ಅಮಿತ್ ಶಾ ಬಂಧನಕ್ಕೆ ಆಗ್ರಹಿಸಿಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರತಿಭಟನೆ

Spread the love

ಮೈಸೂರು: ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ರವರ ಬಗ್ಗೆ ಅವಹೇಳನ ಮತ್ತು ದ್ವೇಷದ ಮಾತನ್ನಾಡಿರುವ ಕೇಂದ್ರಗೃಹ‌ ಸಚಿವ ಅಮಿತ್ ಷಾರನ್ನು ಸಂಸದ ಸ್ಥಾನದಿಂದ ವಜಗೊಳಿಸಬೇಕೆಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.

ಮೈಸೂರಿನ ಟೌನ್ ಹಾಲ್ ಮುಂಭಾಗ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು,ಮತ್ತಿತರರು ಬೃಹತ್ ಪ್ರತಿಭಟನೆ ನಡೆಸಿ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿದರು,ಜತೆಗೆ ಯುಎಪಿಎ ಕಾಯ್ದೆಯಡಿ ಬಂಧಿಸಬೇಕೆಂದು ಆಗ್ರಹಿಸಿದರು.

ಸಂವಿಧಾನ ಶಿಲ್ಪಿ ವಿಶ್ವಜ್ಞಾನಿ ಡಾ. ಬಿ ಆರ್ ಅಂಬೇಡ್ಕರ್ ಅವರು ಸಮಾನತೆ, ಸಹಬಾಳ್ವೆ, ಭಾತೃತ್ವ, ಜಾತ್ಯತೀತ ಧರ್ಮ, ನಿರಪೇಕ್ಷ, ಸಂವಿಧಾನವನ್ನು ಈ ದೇಶಕ್ಕೆ ನೀಡಿದ್ದಾರೆ.

ಇಂತಹ ವಿಶ್ವ ಶ್ರೇಷ್ಠ ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವುದು ಸಂವಿಧಾನದ ಕರ್ತವ್ಯವನ್ನು ಗೌರವಿಸುವುದು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವುದು ಆಡಳಿತ ನಡೆಸುವ ಸರ್ಕಾರಗಳ ಕರ್ತವ್ಯವಾಗಿದೆ ಎಂದು ಹೇಳಿದರು.

ಗೌರವಾನ್ವಿತ ಸಾಂವಿಧಾನಿಕ ಹುದ್ದೆ ಹೊಂದಿರುವ ಕೇಂದ್ರ ಸರ್ಕಾರದ ಗೃಹ ಮಂತ್ರಿ ಆಮಿತ್ ಶಾ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ರಾಜ್ಯಸಭೆಯಲ್ಲಿ ಅಸಹನೆ ಮತ್ತು ದ್ವೇಷದ ಮಾತ ನಾಡಿರುವುದು ಅವರ ವಿಕೃತ ಮನಸ್ಥಿತಿಗೆ ಸಾಕ್ಷಿಯಾಗಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

ಹಿಂದಿನಿಂದಲೂ ಸಂವಿಧಾನ ಸುಡುವ ಹಾಗೂ ಸಂವಿಧಾನ ಬದಲಿಸುವ ಹೇಳಿಕೆಗಳನ್ನು ನೀಡುತ್ತಾ, ಅಲ್ಪಸಂಖ್ಯಾತರು ಮತ್ತು ಶೋಷಿತ ಸಮುದಾಯಗಳ ವಿರುದ್ಧ ದ್ವೇಷ ಬಿತ್ತಿ ಅರಾಜಕತೆ ಸೃಷ್ಟಿಸಿ ಅಸಹನೆಯಿಂದಲೇ ರಾಜಕೀಯ ಮಾಡುತ್ತಾ ಅಧಿಕಾರಕ್ಕೆ ಬಂದಿರುವ ಬಿಜೆಪಿ ಮತ್ತು ಆರ್ ಎಸ್ ಎಸ್ ಸಂಘ ಪರಿವಾರದ ಮುಖ್ಯಸ್ಥರಾಗಿರುವ ಅಮಿತ್ ಶಾ ಅವರು ಹಿಂದೆ ಗುಜರಾತ್ ರಾಜ್ಯದಲ್ಲಿ ಕೋಮು ಸೌಹಾರ್ದತೆಗೆ ಬೆಂಕಿ ಇಟ್ಟಿದ್ದರು. ನ್ಯಾಯಾಧೀಶರ ಕೊಲೆ ಪ್ರಕರಣದಲ್ಲಿ ಕ್ರಿಮಿನಲ್ ಅಪರಾಧಿಯಾಗಿ ಗಡಿಪಾರಾಗಿದ್ದವರು, ಅಂತವರು ಸಂಸದರಾಗಲು ಅರ್ಹತೆ ಇಲ್ಲ ಎಂದು ಒಕ್ಕೂಟದ ಮುಖಂಡರು ಕಿಡಿಕಾರಿದರು‌

ದೇಶದ ಕಾನೂನು ಸುವ್ಯವಸ್ಥೆ ಕಾಪಾಡುವ ಪ್ರಮುಖ ಹುದ್ದೆಯಾದ ಗೃಹ ಖಾತೆಯ ಜವಾಬ್ದಾರಿ ಹೊತ್ತಿರುವ ಶಾ ಅಸಮಾನತೆಯ ಮನಸ್ಕೃತಿ ಯನ್ನು ಜಾರಿಗೆ ತರಲು ಯತ್ನಿಸಿದ್ದಾರೆ,ಅಂಥವರ ಬೆಂಬಲಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಿಂತಿರುವುದನ್ನು ದಲಿತ ಸಂಘಟನೆಗಳು ತೀರ್ವವಾಗಿ ಖಂಡಿಸುತ್ತದೆ ಎಂದು ಕಾರವಾಗಿ ಘೋಷಣೆ ಕೂಗಿದರು.

ಅಂಬೇಡ್ಕರ್ ಅವರು ದೇಶದ ಹಾಗೂ ಎಲ್ಲ ವರ್ಗಗಳ ಅಸ್ಮಿತೆ.ಅವರ ಬಗ್ಗೆ ಅಂಬೇಡ್ಕರ್ ಅಂಬೇಡ್ಕರ್ ಎನ್ನುವುದು ಈಗ ಫ್ಯಾಷನ್ ಆಗಿದೆ. ಅಂಬೇಡ್ಕರನ್ನು ಸ್ಮರಿಸುವ ಬದಲು ದೇವರನ್ನು ಸ್ಮರಿಸಿದರೆ ಸ್ವರ್ಗಕ್ಕೆ ಹೋಗುತ್ತಿದ್ದಿರಿ ಎಂದು ಹಿರಿಯರ ಚಾವಡಿಯಾದ ರಾಜ್ಯಸಭೆಯಲ್ಲಿ ಅಮಿತ್ ಶಾ ಹೇಳಿರುವದನ್ನು ಇಡೀ ದೇಶ ಖಂಡಿಸಬೇಕು ಎಂದು ಮುಖಂಡರು ಕರೆನೀಡಿದರು.

ಇಂತಹ ಕೆಟ್ಟ ಹೇಳಿಕೆ ನೀಡಿ ಕೋಟ್ಯಂತರ ಭಾರತೀಯರನ್ನು ಅವಮಾನಿಸಿರುವ ಅಮಿತ್ ಶಾರನ್ನು ಸಂಸದ ಸ್ಥಾನದಿಂದ ವಜಾಗೊಳಿಸಿ ಯುಎಪಿಎ ಕಾಯ್ದೆಯಡಿ ಬಂಧಿಸಬೇಕೆಂದು ಆಗ್ರಹಿಸಿ ರಾಷ್ಟ್ರಪತಿಗಳಿಗೆ ಮನವಿ ರವಾನಿಸಲಾಯಿತು.

ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರಮುಖರಾದ ದೇವಗಳ್ಳಿ ಸೋಮಶೇಖರ್, ನಾ ದಿವಾಕರ್, ಕೆ ಆರ್ ಸುಮತಿ, ಸವಿತಾ ಮಲ್ಲೇಶ್, ಟಿ ಗುರುರಾಜ್, ರತಿ ಮೇಡಂ, ಕೆ ಆರ್ ಗೋಪಾಲಕೃಷ್ಣ, ಶಂಭುಲಿಂಗ ಸ್ವಾಮಿ, ಹರಕುಮಾರ್ ಸಣ್ಣಸ್ವಾಮಿ, ಕಲ್ಲಳ್ಳಿ ಕುಮಾರ್, ಗುರುಸ್ವಾಮಿ, ಕಾಮ್ರೆಡ್ ಜಗನ್ನಾಥ್, ಎಸ್. ಎಫ್.ಐ.ನ ಕಾಮ್ರೆಡ್‌ಗಳು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.