ವಿಜ್ಞಾನ ಲೋಕದಲ್ಲಿ ನಿತ್ಯಕುಲಪತಿ ಪ್ರೊ.ಕೆ.ಎಸ್ ರಂಗಪ್ಪ: ಪ್ರೊ. ಮಹದೇವ

Spread the love

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ರಂಗಪ್ಪ ಅವರ ಕೊಡುಗೆ ಅಪಾರವಾಗಿದೆ ಎಂದು ವಿಶ್ರಾಂತ ಕುಲಪತಿ ಪ್ರೊ. ಮಹದೇವ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯ ಹಿರಿಯ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ವಿಶ್ರಾಂತ ಕುಲಪತಿ ಪ್ರೊ. ಕೆ ಸಿ ರಂಗಪ್ಪ ಅವರ 70ನೇ ವರ್ಷದ ಜನ್ಮದಿನಾಚರಣೆ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು.

ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳನ್ನು ಕಂಡರೆ ಅತೀವ ಕಾಳಜಿಯಿಂದ ಮುನ್ನಡೆಸುತ್ತಿದ್ದ ರಂಗಪ್ಪ ಅವರ ಗುಣ ಮುಂದಿನ ಪೀಳಿಗೆ ಅಧಿಕಾರಿಗಳಿಗೆ ಮಾರ್ಗದರ್ಶನ ಎಂದು ಹೇಳಿ ಅವರಿಬ್ಬರ ಆತ್ಮೀಯತೆಯನ್ನು ನೆನಪು ಮಾಡಿಕೊಂಡರು.

ರಂಗಪ್ಪ ಅವರು ಮೈಸೂರು ವಿವಿಯ ಕುಲಪತಿಗಳಾಗಿದ್ದ ಸಮಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಹೊಸ ವಿನ್ಯಾಸವನ್ನೇ ನೀಡಿದರು, ಅವರ ಪರಂಪರೆ ಕೃಷಿ ಕುಟುಂಬದ ಹಿನ್ನೆಲೆ ಆಗಿರುವುದರಿಂದ ಸಮಾಜದಲ್ಲಿ ಇಷ್ಟು ಎತ್ತರಕ್ಕೆ ಏರಲು ಸಾಧ್ಯವಾಯಿತು ಎಂದು ನುಡಿದರು.

ಕರ್ನಾಟಕದಲ್ಲಿ ನಿತ್ಯ ಸಚಿವರು ಎಂದು ಕೆ ವಿ ಶಂಕರೇಗೌಡರನ್ನು ಕರೆದರೆ , ವಿಜ್ಞಾನ ಲೋಕದಲ್ಲಿ ನಿತ್ಯ ಕುಲಪತಿಗಳು ಎಂದು ಪ್ರೊ. ರಂಗಪ್ಪನವರನ್ನು ಕರೆಯುತ್ತೇವೆ ಎಂದು ಮಹದೇವ ಅವರು ಹೇಳಿದರು.

ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಬಿ ಜೆ ವಿಜಯ್ ಕುಮಾರ್ ಮಾತನಾಡಿ ನಮ್ಮ ವಿದ್ಯಾರ್ಥಿ ಜೀವನದಿಂದಲೂ ರಂಗಪ್ಪ ಅವರನ್ನು ನಾವು ಹತ್ತಿರದಿಂದ ನೋಡಿದ್ದೇವೆ. ಅವರ ತಾಳ್ಮೆ, ಸಮಯಪ್ರಜ್ಞೆ ಮತ್ತು ಅಪಾರವಾದ ಪಾಂಡಿತ್ಯ ಅವರನ್ನು ಎತ್ತರಕ್ಕೆ ಕೊಂಡೊಯ್ದಿದೆ ಎಂದು ಹೇಳಿದರು.

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಹಳ್ಳಿ ಪ್ರತಿಭೆ ರಂಗಪ್ಪ ಅವರು ರಸಾಯನಶಾಸ್ತ್ರ ವಿಷಯದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕೆಲವೇ ವಿಜ್ಞಾನಿಗಳಲ್ಲಿ ಒಬ್ಬರು ಎಂದು ಬಣ್ಣಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ವೈ ಡಿ ರಾಜಣ್ಣ ಮಾತನಾಡಿ ರಂಗಪ್ಪನವರು ಸಾವಿರಾರು ಜನರ ಬದುಕಿಗೆ ಜೀವನ ಮಾಡಲು ದಾರಿ ಮಾಡಿಕೊಟ್ಟಿದ್ದಾರೆ. ಅವರು ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವುದು ನಮಗೆ ಹೆಮ್ಮೆ,ಅವರಿಗೆ ರಾಷ್ಟ್ರಮಟ್ಟದ ಗೌರವ ಸಲ್ಲಬೇಕಿದೆ ಎಂದು ತಿಳಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರೊ. ರಂಗಪ್ಪ ಅವರು,ನನ್ನ ಸೇವಾ ಅವಧಿಯಲ್ಲಿ ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಾಗಲಿಲ್ಲ ಹಾಗಾಗಿ ಕೆಲವರು ನನ್ನನ್ನು ದೂಷಿಸುವುದು ಉಂಟು. ವಿವಿ ಹೆಸರು ಹಾಳು ಮಾಡಲು ಹಲವರು ಪ್ರಯತ್ನ ಮಾಡಿದ್ದರು ಕೊನೆಗೆ ಅದು ಈಡೇರಲಿಲ್ಲ ಯಾಕೆಂದರೆ ನಾನು ಯಾರಿಗೂ ಹೆದರುವುದಿಲ್ಲ ಅದಕ್ಕಾಗಿ ಎಂದು ಹೇಳಿದರು.

ನಾನು ಒಳ್ಳೆಯ ಕೆಲಸಗಳನ್ನು ಮಾಡಿರುವೆ ಎಂಬ ಆತ್ಮ ತೃಪ್ತಿ ಇದೆ ,ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಕೆಲಸ ಮಾಡಬೇಕು ದಾರಿ ಇಲ್ಲದವರಿಗೆ ದಾರಿ ತೋರುವುದೇ ನಮ್ಮ ದೊಡ್ಡ ಜವಾಬ್ದಾರಿ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರೊ ರಂಗಪ್ಪ ಅವರ ಹೆಸರಿನ ಸಮಾಜ ಅಧ್ಯಯನ ವಿಷಯದಲ್ಲಿ ಇರುವ ದತ್ತಿ ಚಿನ್ನದ ಪದಕವನ್ನು ಪಡೆದ ಕು. ಗೀತಾಂಜಲಿ ಎಲ್ ಹರಿಯಾಳ್ ಅವರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ವಿಶ್ವ ಮಾನವ ವೇದಿಕೆ ಅಧ್ಯಕ್ಷರಾದ ವಾಸುದೇವ್, ಕರ್ನಾಟಕ ಸಂವಿಧಾನ ಸಂರಕ್ಷಣಾ ಸಮಿತಿ ಅಧ್ಯಕ್ಷರಾದ ಎನ್ ಭಾಸ್ಕರ್, ವಿಶ್ವವಿದ್ಯಾನಿಲಯ ಹಿರಿಯ ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳಾದ ಚಿಕ್ಕನಾಯಕನಹಳ್ಳಿ ಮಹೇಶ್,
ಎಡತಲೆ ಮಂಜುನಾಥ್, ಮಳಿಯೂರ್ ಸಂತೋಷ್, ಸಕ್ಕಳ್ಳಿ ಬಸವರಾಜ್,
ಎಮ್. ಶಿವಪ್ರಸಾದ್, ಕೋಟೆ ಮಲ್ಲೇಶ್, ಕಾಂತರಾಜ್, ತಿಮ್ಮಯ್ಯ,ಮಹಾದೇವ್ , ನಂಜುಂಡ ಮೂರ್ತಿ, ಸಿದ್ದರಾಮ,ಜಮೀರ್, ಪುಟ್ಟಸ್ವಾಮಿ, ಸಿದ್ದರಾಜು , ಪ್ರೊ. ಬಸವಗೌಡ, ವಕೀಲರಾದ ಪ್ರೇಮ್, ಮನೋನ್ಮಣಿ, ಮೀನಾಕ್ಷಿ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.