ಮೈಸೂರು: ಮೈಸೂರು ಜಿಲ್ಲೆ ವರುಣಾ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀ ಯತಿನ್ ಹೋಟೆಲ್ ಬಳಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಅವರ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ ಹಮ್ಮಿಕೊಂಡು ಅಹವಾಲು ಸ್ವೀಕರಿಸಲಾಯಿತು.
ಜನ ಸಂಪರ್ಕ ಸಭೆಗೆ ವರುಣ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮಗಳಿಂದ 250 ರಿಂದ 300 ಜನ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡು ತಮ್ಮ ಕುಂದು ಕೊರತೆಗಳ ಬಗ್ಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಎಲ್ಲರ ಅಹವಾಲು ಹಾಗೂ ಸಮಸ್ಯೆಗಳನ್ನ ಆಲಿಸಿದ ಪೊಲೀಸ್ ವರಿಷ್ಠಾಧಿಕಾರಿಗಳು
ಮುಂದಿನ ಸಭೆಯೊಳಗಾಗಿ ಸಾಧ್ಯವಾದಷ್ಟು ಸಮಸ್ಯೆಗಳ ಬಗ್ಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಲ್ಲಿಕ್ ಸಿ. ಮತ್ತು ನಾಗೇಶ್ ಎಲ್ ಹಾಗೂ ಮೈಸೂರು ಗ್ರಾಮಾಂತರ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕರು ಮತ್ತು ಸಿಪಿಐ ಹಾಜರಿದ್ದರು.