ ಕಚೇರಿ ಬೇಕು ಎಂದುಕೊಂಡು ಪುಟ್ಟಣ್ಣ ಅವರು ಅದಾಗಲೇ ತಮಗೆ ಸೇರಿದ ಜಾಗವನ್ನು ಬಿಟ್ಟುಕೊಟ್ಟು ಅಲ್ಲಿ ಕಣಗಾಲು ಗ್ರಾಮ ಪಂಚಾಯಿತಿ ಬರುವಂತೆ ಮಾಡಿದ್ದಾರೆ. ಈಗಲೂ ಕಣಗಾಲ್ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಪುಟ್ಟಣ್ಣ ಅವರ ಪುಟ್ಟ ಪ್ರತಿಮೆಯನ್ನು ಇಟ್ಟು,ಗ್ರಾನೈಟ್ ನಲ್ಲಿ ಅವರ ಹೆಸರು ಹಾಕಿ ಕೃತಜ್ಞತೆ ಸಲ್ಲಿಸಿದ್ದಾರೆ.ಆದರೆ ಏನು ಪ್ರಯೋಜನ?.

ಆದರೆ ಇದೇ ಗ್ರಾಮ ಪಂಚಾಯಿತಿಯ ಅರ್ಧ ಕಿಲೋಮೀಟರ್ ದೂರದಲ್ಲಿ ಪುಟ್ಟಣ್ಣವರ ನಿವಾಸ ಇದ್ದು ಬಾಳು ಬಿದ್ದಿರುವುದು ಕಂಡುಬಂದರೂ ಅಲ್ಲಿನ ಅಧ್ಯಕ್ಷರಾಗಲಿ ಸದಸ್ಯರಾಗಲಿ ಯಾರು ತಲೆಕೆಡಿಸಿಕೊಳ್ಳುವುದಿಲ್ಲ.ಮನೆಯ ಸುತ್ತ,ಮುತ್ತ‌ ಗಿಡಗಂಟಿಗಳು ಬೆಳೆದು ನಿಂತಿದ್ದರೂ ಕನಿಷ್ಠ ಅದನ್ನೆಲ್ಲ ಸ್ವಚ್ಛ ಮಾಡುವ ಗೋಜಿಗೂ ಹೋಗದಿರುವುದು ವಿಪರ್ಯಾಸ.

ಅಷ್ಟೆ ಏಕೆ ಪಿರಿಯಾಪಟ್ಟಣದ ಈಗಿನ ಶಾಸಕರಾದ ವೆಂಕಟೇಶ್ ಅವರು ಕಾಂಗ್ರೆಸ್ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದಾರೆ ಅವರು ಕೂಡ ಇದರ ಬಗ್ಗೆ ಧ್ವನಿ ಎತ್ತದಿರುವುದು ದುರ್ದೈವದ ಸಂಗತಿಯಾಗಿದೆ.

ಪುಟ್ಟಣ್ಣನವರು ವಾಸಿಸಿದ ಈ ಮನೆಯನ್ನು ಮ್ಯೂಸಿಯಂ ಮಾಡಬೇಕೆಂಬ ಕೂಗು ಬಹಳ ವರ್ಷಗಳ ಹಿಂದೆಯೇ ಎದ್ದಿತ್ತು. ಅದಕ್ಕಾಗಿ ಸರ್ಕಾರ ಹಣ ಬಿಡುಗಡೆ ಮಾಡಿದೆ ಎಂದು ಹೇಳಲಾಗುತ್ತಿದೆ ಆದರೆ ಅದು ನಿಜವೊ ಸುಳ್ಳೊ ತಿಳಿಯದು, ಈ ಬಗ್ಗೆ ಪಂಚಾಯತಿಯವರನ್ನು ಕೇಳಿದರೆ ಯಾವುದೇ ಹಣ ಬಂದಿಲ್ಲ ಎನ್ನುತ್ತಾರೆ. ಇದು ಕೂಡ ನಿಜವೋ ಸುಳ್ಳು ಗೊತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು,
ಜನಪ್ರತಿನಿಧಿಗಳು ಇದರ ಬಗ್ಗೆ ತಕ್ಷಣ ಗಮನಹರಿಸಬೇಕು. ಚಲನಚಿತ್ರ ಉದ್ಯಮದವರು ಕೂಡ ಈ ಬಗ್ಗೆ ಗಮನಹರಿಸ ಬೇಕೆಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಒತ್ತಾಯಿಸಿದ್ದಾರೆ.

ಇನ್ನು ಮುಂದಾದರೂ ಸರ್ಕಾರ ಎಚ್ಚೆತ್ತುಕೊಂಡು ಈ ಮಹಾನ್ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ನಿವಾಸವನ್ನು ಅಭಿವೃದ್ಧಿಪಡಿಸಿ ಅವರ ನಿರ್ದೇಶನದ ಚಿತ್ರಗಳು, ಸಂಬಂಧಪಟ್ಟ ವಸ್ತುಗಳನ್ನು ಇಟ್ಟು ಮ್ಯೂಸಿಯಂ ಮಾಡೀತೆ ಕಾದು ನೋಡಬೇಕಿದೆ.