ಮೈಸೂರು: ಸ್ವತಂತ್ರ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರು ಆರ್‌ಎಸ್‌ಎಸ್ ಹೊಗಳಿರುವುದು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳಿಗೆ ಧಕ್ಕೆ ತರುವಂತಿದೆ ಎಂದು ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷರಾದ ಮಂಚೇಗೌಡನ ಕೊಪ್ಪಲು ರವಿ ಟೀಕಿಸಿದ್ದಾರೆ.
ಆರ್‌ಎಸ್‌ಎಸ್ ಕಚೇರಿಯಲ್ಲಿ 2001ರವರೆಗೆ ರಾಷ್ಟ್ರಧ್ವಜ ಹಾರಿಸಿರಲಿಲ್ಲ, ಹಿಂದೂ ಧರ್ಮವನ್ನು ರಾಜಕೀಯ ಆಯುಧ ಮಾಡಿಕೊಂಡು ಭಾರತೀಯರನ್ನು ಒಡೆದಾಳಿರುವ ಆರ್‌ಎಸ್‌ಎಸ್ ಬಗ್ಗೆ ಪ್ರಧಾನಿ ಹೊಗಳುತ್ತಿರುವುದು ಹಲವು ಸಂದೇಹಗಳನ್ನು ಹುಟ್ಟಿಸಿದೆ ಎಂದು ಹೇಳಿದ್ದಾರೆ.
ಮುಂದಿನ ತಿಂಗಳಿಗೆ ಅವರಿಗೆ 75 ವರ್ಷ ತುಂಬಲಿದೆ. ಹೀಗಾಗಿ ಪ್ರಾಧಾನಿ ಹುದ್ದೆ ಉಳಿಸಿಕೊಳ್ಳುವ ತವಕ ಅವರಿಗೆ ಹೆಚ್ಚಾಗಿರಬಹುದು, ರಾಜ್ಯದಲ್ಲಿ ಯಡಿಯೂರಪ್ಪ ಅವರಿಗೆ 75 ವರ್ಷ ತುಂಬಿದಾಗ ರಾಜಕೀಯದಿಂದ ಕೆಳಗಿಳಿಸಿದ ಸೂತ್ರ ತಮಗೂ ಅನ್ವಯಿಸಬಹುದು ಎಂಬ ಭಯ ಪ್ರಧಾನಿಗೆ ಕಾಡುತ್ತಿದೆ ಎಂದು ಕುಟುಕಿದ್ದಾರೆ.
ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಕೇಳಿರುವ ಪ್ರಶ್ನೆಗಳಿಗೆ ಈವರೆಗೂ ಚುನಾವಣಾ ಆಯೋಗ ಉತ್ತರಿಸಿಲ್ಲ, ಆದರೆ, ರಾಹುಲ್‌ಗೆ ಪ್ರಮಾಣ ಪತ್ರ ಸಲ್ಲಿಸಲಿ ಎಂದು ತಾಕೀತು ಮಾಡುತ್ತಿದೆ. ಕೇರಳದಲ್ಲಿ ಮತ ಕಳವು ನಡೆದಿದೆ ಎಂದು ಬಿಜೆಪಿಯ ಅನುರಾಗ್ ಠಾಕೂರ್ ಆರೋಪಿಸಿದಾಗ ಅವರನ್ನು ಏಕೆ ಪ್ರಮಾಣ ಪತ್ರ ಕೇಳಲಿಲ್ಲ ಎಂದು ಮಂಚೇಗೌಡನ ಕೊಪ್ಪಲು ರವಿ ಪ್ರಶ್ನಿಸಿದ್ದಾರೆ.