post

ದಸರಾ ಗಜಪಡೆಗೆ‌ ತೂಕ ಪರಿಶೀಲನೆ:ಅಭಿಮನ್ಯು ಬಲಭೀಮ

ಮೈಸೂರು:ನಾಡ ಹಬ್ಬ ದಸರಾ ಮಹೋತ್ಸವ ಪಾಲ್ಗೊಳ್ಳುತ್ತಿರುವ ದಸರಾ ಗಜಪಡೆಗೆ ಇಂದು ತೂಕ ಪರಿಶೀಲನೆ ಮಾಡಲಾಯಿತು.

ಆ. 21ರಂದು ಕಾಡಿನಿಂದ ನಾಡಿಗೆ ಆಗಮಿಸಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳಿಗೆ ನಗರದ ಧನ್ವಂತ್ರಿ ರಸ್ತೆಯಲ್ಲಿರುವ ಶ್ರೀನಿವಾಸ ವೇ ಬ್ರಿಡ್ಜ್‌ನಲ್ಲಿ ತೂಕ ಪರೀಕ್ಷೆ ನಡೆಯಿತು.

ತೂಕ ಪರಿಶೀಲನೆ ನಂತರ ಆನೆಗಳಿಗೆ ಪ್ರತಿನಿತ್ಯ ಪೌಷ್ಟಿಕ ಆಹಾರ ಪದಾರ್ಥ ನೀಡಲಾಗುತ್ತದೆ.

ಬಳಿಕ ಜಂಬೂ ಸವಾರಿ ಮೆರವಣಿಗೆಗಾಗಿ ತಾಲೀಮು ನಡೆಯುತ್ತದೆ.

ಬೆಳಗ್ಗೆ ಸಂಜೆ ಎರಡು ಬಾರಿ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ನಡೆಯಲಿದೆ.

ನಗರದ ಸದ್ದುಗದ್ದಲಕ್ಕೆ ವಿಚಲಿತವಾಗದಂತೆ ಆನೆಗಳಿಗೆ ತರಬೇತಿ ನೀಡುವುದೇ ತಾಲೀಮಿನ ಉದ್ದೇಶವಾಗಿದೆ.

ಮತ್ತಿಗೋಡು ಕ್ಯಾಂಪ್ ನಲ್ಲಿ‌ ಮಹೇಂದ್ರ, ಭೀಮ, ಏಕಲವ್ಯ ಆನೆಯನ್ನು ಪರಿಶೀಲಿಸುತ್ತಿರುವ ಡಿಸಿಎಫ್ ಶರಣಬಸಪ್ಪ‌ ಅವರು ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳ ತೂಕದ ವಿವರ ನೀಡಿದರು.

ಅಭಿಮನ್ಯು: 5560 ಕೆಜಿ, ಭೀಮ : 4945 ಕೆಜಿ, ಏಕಲವ್ಯ : 4730 ಕೆಜಿ, ಕಂಜನ್ : 4515 ಕೆಜಿ, ಧನಂಜಯ : 5155 ಕೆಜಿ, ಲಕ್ಷ್ಮಿ : 2480 ಕೆಜಿ, ವರಲಕ್ಷ್ಮಿ : 3495 ಕೆಜಿ, ರೋಹಿತ : 3625 ಕೆಜಿ, ಗೋಪಿ : 4970 ಕೆಜಿ.

ತೂಕದಲ್ಲಿ ಕ್ಯಾಪ್ಟನ್ ಅಭಿಮನ್ಯು ನಂಬರ್ 1 ಆಗಿದ್ದು ತಾನು‌ ಬಲಭೀಮ ಎಂಬುದನ್ನು ಸಾಬೀತು ಪಡಿಸಿದ್ದಾನೆ.

ಆನೆಗಳ ಆರೋಗ್ಯದ ಬಗ್ಗೆ ತೀವ್ರ ನಿಗಾ ಹರಿಸಲಾಗಿದೆ. ಆನೆಗಳಿಗೆ‌ ಅವುಗಳ ತೂಕದ ಪ್ರಕಾರ ಪೌಷ್ಟಿಕ ಆಹಾರ ನೀಡಲಾಗುತ್ತದೆ.

ದಸರಾಗೂ ಮುನ್ನ ಮತ್ತೆ ಆನೆಗಳ ತೂಕ ಪರೀಕ್ಷೆ ಮಾಡುತ್ತೇವೆ,ಎಲ್ಲಾ ಆನೆಗಳ ಆರೋಗ್ಯ ಚೆನ್ನಾಗಿದೆ, ನಾಳೆಯಿಂದಲೇ ಗಜಪಡೆಗಳ ತಾಲೀಮು ಆರಂಭವಾಗಲಿದೆ ಎಂದು ಮೈಸೂರಿನಲ್ಲಿ ಡಿಸಿಎಫ್ ಡಾ. ಪ್ರಭುಗೌಡ ಅವರು ಮಾಧ್ಯಮದವರಿಗೆ ತಿಳಿಸಿದರು.

ದಸರಾ ಗಜಪಡೆಗೆ‌ ತೂಕ ಪರಿಶೀಲನೆ:ಅಭಿಮನ್ಯು ಬಲಭೀಮ Read More

ಜಾತಿ ವ್ಯವಸ್ಥೆ ಕಾರಣದಿಂದ ಬಹು ಜನರು ಶಿಕ್ಷಣದಿಂದ ವಂಚಿತರಾದರು:ಸಿಎಂ

ಬೆಂಗಳೂರು: ಧರ್ಮ-ಜಾತಿ ಹೆಸರಲ್ಲಿ ಸಮಾಜವನ್ನು ಒಡೆಯುತ್ತಾ ಹೋದ ಹಾಗೆ ಅಸಮಾನತೆ ಕೂಡಾ‌ ಹೆಚ್ಚುತ್ತಾ ಹೋಗುತ್ತದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಗಾಂಧಿ ಸ್ಮಾರಕ ನಿಧಿಯ 75ನೇ ವರ್ಷದ ಸಂಸ್ಮರಣೆ ಹಿನ್ನೆಲೆಯಲ್ಲಿ ಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ 21ನೇ ಶತಮಾನಕ್ಕೆ ಮಹಾತ್ಮಗಾಂಧೀಜಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಸಿಎಂ ಮಾತನಾಡಿದರು.

ಜಾತಿ ವ್ಯವಸ್ಥೆಯಿಂದ ಬಹು ಜನರು ಶಿಕ್ಷಣದಿಂದ ವಂಚಿತರಾದರು,ಹಾಗಾಗಿ ಅಸಮಾನತೆ ಹೆಚ್ಚಾಯಿತು ವಿದ್ಯಾವಂತರೇ ಹೆಚ್ಚೆಚ್ಚು ಜಾತಿವಾದಿಗಳಾಗುತ್ತಿರುವುದು ದುರಂತ,ಜಾತಿ ಅಸಮಾನತೆಯ ಪೋಷಕರೇ ಮಹಾತ್ಮಗಾಂಧಿಯವರನ್ನು ಕೊಂದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗಾಂಧೀಜಿ ವಿಚಾರಗಳು, ಸಮಾಜಕ್ಕೆ ನೀಡಿದ ಮಾರ್ಗದರ್ಶನಗಳು 20ನೇ ಶತಮನಕ್ಕೆ ಮಾತ್ರ ಸೀಮಿತವಾಗಿಲ್ಲ. ಈಗಿನ ಕಾಲಕ್ಕೂ ಪ್ರಸ್ತುತವಾಗಿವೆ ಎಂದು ಸಿಎಂ ತಿಳಿಸಿದರು.

ಮನುಷ್ಯ ತನ್ನ ನೆಮ್ಮದಿಗಾಗಿ ಬೇರೆ ಗ್ರಹಗಳನ್ನು ಹುಡುಕಿಕೊಂಡು ಹೋಗುವಂತಾಗಬಾರದು ಎನ್ನುವ ಸ್ಟೀಫನ್ ಹಾಕಿಂಗ್ ಅವರ ಮಾತನ್ನು ಪ್ರಸ್ತಾಪಿಸಿ, ಮನುಷ್ಯ ಮನುಷ್ಯರ ನಡುವೆ ಸಹಿಷ್ಣುತೆ ರೂಢಿಸಿಕೊಳ್ಳದಿದ್ದರೆ ಸರ್ವನಾಶವಾಗುತ್ತದೆ. ಕೋಮು ಭಾವನೆ ಹೀಗೇ ಬೆಳೆದರೆ ಕವೆಂಪು ಅವರ ವಿಶ್ವ ಮಾನವ ಆಶಯ ಈಡೇರುವುದು ಕಷ್ಟವಾಗುತ್ತದೆ ಎಂದು ಸಿದ್ದು ಅಭಿಪ್ರಾಯ ಪಟ್ಟರು.

ಬಹಳ ಮಂದಿ ಶಿಕ್ಷಿತರೇ ಕಂದಾಚಾರ, ಕರ್ಮ ಸಿದ್ಧಾಂತ, ಮೌಡ್ಯವನ್ನು ಆಚರಿಸುತ್ತಾರೆ. ಇದಕ್ಕೆ ಸರಿಯಾದ ವೈಜ್ಞಾನಿಕ ಶಿಕ್ಷಣದ ಕೊರತೆಯೇ ಕಾರಣ. 850 ವರ್ಷಗಳ ಹಿಂದೆಯೇ ಬಸವಾದಿ ಶರಣರು ಕರ್ಮ ಸಿದ್ಧಾಂತವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು. ಆದರೆ ಈಗಿನ ಕೆಲವು ಶಿಕ್ಷಿತರೇ ಕರ್ಮ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನೆಹರೂ ಅವರು ವೈಜ್ಞಾನಿಕ ಮತ್ತು ವೈಚಾರಿಕ ಮಾರ್ಗದಲ್ಲಿ ಸಮಾಜವನ್ನು ಸನ್ನದ್ದಗೊಳಿಸಿ ದೇಶವನ್ನು ಮುನ್ನಡೆಸುತ್ತಿದ್ದರು ಎಂದರು.

ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ಈಡೇರಿಸಬೇಕಾಗಿದೆ.‌ ಗಾಂಧಿಯವರ ಆಶಯದಂತೆ ರಾತ್ರಿ 12 ಗಂಟೆಗೂ ನಮ್ಮ ಹೆಣ್ಣು ಮಕ್ಕಳು ನಿರ್ಭಯದಿಂದ ಓಡಾಡುವಂತಾಗಬೇಕಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷರಾದ ರಾಮಚಂದ್ರ ರಾಹಿ, ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಕಾರ್ಯಾಧ್ಯಕ್ಷರಾದ ವಿಶುಕುಮಾರ್ , ನವದೆಹಲಿ ಸ್ಮಾರಕ ನಿಧಿ ಅಧ್ಯಕ್ಷ ಸಂಜೋಯ್ ಸಿಂಗ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಜಾತಿ ವ್ಯವಸ್ಥೆ ಕಾರಣದಿಂದ ಬಹು ಜನರು ಶಿಕ್ಷಣದಿಂದ ವಂಚಿತರಾದರು:ಸಿಎಂ Read More

ರಾಜ್ಯಪಾಲ ಸಿ ಎಚ್ ವಿಜಯಶಂಕರ್ ಗೆ ಶುಭ ಕೋರಿದ ತನ್ವೀರ್ ಸೇಠ್

ಮೈಸೂರು: ಮೈಸೂರಿನ ಊಟಿ ರಸ್ತೆಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಆಗಮಿಸಿದ ಮೇಘಾಲಯ ರಾಜ್ಯಪಾಲರಾದ ಸಿ. ಎಚ್ ವಿಜಯಶಂಕರ್ ರವರಿಗೆ ಮಾಜಿ ಸಚಿವರು ಹಾಗೂ ಶಾಸಕರಾದ ತನ್ವೀರ್ ಸೇಠ್ ಶುಭ ಕೋರಿದರು.

ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ವತಿಯಿಂದ ಇಂದು ವಿಜಯಶಂಕರ್ ಅವರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು,ಹಾಗಾಗಿ ಆಶ್ರಮಕ್ಕೆ ಭೇಟಿ ನೀಡಿದ ಅವರನ್ನು ತನ್ವೀರ್ ಸೇಠ್ ಅವರು ಸ್ವಾಗತಿಸಿ ಹೂವಿನ ಹಾರ ಹಾಕಿ ಶುಭ‌ ಹಾರೈಸಿದರು.

ಈ ವೇಳೆ ಶಾಸಕರಾದ ಟಿ.ಎಸ್ ಶ್ರೀವತ್ಸ , ಬಿಜೆಪಿ ಹಿರಿಯ ಮುಖಂಡರಾದ ಮಾರುತಿ ರಾವ್ ಪವರ್ ,ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಎಂ ಆರ್ ಬಾಲಕೃಷ್ಣ, ಶಂಕರ್ ನಾರಾಯಣ ಶಾಸ್ತ್ರಿ, ಹೊಯ್ಸಳ ಸಂಘದ ನಿರ್ದೇಶಕರಾದ ಪ್ರಶಾಂತ್ ಹಾಗೂ ಗಣಪತಿ ಸಚ್ಚಿದಾನಂದ ಆಶ್ರಮದ ಸಿದ್ದಾರ್ಥ, ರಾಜು ಸೇರಿದಂತೆ ಸ್ವಯಂಸೇವಕರು ಹಾಜರಿದ್ದರು.

ರಾಜ್ಯಪಾಲ ಸಿ ಎಚ್ ವಿಜಯಶಂಕರ್ ಗೆ ಶುಭ ಕೋರಿದ ತನ್ವೀರ್ ಸೇಠ್ Read More

ನಮ್ಮ ನಾಡಿನ ಹಿರಿಮೆ, ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತೇನೆ:ರಾಜ್ಯಪಾಲ ಸಿ.ಹೆಚ್ ವಿಜಯಶಂಕರ್

ಮೈಸೂರು,:ಮೇಘಾಲಯ ರಾಜ್ಯಪಾಲರಾದ ಸಿ.ಎಚ್.ವಿಜಯಶಂಕರ್ ಅವರನ್ನು ಶ್ರೀ ‌ಗಣಪತಿ ಸಚ್ಚಿದಾನಂದ ಆಶ್ರಮದ ವತಿಯಿಂದ ಕಿರಿಯ ಶ್ರೀಗಳಾದ ಶ್ರೀ ದತ್ತ‌ ವಿಜಯಾನಂದ ತೀರ್ಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಾಗರೀಕ ಅಭಿನಂದನಾ ಸಮಿತಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿ. ಎಚ್ ವಿಜಯಶಂಕರ್ ಅವರು ನಾನು ಮುಕ್ತ ಮನಸ್ಸಿನಿಂದ ಸಾಂವಿಧಾನಿಕ ಹುದ್ದೆಯನ್ನು ನಿಭಾಯಿಸುತ್ತೇನೆ ನಮ್ಮ ನಾಡಿನ ಹಿರಿಮೆ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತೇನೆ ಎಂದು ಹೇಳಿದರು.

ನಾನು ರಾಜಪಾಲನಾಗಿರುವುದು ಮೇಘಾಲಯಕ್ಕೆ. ಅಲ್ಲಿ ಮಹಿಳೆಯರಿಗೆ ಅತ್ಯುನ್ನತ ಸ್ಥಾನವಿದೆ, ಮಹಿಳೆಯೇ ಮನೆಯ ಯಜಮಾನಿ, ಅಂತಹ ಉತ್ತಮವಾದ ಗೌರವ ಸ್ಥಾನ ಮಹಿಳೆಯರಿಗೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಮ್ಮ ರಾಜ್ಯದಿಂದ ಬೇರೆ ರಾಜ್ಯಗಳಲ್ಲಿ ರಾಜ್ಯಪಾಲರಾಗಿ ಹುದ್ದೆ ನಿಭಾಯಿಸಿದ ಮಹನೀಯರ ಮಾದರಿಯನ್ನು ಅನುಸರಿಸುತ್ತೇನೆ ಎಂದು ಎಸ್.ಎಂ ಕೃಷ್ಣ ಮತ್ತು ಮೈಸೂರಿನ ಮಹಾರಾಜರು ಮತ್ತಿತರರನ್ನು ವಿಜಯಶಂಕರ್ ಸ್ಮರಿಸಿದರು.

ರಾಜ್ಯಪಾಲ ಹುದ್ದೆ ಸಿಕ್ಕಿದ್ದಕ್ಕೆ ಕೃತಜ್ಞತೆ ಸಲ್ಲಿಸಲು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದೆ.ಆಗ ಅವರು ರಾಜ್ಯಪಾಲ ಹುದ್ದೆಯ ಘನತೆಯನ್ನು ಎತ್ತಿ ಹಿಡಿಯಬೇಕು,ರಾಜಭವನಕ್ಕೆ ಸೀಮಿತವಾಗದೆ,ಜನರ‌ ಮಧ್ಯೆ‌ ಬರಬೇಕು,ಅವರ ಸಮಸ್ಯೆ ಆಲಿಸಬೇಕು,ಬಾರ್ಡರ್ ಗಳಿಗೆ ಹೋಗಿ ಅಲ್ಲಿನ ಸಮಸ್ಯೆಗಳನ್ನು ನೋಡಿ ಪರಿಹರಿಸಬೇಕು ಎಂದು ಸಲಹೆ ನೀಡಿದ್ದಾರೆ ಎಂದು ಹೇಳಿದರು.

ನನಗೆ ಮೇಘಾಲಯ ರಾಜ್ಯಪಾಲ ಹುದ್ದೆ ಸಿಕ್ಕ ಕೂಡಲೇ ನನ್ನ ಶ್ರೀಮತಿಯವರು ನಿಮಗೆ ಈ ನಾಡಿನ ಋಣವನ್ನು ಇನ್ನೂ ತೀರಿಸಲು ಆಗಿಲ್ಲ ಶಾಸಕರಾದಿರಿ, ಸಚಿವರಾದಿರಿ, ವಿಧಾನ ಪರಿಷತ್ ಸದಸ್ಯರಾದಿರಿ ಆದರೆ ಯಾವುದೇ ಋಣವನ್ನು ನೀವು ತೀರಿಸಿಲ್ಲ ಈಗ ಮೇಘಾಲಯ ರಾಜ್ಯಪಾಲರಾಗಿದ್ದೀರಿ.ಅಲ್ಲಿನ ಋಣ ತೀರಿಸಿ ಋಣಮುಕ್ತರಾಗಿ ಬನ್ನಿ ಎಂದು ತಿಳಿಸಿದ್ದಾರೆ ಎಂದು ವೇದಿಕೆಯಲ್ಲಿ ತಮ್ಮ ಶ್ರೀಮತಿಯವರ ಆಶಯವನ್ನು ರಾಜ್ಯಪಾಲರು ತಿಳಿಸಿದರು.

ಶುದ್ಧ ಗಾಳಿ ಶುದ್ಧ ನೀರು,ಮೆಡಿಕಲ್ ಸೈನ್ಸ್ ಮತ್ತು ಧಾರ್ಮಿಕವಾಗಿ ನಮ್ಮ ದೇಶದಲ್ಲಿ ಮೇಘಾಲಯ ಮೊದಲ ಸ್ಥಾನದಲ್ಲಿದೆ ಎಂದು ಕೊಂಡಾಡಿದರು.

ಆಚಾರ ವಿಚಾರ ಎಲ್ಲದರಲ್ಲೂ ಮೇಘಾಲಯ ಮುಂದಿದೆ ನಮ್ಮ ರಾಜ್ಯದಿಂದ ವಿದ್ಯಾರ್ಥಿಗಳು ನಾಡಿನ ಜನರು ಮೇಘಾಲಯಕ್ಕೆ ಬರಬೇಕೆಂದು ಆಹ್ವಾನಿಸಿದರು.

ಮೇಘಾಲಯದಲ್ಲಿ ಮತ್ತೊಂದು ವಿಶೇಷವೆಂದರೆ ಅಲ್ಲಿ ಮನೆಯ ಮಗಳಿಗೆ ಪಿತ್ರಾರ್ಜಿತ ಆಸ್ತಿ ಹೋಗುತ್ತದೆ ಅಂತಹ ಒಂದು ಒಳ್ಳೆಯ ಕಾನೂನು ಅಲ್ಲಿರುವುದು ವಿಶೇಷ ಎಂದು ತಿಳಿಸಿದರು.

ನಮ್ಮ ನಾಡಿನ ಗೌರವಕ್ಕೆ ಚ್ಯುತಿ ತರುವಂತಹ ಕೆಲಸವನ್ನು ನಾನು ಮಾಡುವುದಿಲ್ಲ ನನಗೆ ಜನ್ಮ ಜನ್ಮದ ಪುಣ್ಯ ಅಲ್ಲಿನ ರಾಜ್ಯಪಾಲ ಹುದ್ದೆ ಸಿಕ್ಕಿದೆ, ನಮ್ಮ ನಾಡಿನ ಕೀರ್ತಿಯನ್ನು ಹೆಚ್ಚಿಸುತ್ತೇನೆ ನಮ್ಮ ನಾಡಿನ ಋಣವನ್ನು ತೀರಿಸುವಂತಹ ಕೆಲಸ ಮಾಡುತ್ತೇನೆ ಎಂದು ಸಿ ಎಚ್ ವಿಜಯಶಂಕರ್ ತಿಳಿಸಿದರು.

ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿ,
ರಾಜ್ಯಪಾಲರ ಹುದ್ದೆ ಸುಲಭವಾದುದಲ್ಲ ಅದು ಜಟಿಲ, ಕೇವಲ ಸಹಿ ಹಾಕುವುದಲ್ಲ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸುವಂತಾಗಬೇಕು ಎಂದು ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರು ಹೇಳಿರುವುದು ನಿಜ. ಅದರಂತೆ ಸಾಂವಿಧಾನಿಕ ಹುದ್ದೆಯನ್ನು ಚೆನ್ನಾಗಿ ನಿಭಾಯಿಸಿ ಮೈಸೂರಿಗೆ ಮತ್ತು ಕರ್ನಾಟಕಕ್ಕೆ ಇನ್ನೂ ಹೆಚ್ಚು ಒಳ್ಳೆಯ ಹೆಸರನ್ನು ತರುವಂತಾಗಲಿ ಎಂದು ಹಾರೈಸಿದರು.

ರಾಜ್ಯಪಾಲರಾಗಿ ರಾಜಭವನ ಪ್ರವೇಶಿಸಿದ ಕೂಡಲೇ ರಾಜಭವನದಲ್ಲಿ ಇನ್ನು ಮುಂದೆ ಮಧ್ಯ,ಮಾಂಸ ಸೇವನೆ ಇರುವುದಿಲ್ಲ ಎಂದು ವಿಜಯಶಂಕರ್ ಅವರು ಹೇಳಿ ಅದನ್ನು ಆಚರಣೆಗೆ ತರುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ.ಆದರೆ ಆಹಾರ ಪದ್ಧತಿ ಅವರವರ ನಂಬಿಕೆಗೆ ಬಿಟ್ಟದ್ದು ಆದರೆ ಅವರ ಪದ್ಧತಿಯನ್ನು ಇಂಪ್ಲಿಮೆಂಟ್ ಮಾಡುತ್ತಿರುವುದು ಅವರ ಧೈರ್ಯಕ್ಕೆ ಮೆಚ್ಚುಗೆ ಇರಬೇಕು ಎಂದು ಶ್ರೀಗಳು ಹೇಳಿದರು.

ವಿಜಯಶಂಕರ್ ಅವರು 1990 ರಿಂದ ನಮ್ಮ ಆಶ್ರಮಕ್ಕೆ ಬರುತ್ತಿದ್ದಾರೆ ಈಗ ಅವರು ರಾಜ್ಯಪಾಲರಾಗಿರುವುದು ನಮ್ಮ ಆಶ್ರಮದವರೇ ರಾಜ್ಯಪಾಲರಾಗಿದ್ದಾರೇನೊ ಎನಿಸುತ್ತಿದೆ,ಅತ್ಯಂತ ಸಂತಸವಾಗುತ್ತಿದೆ ಅವರಿಗೆ ನಮ್ಮ ಆಶ್ರಮದಲ್ಲಿಯೇ ನಾಗರಿಕ ಅಭಿನಂದನೆ ಮಾಡುತ್ತಿರುವುದು ನಿಜಕ್ಕೂ ಒಳ್ಳೆಯ ಕಾರ್ಯ,ನಮ್ಮ ಗಣಪತಿ ಸಚ್ಚುದಾನಂದ ಸ್ವಾಮೀಜಿಯವರ ಆಶಯವೂ ಇದೇ ಆಗಿತ್ತು, ಈ ಕಾರ್ಯವನ್ನು ಎಲ್ಲರೂ ಅಚ್ಚುಕಟ್ಟಾಗಿ ನಡೆಸಿ ಕೊಟ್ಟಿದ್ದಾರೆ ಎಂದು ಮೆಚ್ಚುಗೆ‌ ವ್ಯಕ್ತಪಡಿಸಿದರು.

ನಾವು ಮಾಡುವ ಒಳ್ಳೆಯ ಕೆಲಸಕ್ಕೆ ಭಗವಂತನ ಅನುಗ್ರಹ ಇದ್ದೇ ಇರುತ್ತದೆ ಎಂಬುದಕ್ಕೆ ವಿಜಯಶಂಕರ್ ಉದಾಹರಣೆಯಾಗಿದ್ದಾರೆ ಎಂದು ಶ್ರೀಗಳು ತಿಳಿಸಿದರು.

ಸನ್ಮಾನ ಸಮಾರಂಭಕ್ಕೂ ಮೊದಲು ಸಿ.ಎಚ್.ವಿಜಯಶಂಕರ್ ಅವರು ಅವಧೂತ ದತ್ತಪೀಠದ ಆವರಣದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ ಹಾಗೂ ಕಾರ್ಯಸಿದ್ದಿ ಆಂಜನೇಯಸ್ವಾಮಿ ದೇವಾಲಯ,ಶ್ರೀದತ್ತ ಸನ್ನಿಧಿಗೆ ಭೇಟಿ ನೀಡಿ ದೇವರುಗಳ‌ ದರ್ಶನ ಪಡೆದುಕೊಂಡರು.

ಬಿಜೆಪಿ ಮುಖಂಡ,ಮಾಜಿ ಶಾಸಕ ಮಾರುತಿರಾವ್ ಪವಾರ್ ಗಣ್ಯರಿಗೆ ಸ್ವಾಗತ ಕೋರಿದರು.ಮಾಜಿ‌ ಶಾಸಕ ವೈ.ಎಸ್.ವಿ ದತ್ತ‌ ಅಭಿನಂದನಾ ನುಡಿ ಆಡಿದರು.

ಕಾರ್ಯಕ್ರಮದಲ್ಲಿ ಖ್ಯಾತ ಹಿರಿಯ ಸಾಹಿತಿ,ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರಾದ‌ ಎಸ್.ಎಲ್.ಭೈರಪ್ಪ,
ಮತ್ತೊಬ್ಬ ಹಿರಿಯ ಸಾಹಿತಿ ಪ್ರಧಾನ್ ಗುರುದತ್ತ, ಶಾಸಕರಾದ ಶ್ರೀವತ್ಸ,ತನ್ವೀರ್‌ಸೇಠ್,ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್,ಗೋಪಾಲಗೌಡ ಆಸ್ಪತ್ರೆಯ ಡಾ.ಶೃಶೃತ್ ಗೌಡ
ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ನಮ್ಮ ನಾಡಿನ ಹಿರಿಮೆ, ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತೇನೆ:ರಾಜ್ಯಪಾಲ ಸಿ.ಹೆಚ್ ವಿಜಯಶಂಕರ್ Read More

ಕನ್ನಡ ಭಾಷೆ, ಬೆಳವಣಿಗೆ,ಸಮಾಜ ಸುಧಾರಣೆಗೆ ಬಸವಣ್ಣ ನವರ ವಚನಗಳು ಜೀವತುಂಬಿದೆ:ಗಿರೀಶ್

ಮೈಸೂರು:ಕನ್ನಡ ಭಾಷೆ,ಬೆಳವಣಿಗೆ,
ಸಮಾಜ ಸುಧಾರಣೆಗೆ ಬಸವಣ್ಣ ನವರ ವಚನಗಳು ಜೀವತುಂಬಿದೆ ಎಂದು ಜೀವಧಾರ ರಕ್ತನಿಧಿ ಕೇಂದ್ರದ ಗಿರೀಶ್
ತಿಳಿಸಿದರು.

ಮೈಸೂರು ದಸರಾ ವಸ್ತುಪ್ರದರ್ಶನದ ಕರ್ನಾಟಕ ಸಂಭ್ರಮ50 ಸಾಂಸ್ಕೃತಿಕ ವೇದಿಕೆಯಲ್ಲಿ ಕರ್ನಾಟಕ‌ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ರವರ ವಚನಗಾಯನ ಹಾಗೂ ನೃತ್ಯರೂಪಕ ಕಾರ್ಯಕ್ರಮವನ್ನ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಬದಲಾವಣೆಗಾಗಿ ಅಸಮಾನತೆ ಹೋಗಬೇಕು, ಪ್ರತಿಯೊಬ್ಬರೂ ಸ್ವಾಭಿಮಾನದಿಂದ ಬದುಕುವ ವ್ಯವಸ್ಥೆ ನಿರ್ಮಾಣವಾಗಬೇಕು ಎಂಬುದು ಬಸವಣ್ಣ ರವರ ಸಂಕಲ್ಪವಾಗಿತ್ತು.

ಬಸವಣ್ಣರವರು ಆಡು ಮಾತಿನಲ್ಲೇ ಜನರಿಗೆ ಅರ್ಥವಾಗುವ ರೀತಿಯಲ್ಲಿ ವಚನ ಸಾಹಿತ್ಯ ರಚಿಸಿ ಕನ್ನಡಭಾಷೆಯ ಬೆಳವಣಿಗೆಗೆ ಶ್ರಮಿಸಿ ವಿಶ್ವಗುರುವಾದರು, ಸಮಾಜದಲ್ಲಿ ಇರುವ ಅಂಕುಡೊಂಕು ತಾರತಮ್ಯಗಳನ್ನ ಸರಿಪಡಿಸಿ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದರು ಎಂದು ತಿಳಿಸಿದರು.

ಬಸವಣ್ಣರವರು 12ನೇ ಶತಮಾನದಲ್ಲೆ ಅನುಭವ ಮಂಟಪ ಸ್ಥಾಪನೆ ಮಾಡಿ ಜನಪರ ಆಡಳಿತ ನಿರ್ದೇಶಿಸಿದ್ದರು,ಬಸವಣ್ಣ ನವರು ಒಂದು ಜಾತಿಗೆ ಒಂದು ಪ್ರದೇಶಕ್ಕೆ ಸೀಮಿತರಲ್ಲ ಅವರು ಇಡೀ ವಿಶ್ವಕ್ಕೆ ಗುರುವಾಗಿದ್ದಾರೆ ಎಂದು ಗಿರೀಶ್ ತಿಳಿಸಿದರು.

ಇದೇ ಸಂಧರ್ಭದಲ್ಲಿ ವಿಶ್ವಗುರು ಬಸವಣ್ಣ ಪ್ರಶಸ್ತಿಗೆ ಭಾಜನರಾದ , ಮಹದೇವಪ್ರಸಾದ್, ಕಂಡೇಶ್, ಮಲ್ಲಿಗೆ ವೀರೇಶ್, ಸರ್ವಮಂಗಳ, ಪುಷ್ಪಲತಾ ರವರನ್ನ ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಕರ್ನಾಟಕ ಸಂಭ್ರಮ ವ್ಯವಸ್ಥಾಪಕ ಕೃಷ್ಣ, ಕರ್ನಾಟಕ ಸುಗಮಸಂಗೀತ ಪರಿಷತ್ ಅಧ್ಯಕ್ಷ ಡಾ. ನಾಗರಾಜ ವಿ ಭೈರಿ, ನಿರೂಪಕ ಅಜಯ್ ಶಾಸ್ತ್ರಿ, ಬೆಟ್ಟೆಗೌಡ, ಗಾಯಕ ಅಮ್ಮರಾಮಚಂದ್ರ, ಮಹಲಿಂಗು, ಸಿರಿಬಾಲು, ಸದಾಶಿವ ಮತ್ತಿತರರು ಹಾಜರಿದ್ದರು.

ಕನ್ನಡ ಭಾಷೆ, ಬೆಳವಣಿಗೆ,ಸಮಾಜ ಸುಧಾರಣೆಗೆ ಬಸವಣ್ಣ ನವರ ವಚನಗಳು ಜೀವತುಂಬಿದೆ:ಗಿರೀಶ್ Read More

ಕದನ ವೀರ ಚಿತ್ರಕ್ಕೆ‌ ಸಿ. ಹೆಚ್ ವಿಜಯಶಂಕರ್, ಯದುವೀರ್ ಶುಭ ಹಾರೈಕೆ

ಮೈಸೂರು, ಆ.23: ಯೋಧರ ತ್ಯಾಗ, ಬಲಿದಾನ, ಶೌರ್ಯದ ಬಗ್ಗೆ ನಿರ್ಮಾಣ ಆಗಿರುವ ಕದನ ವೀರ ಚಲನ ಚಿತ್ರಕ್ಕೆ ರಾಜ್ಯಪಾಲ ಸಿ. ಹೆಚ್ ವಿಜಯಶಂಕರ್ ಮತ್ತು ಸಂಸದ ಯದುವೀರ್ ಶುಭ ಹಾರೈಸಿದರು.

ಭವಿಷ್ಯದ ಸೈನಿಕರಾದ ಸೈನಿಕ ಅಕಾಡೆಮಿ (ರಿ) ಮೈಸೂರು ವತಿಯಿಂದ ಕದನ ವೀರ ಚಲನಚಿತ್ರ ನಿರ್ಮಾಣ ಮಾಡಲಾಗಿದೆ.

ಒಂದು ವರ್ಷಗಳ ಸತತ ಪ್ರಯತ್ನ ಪರಿಶ್ರಮದಿಂದ ಎಸ್‌ ಎ ಎಂ ಸಂಸ್ಥಾಪಕರು ಮತ್ತು ಎಕ್ಸ್ ಬ್ಲ್ಯಾಕ್ ಕ್ಯಾಟ್ ಕಮಾಂಡೋ ಶ್ರೀಧರ ಸಿ ಎಂ ಅವರ ಪ್ರೋತ್ಸಾಹದಿಂದ, ಸೈನಿಕರ ಮೇಲೆ ಅಪಾರ ಅಭಿಮಾನ ಇರುವ ಎಸ್‌ ಎ ಎಂ ಅಭ್ಯರ್ಥಿ ಜೀವನ ಚಿಕ್ಕಬಂಡಾರ ಅವರ ನಿರ್ದೇಶನ ಹಾಗೂ ನಿರ್ಮಾಪಕರಾದ ಅನಿತಾ ಶ್ರೀಧರ ಅವರ ಸಹಕಾರದಿಂದ ನನ್ನ ಮಣ್ಣು, ನನ್ನ ಜಲ, ನನ್ನ ಗಾಳಿ, ನನ್ನ ಜನ, ದೇಶ ಎಂಬ ಕಿಚ್ಚು ಯುವಪೀಳಿಗೆಗೆ ತಿಳಿಯಬೇಕೆಂದು ಈ ಚಿತ್ರ ನಿರ್ಮಿಸಲಾಗಿದೆ.

ಪೋಷಕರಿಗೆ ಹೆಚ್ಚಿಸಬೇಕೆಂಬ ಸೈನಿಕರ ತ್ಯಾಗ ಬಲಿದಾನ ಪ್ರತಿಯೊಬ್ಬರೂ ತಿಳಿಯಬೇಕು, ಸೈನಿಕರ ಸಾಹಸ ಸಾಧನೆಯು ಶಾಲೆಯ ಪಠ್ಯ ಪುಸ್ತಕಗಳಲ್ಲಿ ಪ್ರಕಟಿಸಬೇಕು, ತನಗಾಗಿ ಅಲ್ಲ, ತನ್ನವರಿಗಾಗಿ ಸೇವೆ ಮಾಡುತ್ತಿರುವ ಸೈನಿಕನಿಗೆ ಅಪಾರ ಗೌರವ ಸಿಗಬೇಕು, ಸೈನಿಕರಿಗೆ ಉತ್ಸಾಹ ಧೈರ್ಯ ಹೆಚ್ಚಿಸುವ ಕೆಲಸ ನಾವುಗಳು ಮಾಡಬೇಕೆಂಬ ಉದ್ದೇಶದಿಂದ ಈ ಚಲನ ಚಿತ್ರವನ್ನು ಭವಿಷ್ಯದ ಸೈನಿಕರಿಂದಲೇ ನಿರ್ಮಿಸಲಾಗಿದೆ.

ಈ ಕದನ ವೀರ ಚಲನ ಚಿತ್ರಕ್ಕೆ ಮೇಘಾಲಯ ರಾಜ್ಯಪಾಲರಾದ ಸಿ ಹೆಚ್ ವಿಜಯಶಂಕರ್ ಹಾಗೂ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿ ಶುಭ ಹಾರೈಸು ಎಸ್ ಎ ಎಂ ಅಭ್ಯರ್ಥಿಗಳಿಗೂ ಶುಭ ಕೋರಿದರು.

ಸೆಪ್ಟೆಂಬರ್ 1ರಂದು ಭಾನುವಾರ ಕರ್ನಾಟಕ ಕಲಾ ಮಂದಿರ ದಲ್ಲಿ ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ 5 ಕದನ ವೀರ‌‌ ಚಲನ ಚಿತ್ರದ ಶೋ ಇಡಲಾಗಿದೆ.

ಈ ಚಲನ ಚಿತ್ರದ ಟ್ರೇಲರ್ ನ್ನೂ YouTube channel Sainik Academy Mysuru ನಲ್ಲಿ ವೀಕ್ಷಿಸಬಹುದು ಎಂದು
ಸೈನಿಕ ಅಕಾಡೆಮಿ ಸಂಸ್ಥಾಪಕರಾದ ಶ್ರೀಧರ್ ಸಿ ಎಂ ತಿಳಿಸಿದ್ದಾರೆ.

ಕದನ ವೀರ ಚಿತ್ರಕ್ಕೆ‌ ಸಿ. ಹೆಚ್ ವಿಜಯಶಂಕರ್, ಯದುವೀರ್ ಶುಭ ಹಾರೈಕೆ Read More

ದಸರಾ ಕಳೆಗಟ್ಟುವಾಗಲೇ ಸ್ಫೋಟಕಗಳು ಪತ್ತೆ:ಮೈಸೂರಿನಲ್ಲಿ ಆತಂಕ

ಮೈಸೂರು, ಆ.23: ನಾಡ ಹಬ್ಬ ದಸರಾ ಮಹೋತ್ಸವ ಕಳೆಗಟ್ಟಲಾರಂಭಿಸಿರುವಾಗಲೇ ಮೈಸೂರಿನಲ್ಲಿ ಭಾರಿ ಸ್ಫೋಟಕ ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

ಮೈಸೂರು ಜಿಲ್ಲೆಯ ಟಿ.ನರಸಿಪುರ ತಾಲೂಕಿನ ಕೆಂಪಯ್ಯನಹುಂಡಿ ಸಮೀಪದ ಹೋಟೆಲ್ ನಲ್ಲಿ ಸ್ಫೋಟಕಗಳು ಪತ್ತೆಯಾಗಿವೆ.

ದುಷ್ಕರ್ಮಿಗಳು ನೀಲಿ ಬಣ್ಣದ ಬ್ಯಾಗ್ ನಲ್ಲಿ ಸ್ಫೋಟಕ ವಸ್ತುಗಳನ್ನು ಇಟ್ಟು ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಸ್ಫೋಟಕ ವಸ್ತುಗಳನ್ನು ಗಮನಿಸಿದ ಹೋಟೆಲ್ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಪೊಲೀಸ್ ಸಿಬ್ಬಂದಿ ಧಾವಿಸಿ ಸ್ಫೋಟಕಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.

ಟ್ಯೂಬ್ ಆಕಾರದಲ್ಲಿರುವ 9 ಸ್ಫೋಟಕಗಳು ಹಾಗೂ ಒಂದು ನಾಡ ಬಾಂಬ್ ಆಕಾರದ ವಸ್ತು ಪತ್ತೆಯಾಗಿದೆ.

ವಿಶ್ವ ವಿಖ್ಯಾತ ದಸರಾ ಮಹೋತ್ಸವ ಕಳೆಗಟ್ಟಲಾರಂಭವಾದ ಹೊತ್ತಲ್ಲೇ ಸ್ಫೋಟಕ ಪತ್ತೆಯಾಗಿರುವುದು ಮೈಸೂರಿಗರಲ್ಲಿ ಆತಂಕ ಸೃಷ್ಟಿಸಿದೆ.

ದಸರಾ ಕಳೆಗಟ್ಟುವಾಗಲೇ ಸ್ಫೋಟಕಗಳು ಪತ್ತೆ:ಮೈಸೂರಿನಲ್ಲಿ ಆತಂಕ Read More

ಶಾಲಾ ಮಕ್ಕಳ ಹಾಲಿನ ಪೌಡರ್ ಕದ್ದಿದ್ದ ಮುಖ್ಯ ಶಿಕ್ಷಕ ಅಮಾನತು

ಮೈಸೂರು, ಆ.23: ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ನೀಡಿದ್ದ ಹಾಲಿನ ಪೌಡರ್ ಪ್ಯಾಕೇಟ್ ಕದ್ದೊಯ್ದಿದ್ದ ಮುಖ್ಯ ಶಿಕ್ಷಕನನ್ನು ಅಮಾನತುಪಡಿಸಲಾಗಿದೆ.

ಎಚ್.ಡಿ.ಕೋಟೆ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯ ಮುಖ್ಯ ಶಿಕ್ಷಕ ಗಣೇಶ್ ನನ್ನು ಅಮಾನತು ಪಡಿಸಲಾಗಿದೆ.

ಇದೇ ಸೋಮವಾರ ಶಾಲೆಯಲ್ಲಿದ್ದ ಹತ್ತು ಹಾಲಿನ ಪೌಡರ್ ಪ್ಯಾಕೇಟ್ ಗಳನ್ನು ಕದ್ದೊಯ್ಯುತ್ತಿದ್ದಾಗ ಗ್ರಾಮಸ್ಥರೇ ಗಣೇಶ್ ನನ‌್ನು ರೆಡ್ ಹ್ಯಾಂಡ್ ಹ್ಯಾಂಡ್ ಆಗಿ ಹಿಡಿದಿದ್ದರು.

ದ್ವಿಚಕ್ರವಾಹನದ ಬ್ಯಾಗ್ ನಲ್ಲಿ 3 ಪ್ಯಾಕೇಟ್ ಮತ್ತು ಟೂಲ್ ಬಾಕ್ಸ್ ನಲ್ಲಿ 7 ಪ್ಯಾಕೇಟ್ ಸೇರಿ ಒಟ್ಟು 10 ಹಾಲಿನ ಪುಡಿ ಪ್ಯಾಕೇಟ್ ಕದ್ದೊಯ್ಯುತ್ತಿದ್ದಾಗ ಗ್ರಾಮದ ಜನರೇ ಗಣೇಶ್ ನನ್ನು ಹಿಡಿದಿದ್ದರು.

ಪಟ್ಟಣದ ನಿವಾಸಿ ಸಿಂಗರ್ ಸಿದ್ದರಾಜು ಮತ್ತಿತರರು ಶಿಕ್ಷಕನನ್ನು ಹಿಡಿದು ತರಾಟೆಗೆ ತೆಗೆದುಕೊಂಡಿದ್ದರು.

ಹಾಲಿನ ಪುಡಿ ಪ್ಯಾಕೇಟ್ ಗಳು
ಅವದಿ ಮೀರಿದ್ದರಿಂದ ಮನೆಗೆ ಕೊಂಡೊಯ್ಯುತ್ತಿದ್ದೆ ಎಂದು ಮುಖ್ಯ ಶಿಕ್ಷಕ ಗಣೇಶ್ ಸಮರ್ಥನೆ ನೀಡಿದ್ದ, ಆದರೆ ಪ್ಯಾಕೇಟ್ ಗಳನ್ನು ಪರಿಶೀಲನೆ ಮಾಡಿದಾಗ ಡಿಸೆಂಬರ್ 24 ರ ವರೆಗೂ ಅವಧಿ ಇರುವುದು ಬೆಳಕಿಗೆ ಬಂದಿತ್ತು.

ಸ್ಥಳಕ್ಕಾಗಮಿಸಿದ್ದ ಬಿ ಆರ್ ಸಿ ಕೃಷ್ಣಯ್ಯ ಮತ್ತು ಸಿಬ್ಬಂಧಿ ಪರಿಶೀಲನೆ ನಡೆಸಿ,
ಹಾಲಿನ ಪುಡಿ ಪ್ಯಾಕೇಟ್ ಸಮೇತ ದ್ವಿಚಕ್ರವಾಹನ ವಶಕ್ಕೆ ಪಡೆದಿದ್ದರು.

ನಂತರ ತಾಲೋಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿ ಗಣೇಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಕೃಷ್ಣಯ್ಯ ತಿಳಿಸಿದ್ದರು.

ಅವರು ಈ ಬಗ್ಗೆ ನೀಡಿದ್ದ ದೂರು ಆಧರಿಸಿ ಡಿಡಿಪಿ ಐ, ಶಿಕ್ಷಕ ಗಣೇಶ್ ನನ್ನು ಅಮಾನತುಮಾಡಿ ಆದೇಶ ಹೊರಡಿಸಿದ್ದಾರೆ.

ಶಾಲಾ ಮಕ್ಕಳ ಹಾಲಿನ ಪೌಡರ್ ಕದ್ದಿದ್ದ ಮುಖ್ಯ ಶಿಕ್ಷಕ ಅಮಾನತು Read More

ಅರಮನೆಯಲ್ಲಿ ಗಜಪಡೆಗೆ ಅದ್ದೂರಿ ಸ್ವಾಗತ

ಮೈಸೂರು,ಆ.23: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ‌ ಮೊದಲ ಹಂತದ ಗಜಪಡೆಯನ್ನು ಅರಮನೆಗೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ದಸರಾ ಗಜಪಡೆಯ ಆಗಮನದಿಂದ ಸಾಂಸ್ಕೃತಿಕ ನಗರಿಯಲ್ಲಿ ಈಗಾಗಲೇ ಹಬ್ಬದ ವೈಭವ ಕಳೆಗಟ್ಟಿದೆ.

ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಗಜಪಡೆಗೆ

ಮೈಸೂರು ಜಿಲ್ಲಾಡಳಿತ, ಅರಮನೆ ಮಂಡಳಿ ವತಿಯಿಂದ ಗಜಪಡೆಗೆ ಬೆಳಗ್ಗೆ 10.10 ರಿಂದ 10.30 ರ ಶುಭಗಳಿಗೆಯಲ್ಲಿ ಪೂಜೆ ಸಲ್ಲಿಸಿ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು.

ಮೈಸೂರಿನ ಅಶೋಕಪುರಂನ ಅರಣ್ಯಭವನದಲ್ಲಿ ತಂಗಿದ್ದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9
ಆನೆಗಳಿಗೆ ಇಲಾಖೆ ವತಿಯಿಂದ ಪುಜೆ ಸಲ್ಲಿಸಿ ಬೀಳ್ಕೊಡಲಾಯಿತು,
ನಂತರ ಅರಣ್ಯಭವನದಿಂದ ಕಾಲ್ನಡಿಗೆ ಮೂಲಕ ಅರಮನೆಗೆ ಗಜಪಡೆ ಆಗಮಿಸಿತು.

ಅಭಿಮನ್ಯು,ಏಕಲವ್ಯ, ಭೀಮ, ಕಂಜನ್, ಲಕ್ಷ್ಮೀ, ವರಲಕ್ಷ್ಮೀ, ರೋಹಿತ್, ಗೋಪಿ, ಧನಂಜಯ ಆನೆಗಳು ಅರಮನೆಗೆ ಆಗಮಿಸಿದ್ದು‌ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ರಾಜ ಬೀದಿಗಳಲ್ಲಿ ಸಾಗಿ ಬಂದ ದಸರಾ ಗಜಪಡೆ ಕಣ್ತುಂಬಿಕೊಳ್ಳಲು ಮೈಸೂರಿಗರು ಮುಗಿ ಬಿದ್ದುದು ಕಂಡುಬಂದಿತು.

ಗಜಪಡೆ‌ ಆಗಮನದ ವೇಳೆ ಶಾಸಕರಾದ ತನ್ವೀರ್ ಸೇಠ್, ಶಾಸಕರಾದ ಕೆ.ಹರೀಶ್ ಗೌಡ, ಶ್ರೀವತ್ಸಾ, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಜಿಪಂ ಸಿಇಒ ಕೆ.ಎಂ.ಗಾಯಿತ್ರಿ, ಎಸ್ ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಡಾ ಪಿ.ಶಿವರಾಜು, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕರಾದ ಎಂ.ಕೆ.ಸವಿತಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಅರಮನೆಯಲ್ಲಿ ಗಜಪಡೆಗೆ ಅದ್ದೂರಿ ಸ್ವಾಗತ Read More

ಸಾವಿರಾರು ನಿವೇಶನಗಳನ್ನು ಸಿಎಂ, ಬೆಂಬಲಿಗರು ಲೂಟಿ ಮಾಡಿದ್ದಾರೆ:ಅಶೋಕ್

ಮಂಡ್ಯ, ಆ. 23: ಮುಡಾ ಹಗರಣದಲ್ಲಿ 14 ನಿವೇಶನ ಅಷ್ಟೇ ಅಲ್ಲಾ ಸಾವಿರಾರು ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರು ಲೂಟಿ ಹೊಡೆದಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತೀವ್ರ ವಾಗ್ದಾಳಿ ನಡೆಸಿದರು.

ಈ ಹಗರಣದ ಹಿಂದೆ ಇರುವ ದೊಡ್ಡ ತಿಮಿಂಗಿಲಗಳು ಹೊರಬರಲು ಸಿಬಿಐ ತನಿಖೆ ಆಗಲೇಬೇಕು ಎಂದು ಒತ್ತಾಯಿಸಿದರು.

ಮಂಡ್ಯದಲ್ಲಿ ಮಾತನಾಡಿದ ಅವರು, ಹಗರಣದಲ್ಲಿ ಸಿಲುಕಿದಾಗ ಮಾತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಾತಿ ನೆನಪಾಗುತ್ತದೆ ವ್ಯಂಗ್ಯವಾಡಿದರು.

ಇವರು 14 ಸೈಟು ನುಂಗಿದ ಕೂಡಲೇ ಹಿಂಬಾಲಕರು ನೂರಾರು ಸೈಟುಗಳನ್ನು ಲಪಟಾಯಿಸಿದ್ದಾರೆ ಎಂದು ದೂರಿದರು.

ಸಿಎಂ ಹಿಂಬಾಲಕರಾದ ಮರಿಗೌಡರೇ ಪತ್ರ ಬರೆದು ಅಕ್ರಮವಾಗಿದೆ ಎಂದು ಹೇಳಿದ್ದಾರೆ, ಅದನ್ನು ಸಾಮಾಜಿಕ ಕಾರ್ಯಕರ್ತರೊಬ್ಬರು ಆರ್‌ಟಿಐ ಮೂಲಕ ಹೊರತೆಗೆದಾಗ ಎಲ್ಲವೂ ಬಯಲಾಗಿದೆ, ಆದರೆ ಸಿದ್ದರಾಮಯ್ಯ ಒಂದೂ ಸೈಟು ಅಕ್ರಮವಾಗಿ ಪಡೆದಿಲ್ಲ ಎಂದು ಹೇಳಿದ್ದಾರೆ ಇದಕ್ಕೆ ಏನನ್ನಬೇಕು ಎಂದು ‌ಅಶೋಕ್ ವಾಗ್ದಾಳಿ ನಡೆಸಿದರು.

ಈಗ ವೈಟ್‌ನರ್‌ ಅಕ್ರಮ ಬಯಲಾಗಿದೆ, ಏನಾದರೂ ತಪ್ಪಾಗಿದ್ದರೆ ಅದರ ಮೇಲೆ ಪೆನ್‌ನಲ್ಲಿ ಗೆರೆ ಎಳೆದರೆ ಸಾಕಿತ್ತು. ಆದರೆ ವಿಷಯವನ್ನು ಮುಚ್ಚಿಹಾಕಲು ವೈಟ್‌ನರ್‌ ಬಳಸಿದ್ದಾರೆ, ವಿಜಯನಗರದಲ್ಲೇ ನಿವೇಶನ ಬೇಕು ಎಂದು ಸಿಎಂ ಪತ್ನಿ ಬರೆದಿದ್ದಾರೆ. ಅದಕ್ಕೆ ವೈಟ್‌ನರ್‌ ಹಚ್ಚಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ದಾಖಲೆ ತಿದ್ದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಸಿದ್ದರಾಮಯ್ಯನವರಿಗೆ ಪ್ರಮಾಣ ವಚನ ಬೋಧಿಸಿದ್ದೇ ರಾಜ್ಯಪಾಲರು. ಅಂತಹವರು ತನಿಖೆ ಮಾಡಿ ಎಂದಿದ್ದನ್ನು ವಿರೋಧಿಸಿದರೆ ಅದು ಸರ್ವಾಧಿಕಾರಿ ಧೋರಣೆಯಾಗುತ್ತದೆ. ಅದು ತುಘಲಕ್‌ ದರ್ಬಾರ್‌ ಆಗುತ್ತದೆ, ಇದು ದಲಿತರಿಗೆ ಮಾಡುವ ಅಪಮಾನ,ಇದಕ್ಕಾಗಿ ಕಾಂಗ್ರೆಸ್‌ ಕ್ಷಮೆ ಯಾಚಿಸಬೇಕು ಎಂದು ಆರ್.ಅಶೋಕ್ ಒತ್ತಾಯಿಸಿದರು.

ಸಾವಿರಾರು ನಿವೇಶನಗಳನ್ನು ಸಿಎಂ, ಬೆಂಬಲಿಗರು ಲೂಟಿ ಮಾಡಿದ್ದಾರೆ:ಅಶೋಕ್ Read More