ಕಮಲಹಸನ್ ಹೇಳಿಕೆ ಖಂಡಿಸಿಕರ್ನಾಟಕ ಸೇನಾಪಡೆ ಪ್ರತಿಭಟನೆ

Spread the love

ಮೈಸೂರು: ಬಹುಭಾಷಾ ನಟ ಕಮಲಹಸನ್ ಕನ್ನಡ ಭಾಷೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದನ್ನು ಖಂಡಿಸಿ ಕರ್ನಾಟಕ ಸೇನಾಪಡೆ ಸದಸ್ಯರು ಮೈಸೂರಿನ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ಮಾಡಿದರು.

ಸಾವಿರಾರು ವರ್ಷಗಳ ಭವ್ಯ ಇತಿಹಾಸವಿರುವ, ಸ್ವತಂತ್ರ ಲಿಪಿ ಹೊಂದಿರುವ, ಶಾಸ್ತ್ರೀಯ ಸ್ಥಾನಮಾನ ಹೊಂದಿರುವ ಶ್ರೀಮಂತ ಭಾಷೆ ಕನ್ನಡ. ಕೋಟ್ಯಾಂತರ ಕನ್ನಡಿಗರ ಜೀವನಾಡಿ ಆಗಿರುವ ಹೆಮ್ಮೆಯ ಕನ್ನಡ ಭಾಷೆಗೆ ಕಮಲಹಾಸನ್ ಅವರು ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ಹೇಳಿ ಕನ್ನಡ ಭಾಷೆಗೆ ಅವಮಾನಿಸಿದ್ದಾರೆ ಎಂದು ಪ್ರತಭಟನಾ ನಿರತರು ಖಂಡಿಸಿದರು.

ನಮ್ಮ ಕನ್ನಡ ಭಾಷೆಯಲ್ಲಿ 52 ಅಕ್ಷರಗಳಿವೆ. ಆದರೆ ತಮಿಳು ಭಾಷೆಯಲ್ಲಿ ಬರೀ 18 ಅಕ್ಷರಗಳಿವೆ‌. ನಮ್ಮ ಕನ್ನಡ ಭಾಷೆಯಲ್ಲಿ ಕ ಖ ಗ ಘ ಙ, ಚ ಛ ಜ ಝ ಞ ಎಂಬಿತ್ಯಾದಿ ಅಕ್ಷರಗಳಿವೆ. ಆದರೆ ತಮಿಳಿನಲ್ಲಿ ಬರೀ ಕ, ಚ, ಟ, ಪ ಅಕ್ಷರಗಳಿವೆ. ಇದನ್ನು ಅರಿಯದ, ಭಾಷೆಗಳ ಬಗ್ಗೆ ಜ್ಞಾನ ಇಲ್ಲದ ಕಮಲಹಸನ್ ಈ ರೀತಿ ಹೇಳಿಕೆ ನೀಡಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.

ನಮ್ಮ ಕನ್ನಡ ಭಾಷೆ ದೇಶದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದು. ಬಹುಶಃ ಸಂಸ್ಕೃತ ಬಿಟ್ಟರೆ ಕನ್ನಡ ಭಾಷೆ ಬಹಳ ಪ್ರಾಚೀನ ಭಾಷೆ, ಅದಕ್ಕಾಗಿ ನಮ್ಮ ಕನ್ನಡಕ್ಕೆ, ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಇತ್ತೀಚೆಗೆ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಸಹ ನಮ್ಮ ಕನ್ನಡಕ್ಕೆ ಸಿಕ್ಕಿದೆ.

ಕೂಡಲೇ ಕಮಲಹಾಸನ್ ಕನ್ನಡಿಗರ ಹಾಗೂ ಕನ್ನಡ ಭಾಷೆಯ ಬಗ್ಗೆ ಕ್ಷಮೆ ಕೋರಬೇಕು ಇಲ್ಲದಿದ್ದಲ್ಲಿ ಮುಂದಿನ ವಾರ ತೆರೆ ಕಾಣಲಿರುವ ಅವರ ಸಿನಿಮಾವನ್ನು ರಾಜ್ಯಾದ್ಯಂತ ಬಹಿಷ್ಕಾರ ಮಾಡಿ ಬಿಡುಗಡೆಯಾಗದಂತೆ ತಡೆ ಹಿಡಿಯುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು.

ಗೋಲ್ಡ್ ಸುರೇಶ್, ಪ್ರಭುಶಂಕರ, ನೇಹಾ, ಬೋಗಾದಿ ಸಿದ್ದೇಗೌಡ, ಕೃಷ್ಣಪ್ಪ, ಗಿರೀಶ್ ಹೆಚ್, ಸಿಂದುವಳ್ಳಿ ಶಿವಕುಮಾರ್, ತಾಯೂರ್ ಗಣೇಶ್, ಹನುಮಂತಯ್ಯ, ಮೂರ್ತಿ ಲಿಂಗಯ್ಯ, ದರ್ಶನ್ ಗೌಡ, ವರಕೂಡು ಕೃಷ್ಣೇಗೌಡ,ರವೀಶ್, ಪ್ರಭಾಕರ್ , ನಾಗರಾಜಾ ಚಾರ್, ಶಿವರಾಂ ಗೌಡ, ರಘು ಅರಸ್, ಎಳನೀರು ರಾಮಣ್ಣ, ಗಣೇಶ್ ಪ್ರಸಾದ್, ವಿಷ್ಣು ಮತ್ತಿತರರು ಪಾಲ್ಗೊಂಡಿದ್ದರು.