post

ತಾಯಿ ಸನ್ನಿದಿಯಲ್ಲಿ ಗುಣಮಟ್ಟದ ವ್ಯವಸ್ಥೆ ಕಲ್ಪಿಸದಿದ್ದರೆ ಸೂಕ್ತ ಕ್ರಮ: ಸಿಎಂ ಎಚ್ಚರಿಕೆ

ಮೈಸೂರು: ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಗುಣಮಟ್ಟದ ವ್ಯವಸ್ಥೆ ಕಲ್ಪಿಸದಿದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಮಿತಿಯ ಮೊದಲ ಸಭೆಯನ್ನು ತಾಯಿ ಸನ್ನಿಧಿಯಲ್ಲೇ ಉದ್ಘಾಟಿಸಿ ಸಿಎಂ ಮಾತನಾಡಿದರು‌.

ಹಿಂದೆಯೂ ಸಮಿತಿ ಇತ್ತು,ಆದರೆ ಪ್ರಾಧಿಕಾರ ರಚನೆಯಿಂದಾಗಿ ಅಭಿವೃದ್ಧಿಗೆ ಹೆಚ್ಚಿನ ಅಧಿಕಾರ ಮತ್ತು ಅವಕಾಶ ಒದಗಿದಂತಾಗಿದೆ ಎಂದು ಹೇಳಿದರು

ಬೆಟ್ಟಕ್ಕಯ ಬರುವ ಭಕ್ತರಿಗೆ ಉನ್ನತ ಮಟ್ಟದ ಆರೋಗ್ಯಕರ ಸವಲತ್ತು ಹಾಗೂ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.

ಶ್ರೀ ಕ್ಷೇತ್ರ ಹಾಗೂ ದೇವಸ್ಥಾನದ ಸಂಪ್ರದಾಯ ಮತ್ತು ಚರಿತ್ರೆ, ಘನತೆಯನ್ನು ಕಾಪಾಡುವ ಜೊತೆಗೆ ಉನ್ನತೀಕರಿಸಬೇಕು ಎಂದು ಹೇಳಿದರು.

ಪ್ರಾಧಿಕಾರ ವ್ಯವಸ್ಥಿತವಾಗಿ ನಡೆಯಬೇಕು, ಕಾಲ ಕಾಲಕ್ಕೆ ಸಭೆಗಳು ನಡೆದು ಹೆಚ್ಚಿನ ಶ್ರಮವನ್ನು ಶುಚಿತ್ವಕ್ಕೆ ಕೊಡಬೇಕು. ಕಸವನ್ನು ಆಗ್ಗಿಂದಾಗೇ ತೆರವುಗೊಳಿಸಬೇಕು. ವಾಹನಗಳ ಸಂಖ್ಯೆಯೂ ಹೆಚ್ಚಾಗಿದ್ದು ವಾಹನ ನಿಲುಗಡೆಗೆ ಸುಸಜ್ಜಿತ ವ್ಯವಸ್ಥೆ ಕಲ್ಪಿಸಬೇಕು ಎಂದು ಸಿಎಂ ತಿಳಿಸಿದರು.

ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಹಣಕ್ಕೆ ತೊಂದರೆ ಇಲ್ಲ. ಕೇಳಿದಷ್ಟು ಹಣವನ್ನು ಕೇಳಿದಾಗಲೆಲ್ಲಾ ಒದಗಿಸಲಾಗುತ್ತಿದೆ,ಆದರೂ ಕೆಲಸಗಳು ಮಾತ್ರ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ಇದನ್ನು ನಾನು ಸಹಿಸುವುದಿಲ್ಲ, ಸಮಯಕ್ಕೆ ಸರಿಯಾಗಿ ಕೆಲಸ ಮಾಡದಿದ್ದರೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಕಠಿಣ ಎಚ್ಚರಿಕೆ ನೀಡಿದರು.

ಶಕ್ತಿ ದೇವತೆ,ತಾಯಿ ಚಾಮುಂಡೇಶ್ವರಿ ಬಗ್ಗೆ ಕೋಟ್ಯಂತರ ಮಂದಿಗೆ ಅಪಾರ ಭಕ್ತಿ, ಶ್ರದ್ಧೆ, ನಂಬಿಕೆ ಇದೆ. ದೇಶದ ಮೂಲೆ ಮೂಲೆಗಳಿಂದ ಭಕ್ತರು ಬರುತ್ತಾರೆ,ಎಲ್ಲರಿಗೂ ಅಗತ್ಯ ಸವಲತ್ತುಗಳನ್ನು ಒದಗಿಸಬೇಕು ಎಂದು ಸೂಚನೆ ನೀಡಿದರು.

ಕೊಪ್ಪಳ ಹುಲಿಗಮ್ಮ ದೇವಸ್ಥಾನ ಮತ್ತು ಘಾಟಿ ಸುಬ್ರಮಣ್ಯ ದೇವಸ್ಥಾನಗಳ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಬಗ್ಗೆಯೂ ಹೆಚ್ಚಿನ ಬೇಡಿಕೆ ಇದೆ,ಈ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಸಭೆಯಲ್ಲಿ ಸಚಿವರಾದ ಹೆಚ್.ಸಿ.ಮಹದೇವಪ್ಪ, ಎಚ್.ಕೆ.ಪಾಟೀಲ್, ಕೆ.ವೆಂಕಟೇಶ್, ರಾಮಲಿಂಗಾರೆಡ್ಡಿ, ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ರವಿಶಂಕರ್, ಡಾ.ತಿಮ್ಮಯ್ಯ, ಹರೀಶ್ ಗೌಡ, ಜಿ.ಟಿ.ದೇವೇಗೌಡ, ವಿವೇಕಾನಂದ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.

ತಾಯಿ ಸನ್ನಿದಿಯಲ್ಲಿ ಗುಣಮಟ್ಟದ ವ್ಯವಸ್ಥೆ ಕಲ್ಪಿಸದಿದ್ದರೆ ಸೂಕ್ತ ಕ್ರಮ: ಸಿಎಂ ಎಚ್ಚರಿಕೆ Read More

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಮಿತಿ ರಚನೆ:ಪ್ರಮೋದಾದೇವಿ ವಿರೋಧ

ಮೈಸೂರು:ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಮಿತಿ ರಚನೆ ಸಂಬಂಧ ಸರ್ಕಾರ ಮತ್ತು ರಾಜಮನೆತನ ನಡುವೆ ಜಟಾಪಟಿ ಮುಂದುವರೆದಿದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಾಧಿಕಾರ ರಚನೆ ಕುರಿತ ಸಭೆಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಚಾಮುಂಡಿ‌ ಬೆಟ್ಟದಲ್ಲಿ ಮಂಗಳವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಮಿತಿ ಸಭೆ ನಡೆಯುತ್ತಿದೆ.ಈ ಹಿನ್ನೆಲೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಮೇಲ್ ಮೂಲಕ ರಾಜವಂಶಸ್ಥೆ ಪ್ರಮೋದಾದೇವಿ ಅವರಿಗೆ ಪತ್ರ ಬರೆದು ಸಭೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದರು.

ಅದಕ್ಕೆ ಮೇಲ್ ಮೂಲಕವೇ ಪ್ರತ್ಯುತ್ತರ ನೀಡಿರುವ ಪ್ರಮೋದಾದೇವಿ ಒಡೆಯರ್, ಸಭೆ ಕಾನೂನು ಬಾಹಿರವಾಗಿ ನಡೆಯುತ್ತಿದೆ. ನ್ಯಾಯಾಲಯದ ವಿರುದ್ಧ ಸಭೆ ನಡೆಸುತ್ತಿರುವುದು ಸರಿಯಲ್ಲ, ಕಾನೂನು ಉಲ್ಲಂಘನೆ ಆಗಲಿದೆ ಎಂದ ಸೂಕ್ಷ್ಮ ಎಚ್ಚರಿಕೆ ನೀಡಿದ್ದಾರೆ.

ಸೆ. 5ಕ್ಕೆ ನ್ಯಾಯಾಲಯದಲ್ಲಿ ಮುಂದುವರಿದ ವಿಚಾರಣೆ ಇದೆ, ಹೀಗಿರುವಾಗ ಸಭೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಮೋದಾದೇವಿ ಪ್ರಶ್ನೆ ಮಾಡಿದ್ದು, ಸಭೆಗೆ ಗೈರಾಗಲು ನಿರ್ಧಾರ ಮಾಡಿದ್ದಾರೆ.

ಪ್ರಾಧಿಕಾರ ರಚನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪ್ರಮೋದಾ ದೇವಿ ಅವರು ಚಾಮುಂಡೇಶ್ವರಿ ಬೆಟ್ಟ ನಮ್ಮ ಆಸ್ತಿ ಎಂದು ಪ್ರತಿಪಾದಿಸಿದ್ದಾರೆ.

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಮಿತಿ ರಚನೆ:ಪ್ರಮೋದಾದೇವಿ ವಿರೋಧ Read More

ಕೋವಿಡ್ ಹಗರಣದ ತನಿಖಾ ವರದಿ ಕ್ಯಾಬಿನೆಟ್‌ ನಲ್ಲಿ ಚರ್ಚಿಸಿ ತೀರ್ಮಾನ:ಸಿಎಂ

ಮೈಸೂರು: ಕೋವಿಡ್ ಹಗರಣದ ತನಿಖಾ ವರದಿಯನ್ನು ಬುಧವಾರ ಸಚಿವ ಸಂಪುಟದ
ಮುಂದೆ ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ,
ಕ್ಯಾಬಿನೆಟ್ ನಲ್ಲಿ ಈ ಬಗ್ಗೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಹೇಳುತ್ತೇನೆ ಎಂದು ತಿಳಿಸಿದರು.

ವರದಿಯಲ್ಲಿ ಏನಿದೆ ಎಂಬುದನ್ನ ನಾನು ನೋಡಿಲ್ಲ,ಎಷ್ಟು ಪ್ರಮಾಣದ ಭ್ರಷ್ಟಾಚಾರ ಆಗಿದೆ ಎಂಬುದು ಇನ್ನು ಗಮನಕ್ಕೆ ಬಂದಿಲ್ಲ,
ನನ್ನ ಗಮನಕ್ಕೆ ಬರದೆ ಡಿ.ಸುಧಾಕರ್ ಗೆ ಈ ಬಗ್ಗೆ ಯಾರು ಮಾಹಿತಿ ಕೊಟ್ಟರು ಎಂದು ಪ್ರಶ್ನಿಸಿದ ಮುಖ್ಯ ಮಂತ್ರಿಗಳು, ಕುಂಬಳಕಾಯಿ ಕಳ್ಳ ಅಂದ್ರೆ ಆತ ಯಾಕೆ ಹೆಗಲು ಮುಟ್ಟಿ ನೋಡಿ ಕೊಳ್ಳಬೇಕು ಎಂದು ಕೇಳಿದರು.

ಅವರಿಗೆ ಇದು ಸುಳ್ಳು ವರದಿ ಎಂದು ಹೇಗೆ ಗೊತ್ತಾಗುತ್ತೆ ಎಂದ ಸಿಎಂ, ಸುಧಾಕರ್ ತಪ್ಪು ಮಾಡಿರುವುದು ಆತನಿಗೆ ಮಾನಸಿಕವಾಗಿ ಗೊತ್ತಿದೆ, ಹಾಗಾಗಿ ಆ ರೀತಿ ಮಾತನಾಡುತ್ತಿದ್ದಾನೆ ಎಂದು ಟಾಂಗ್ ನೀಡಿದರು.

ಮುಡಾ ಮಾಜಿ ಆಯುಕ್ತ ದಿನೇಶ್ ಅಮಾನತು ವಿಚಾರ ನನಗೆ ಗೊತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ‌ ಎಂದು ಇದೇ‌ ವೇಳೆ ಸಿಎಂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

2009ರ ಹಿಂದಿನ ಬಡವಾಣೆಗೆ 50:50 ಅನ್ವಯ ಆಗುವುದಿಲ್ಲ ಎಂಬ ಉಲ್ಲೇಖದ ಬಗ್ಗೆ ನನಗೆ ಮಾಹಿತಿ ಇಲ್ಲ, ಮೊದಲು ಆದೇಶ ನೋಡುತ್ತೇನೆ ಎಂದರು.

ಮಂಗಳವಾರ ತಾಯಿ ಚಾಮುಂಡೇಶ್ವರಿ ದರ್ಶನ ಮಾಡಿದ್ದೀರ ಏನಾದರೂ ವಿಶೇಷವೆ ಎಂಬ ಪ್ರಶ್ನೆಗೆ,ಬೆಟ್ಟಕ್ಕೆ ಹೋದ ಮೇಲೆ ಚಾಮುಂಡಿ ದೇವಿಯ ದರ್ಶನ ಮಾಡಬೇಕು, ಇದರಲ್ಲಿ ಏನು ವಿಶೇಷ ಎಂದು ಸಭೆಗೆ ಹೋಗುತ್ತಿದ್ದೇನೆ ಹಾಗಾಗಿ ದರ್ಶನ ಮಾಡಿದ್ದೇನೆ‌ ಅಷ್ಟೇ ಎಂದು ಹೇಳಿದರು.

ನನಗೆ ಯಾವ ಟೆಂಕ್ಷನ್ ಇಲ್ಲಾ,ಆತಂಕಾನೂ ಇಲ್ಲ,ನನ್ನ ನೋಡಿದರೆ ಟೆಂಕ್ಷನ್ ಇರೋ ರೀತಿ ಕಾಣುತ್ತೀನಾ ಎಂದು ಮಾಧ್ಯಮದವರಿಗೆ ಪ್ರಶ್ನೆ ಹಾಕಿ,ನಾನು ಯಾವಾಗಲೂ ಹೀಗೆ ಇರುತ್ತೇನೆ, ಇವತ್ತು ಏನು ಸ್ಪೆಷಲ್ ಇಲ್ಲ ಎಂದು ಹೇಳಿದರು.

ಬಿಜೆಪಿಯವರು ಹೇಳಬಾರದಷ್ಟು ಸುಳ್ಳನ್ನ ನನ್ನ ಮೇಲೆ ಹೇಳಿದ್ದಾರೆ.
ಹೀಗಾಗಿ ನಾನು ಟೆಂಕ್ಷನ್ ನಲ್ಲಿದ್ದೇನೆ ಎಂದು ಹೇಳುತ್ತಿದ್ದಾರೆ ಅಷ್ಟೇ ಎಂದು ಮುಕ್ಯಮಂತ್ರಿಗಳು ತಿಳಿಸಿದರು.

ಸಿದ್ದರಾಮಯ್ಯ ಅನುಮತಿ ಕೊಟ್ರೆ ಸಿಎಂ ಆಗುತ್ತೇನೆ ಎಂಬ ದೇಶಪಾಂಡೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಿಎಂ ಮಾಡುವುದು ಶಾಸಕರು ಹಾಗೂ ಹೈ ಕಮಾಂಡ್. ಅವರೇ ಅದನ್ನ ತೀರ್ಮಾನ ಮಾಡುತ್ತಾರೆ,ನಾನು ಹೇಗೆ ಮಾಡಲಿ ಎಂದು ಹೇಳಿದರು.

ಕೋವಿಡ್ ಹಗರಣದ ತನಿಖಾ ವರದಿ ಕ್ಯಾಬಿನೆಟ್‌ ನಲ್ಲಿ ಚರ್ಚಿಸಿ ತೀರ್ಮಾನ:ಸಿಎಂ Read More

ಮೂಡಾ ಹಗರಣ: ಮಾಜಿ ಆಯುಕ್ತ ದಿನೇಶ್ ಕುಮಾರ್ ಅಮಾನತು

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ‌ ಹಗರಣ ಪ್ರಕರಣದಲ್ಲಿ ಮೊದಲ ವಿಕೆಟ್‌ ಪತನವಾಗಿದೆ.

ಮುಡಾ ಹಿಂದಿನ ಆಯುಕ್ತ ಜಿ.ಟಿ ದಿನೇಶ್‌ಕುಮಾರ್‌ ಅವರನ್ನು ಅಮಾನತುಪಡಿಸಿ ಸರ್ಕಾರ ಆದೇಶ ಹೊರಡಿಸಿದೆ.

ಮೂಡಾ ಹಗರಣದಲ್ಲಿ ದಿನೇಶ್ ಕುಮಾರ್ ಮೇಲೆ ಗಂಭೀರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಅಮಾನತ್ತು ಮಾಡಲಾಗಿದೆ.

ಸರ್ಕಾರವು ನೀಡುವ ಯಾವುದೇ ನಿರ್ದೇಶನಗಳನ್ನು ಪಾಲಿಸುವುದು KUDA ಕಾಯ್ದೆ ಕಲಂ 65ರನ್ವಯ ಪ್ರಾಧಿಕಾರದ ಜವಾಬ್ದಾರಿ. ಆದರೆ ನಿಯಮಗಳಿಗೆ ಮತ್ತು ಸರ್ಕಾರದ ನಿರ್ದೇಶನಗಳಿಗೆ ವ್ಯತಿರಿಕ್ತವಾಗಿ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನಿಸುತ್ತಿರುವುದು ಮತ್ತು ಅದರಂತೆ ಕ್ರಮವಹಿಸುತ್ತಿರುವುದು ಕಂಡುಬಂದಿದೆ.

ಅಲ್ಲದೇ ದಿನೇಶ್‌ ಕುಮಾರ್‌ ಅವರ ವಿರುದ್ಧ ಇನ್ನೂ ಅನೇಕ ಆರೋಪಗಳಿಂದ ಕರ್ತವ್ಯ ಲೋಪ ಎಸಗಿರುವುದು‌ ಮನವರಿಕೆಯಾಗಿದ್ದು,ಅವರು
ಅಧಿಕಾರದಲ್ಲಿ ಮುಂದುವರಿದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ಸೇವೆಯಿಂದ ಅಮಾನತುಗೊಳಿಸಲು ತೀರ್ಮಾನಿಸಲಾಗಿದೆ ಎಂದು ಆದೇಶ ಪ್ರತಿಯಲ್ಲಿ ಸರ್ಕಾರ ತಿಳಿಸಿದೆ.

ಮೂಡಾ ಹಗರಣ: ಮಾಜಿ ಆಯುಕ್ತ ದಿನೇಶ್ ಕುಮಾರ್ ಅಮಾನತು Read More

ಯೋಗ ಹೇಳಿಕೊಡುವ ನೆಪದಲ್ಲಿ ಲೈಂಗಿಕ ದೌರ್ಜನ್ಯ: ಯೋಗ ಗುರು ಅರೆಸ್ಟ್

ಚಿಕ್ಕಮಗಳೂರು: ಪ್ರತಿದಿನ ಒಂದಲ್ಲಾ ಒಂದು ಲೈಂಗಿಕ ದೌರ್ಜನ್ಯದ ಬಗ್ಗೆ ಸುದ್ದಿ ಬರುತ್ತಲೇ ಇರುತ್ತದೆ,ಆದರೂ ವಿದ್ಯಾವಂತ ಮಹಿಳೆಯರೂ ಕೂಡ ಹೀಗೆ‌ ಮೋಸ ಹೋಗಿ ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ನಿಜಕ್ಕೂ ದುರ್ಧೈವದ ಸಂಗತಿಯಾಗಿದೆ.

ಇದಕ್ಕೆ ಇಲ್ಲೊಂದು ಉದಾಹರಣೆ ಇದೆ.
ಯೋಗ ಕಲಿಯಲು ಬಂದ ಎನ್ ಆರ್ ಐ ವೈದ್ಯೆಯ ಮೇಲೆ ಯೋಗ ಗುರು ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯಲ್ಲಿ ಆಶ್ರಮವೊಂದರಲ್ಲಿ ಈ ಕೃತ್ಯ ನಡೆದಿದ್ದು, ಸಂತ್ರಸ್ತೆ ವೈದ್ಯೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿ ಯೋಗಗುರು ಪ್ರದೀಪ್ ನನ್ನು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

3 ತಿಂಗಳ ಹಿಂದೆ ಆಶ್ರಮಕ್ಕೆ ಯೋಗ, ಧ್ಯಾನ ಕಲಿಯಲು ಬಂದಿದ್ದ ಅಮೆರಿಕ ಪೌರತ್ವ ಪಡೆದಿರುವ ಪಂಜಾಬ್ ಮೂಲದ ವೈದ್ಯೆ ಮೇಲೆ ಯೋಗಗುರು ಪ್ರದೀಪ್​ ಅತ್ಯಾಚಾರವೆಸಗಿದ್ದಾನೆ ಎಂದು ದೂರು ನೀಡಲಾಗಿದೆ.

ಯೋಗಗುರು ಪ್ರದೀಪ್ ವಿರುದ್ಧ ಎನ್ಆರ್​ಐ ವೈದ್ಯೆ ಟ್ವಿಟರ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಪ್ರದೀಪನ ಆಶ್ರಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಿಳಿದುಕೊಂಡಿದ್ದ ವೈದ್ಯೆ, 3 ತಿಂಗಳ ಹಿಂದೆ ಆಶ್ರಮಕ್ಕೆ ಬಂದು ನೆಲೆಸಿದ್ದರು.

ಯೋಗಗುರು ಪ್ರದೀಪ್ ಕೇವಲ ಫೌಂಡೇಷನ್‌ ಮೂಲಕ ಯೋಗ ತರಬೇತಿ ನೀಡುತ್ತಿದ್ದು, ಇಲ್ಲಿಗೆ ದೇಶ, ವಿದೇಶದ ಅನೇಕ ಮಂದಿ ಬಂದು ಯೋಗ ಶಿಕ್ಷಣ ಪಡೆಯುತ್ತಾರೆ.

ಆನ್ ಲೈನ್ ಮೂಲಕವೂ ಯೋಗ ತರಬೇತಿ ನೀಡಲಾಗುತ್ತದೆ,ಪಂಜಾಬ್‌ ಮೂಲದ ವೈದ್ಯೆ 2020ರಲ್ಲಿ ಅಮೇರಿಕಾದಲ್ಲಿ ವೃತ್ತಿಯಲ್ಲಿದ್ದ ಸಂದರ್ಭದಲ್ಲಿ ಅವರ ಸ್ನೇಹಿತರಿಂದ ಈ ಯೋಗ ಕೇಂದ್ರದ ಬಗ್ಗೆ ಮಾಹಿತಿ ಪಡೆದು ಆನ್ಲೈನ್‌ ತರಗತಿಗೆ ಸೇರಿಕೊಂಡಿದ್ದರು.

ನಂತರ ಇಲ್ಲಿಗೆ ಬಂದು ತರಗತಿಯಲ್ಲಿ ಪಾಲ್ಗೊಳ್ಳುವಂತೆ ಪ್ರದೀಪ್‌ ಹೇಳಿದ್ದರಿಂದ ಆಕೆ ಚಿಕ್ಕಮಗಳೂರಿಗೆ ಬಂದು ಆತನ ಕೇಂದ್ರಕ್ಕೆ ಭೇಟಿ ನೀಡಿ 20 ದಿನ ತರಗತಿಯಲ್ಲಿ ಭಾಗಿಯಾಗಿದ್ದರು.

ಈ ವೇಳೆ ಆ ವೈದ್ಯೆಯ ಜತೆಗೆ ಸಲುಗೆ ಬೆಳೆಸಿಕೊಂಡ ಗುರು ಆತ್ಮೀಯನಾದ ದೈಹಿಕವಾಗಿಯೂ ಆಕೆಯನ್ನು ಬಳಸಿಕೊಂಡಿದ್ದಾನೆ. ‌

ನಂತರ 2020-21ರಲ್ಲೂ ಇಲ್ಲಿಗೆ ಬಂದು ಯೋಗ ತರಗತಿಯಲ್ಲಿ ಆಕೆ ಭಾಗಿಯಾಗಿದ್ದಾರೆ.ಆಗ ಕೂಡಾ ಯೋಗದ ಜತೆಗೆ ದೈಹಿಕ ಸಂಬಂಧ ಬೆಳೆಸಿದ್ದ‌ ಗುರು.

ಯೋಗಗುರು ಪ್ರದೀಪ್ ಇತರರ ಜತೆಗೂ ಇದೇ ರೀತಿ ಸಂಬಂಧ ಹೊಂದಿದ್ದಾನೆ ಎಂಬುದು ವೈದ್ಯಗೆ ಗೊತ್ತಾಗಿದೆ.

ನೊಂದ ವೈದ್ಯೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು,ಈಗ ಯೋಗಗುರು ಪ್ರದೀಪ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಯೋಗ ಹೇಳಿಕೊಡುವ ನೆಪದಲ್ಲಿ ಲೈಂಗಿಕ ದೌರ್ಜನ್ಯ: ಯೋಗ ಗುರು ಅರೆಸ್ಟ್ Read More

ಕೆಪಿಎಸ್ ಸಿ ಮರು ಪರೀಕ್ಷೆ: ಸರ್ಕಾರಕ್ಕೆ ಕೆಟ್ಟ ಮೇಲೆ ಬುದ್ಧಿ ಬಂದಿದೆ-ಅಶೋಕ್

ಬೆಂಗಳೂರು: ಕೆಪಿಎಸ್‌ಸಿ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯಲ್ಲಿ ಆಗಿರುವ ಲೋಪಗಳನ್ನ ಒಪ್ಪಿಕೊಂಡು ಮರುಪರೀಕ್ಷೆ ನಡೆಸಲು ಸರ್ಕಾರ ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹವಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಸರ್ಕಾರದ ಈ ನಿರ್ಧಾರ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಮತ್ತು ಪ್ರತಿಪಕ್ಷಗಳ ಹೋರಾಟಕ್ಕೆ ಸಿಕ್ಕ ಜಯವಾಗಿದೆ,
ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ಸರ್ಕಾರ ಎಚ್ಚೆತ್ತುಕೊಂಡು ಮರು ಪರೀಕ್ಷೆಯನ್ನ ಸಮರ್ಪಕವಾಗಿ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತೊಂದರೆಯಾಗದಂತೆ ಸೂಕ್ತ ಪರೀಕ್ಷಾ ದಿನಾಂಕ ನಿಗದಿ ಮಾಡುವುದು, ಅಭ್ಯರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಪರೀಕ್ಷಾ ಕೇಂದ್ರಗಳ ಹಂಚಿಕೆ ಮಾಡುವುದು, ಪ್ರಶ್ನೆ ಪತ್ರಿಕೆ ರಚನೆ, ಕನ್ನಡಕ್ಕೆ ತರ್ಜುಮೆ ಸೇರಿದಂತೆ ಎಲ್ಲ ಅಂಶಗಳನ್ನ ಪರಿಗಣಿಸಿ ತಪ್ಪುಗಳು,ಲೋಪದೋಷಗಳು ಮರುಕಳಿಸದಂತೆ ಜಾಗರೂಕತೆಯಿಂದ ಪರೀಕ್ಷೆ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ.

ಕೆಪಿಎಸ್ ಸಿ ಪರೀಕ್ಷೆ ಲಕ್ಷಾಂತರ ಯುವ ಉದ್ಯೋಗಾಕಾಂಕ್ಷಿಗಳ ಭವಿಷ್ಯದ ಪ್ರಶ್ನೆಯಾಗಿದೆ,ಈಗ ನಡೆದಿರುವ ಪರೀಕ್ಷೆಯಲ್ಲಿನ ಎಡವಟ್ಟುಗಳಿಗೆ ಕಾರಣರಾದ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನ ಮುಲಾಜಿಲ್ಲದೆ ಕಪ್ಪುಪಟ್ಟಿಗೆ ಸೇರಿಸಬೇಕು, ಮುಂದೆ ಯಾವ ಸ್ಪರ್ಧಾತ್ಮಕ ಪರೀಕ್ಷೆಗಳ ಕರ್ತವ್ಯಕ್ಕೂ ಅವರು ನಿಯೋಜನೆ
ಯಾಗದಂತೆ ಬ್ಲಾಕ್ ಲಿಸ್ಟ್ ಗೆ ಸೇರಿಸಬೇಕು ಮರು ಪರೀಕ್ಷೆ ಯಾವುದೇ ಲೋಪವಾಗದಂತೆ ಎಚ್ಚರ ವಹಿಸಿ ಎಂದು ಅಶೋಕ್ ಹೇಳಿದ್ದಾರೆ.

ಕೆಪಿಎಸ್ ಸಿ ಮರು ಪರೀಕ್ಷೆ: ಸರ್ಕಾರಕ್ಕೆ ಕೆಟ್ಟ ಮೇಲೆ ಬುದ್ಧಿ ಬಂದಿದೆ-ಅಶೋಕ್ Read More

ಸಿದ್ದರಾಮಯ್ಯ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮತ್ತೆ ಮುಂದೂಡಿದೆ.

ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ನಿಗದಿ ಮಾಡಲಾಗಿದ್ದು, ಅಲ್ಲಿಯವರೆಗೂ ಸಿದ್ದರಾಮಯ್ಯಗೆ ರಿಲೀಫ್ ಸಿಕ್ಕಂತಾಗಿದೆ.

ನ್ಯಾಯಾಧೀಶರಾದ ಎಂ. ನಾಗಪ್ರಸನ್ನ ಅವರನ್ನೊಳಗೊಂಡ ನ್ಯಾಯಪೀಠ ಈ ಅರ್ಜಿ ವಿಚಾರಣೆ ನಡೆಸುತ್ತಿದ್ದು ಸೋಮವಾರ ಕೂಡಾ ಎರಡು ಗಂಟೆಗಳ ಕಾಲ ಧೀರ್ಘ ವಿಚಾರಣೆ ನಡೆಸಲಾಯಿತು.

ಮುಖ್ಯಮಂತ್ರಿಗಳ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ಆದೇಶ ಪ್ರಶ್ನಿಸಿ ಸಿಎಂ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ವೇಳೆ ಸಿಎಂ ಪರ ವಕೀಲರು ಮತ್ತು ಸಾಲಿಸಿಟರ್ ಜನರಲ್ ಸುದೀರ್ಘ ವಾದ ಮಂಡಿಸಿದ ಬಳಿಕ ದೂರುದಾರ ಸ್ನೇಹಮಯಿ ಕೃಷ್ಣ ಪರ ವಕೀಲ ಕೆ.ಜಿ.ರಾಘವನ್ ವಾದಮಂಡಿಸಿದರು.

ಭ್ರಷ್ಟಾಚಾರ ತಡೆ ಕಾಯ್ದೆ ಉಲ್ಲೇಖಿಸಿ, ಕಾನೂನು ಬಾಹಿರವಾಗಿಲ್ಲದಿದ್ದರೂ ಪ್ರಭಾವ ಬಳಸಿ ಲಾಭ ಪಡೆದರೆ ಅದು ಅಪರಾಧ. ಅನುಕೂಲ ಪಡೆಯಲು ಅಧಿಕಾರಿ ಮೇಲೆ ಪ್ರಭಾವ ಬಳಸಿದರೂ ಅಪರಾಧ.

ವೈಯಕ್ತಿಕ ಪ್ರಭಾವ ಬಳಸಿದರೂ ಅದು ಸೆಕ್ಷನ್ 7 ಅಡಿ ಅಪರಾಧ. ಒಬ್ಬ ಸಚಿವ ಇಲಾಖೆಯಲ್ಲದೇ ಬೇರೆಡೆ ಪ್ರಭಾವ ಬೀರಿದರೂ ಅಪರಾಧ. ಸಾರ್ವಜನಿಕ ಆಡಳಿತದಲ್ಲಿ ಪಾವಿತ್ರ್ಯತೆ ತರಲು ಸೆಕ್ಷನ್ 7ಸಿ ಜಾರಿಗೆ ತರಲಾಗಿದೆ ಎಂದು ವಾದಿಸಿದರು.

ಮುಡಾ ಪ್ರಕರಣದ ಬಗ್ಗೆ ಸರ್ಕಾರವೇ ತನಿಖೆ ಅಗತ್ಯವಿದೆ ಎಂದು ಭಾವಿಸಿ ಆಯೋಗ ರಚಿಸಿದೆ. ಹೀಗಾಗಿ ರಾಜ್ಯಪಾಲರು 17ಎ ಅಡಿ ಅನುಮತಿ ನೀಡಿರುವುದು ಸರಿಯಾಗಿದೆ. ಈ ಹಂತದಲ್ಲಿ ತನಿಖೆಯನ್ನು ತಡೆಹಿಡಿಯಬಾರದು. ಸತ್ಯ ಅನಾವರಣಗೊಳ್ಳಲು ಅವಕಾಶ ನೀಡಬೇಕು ಎಂದು ರಾಘವನ್ ಮನವಿ ಮಾಡಿದರು.

ರಾಘವನ್ ಅವರು ಸುದೀರ್ಘ ವಾದ ಮಂಡಿಸಿದ ಬಳಿಕ ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು, ಸಚಿವ ಸಂಪುಟದ ನಿರ್ಣಯದ ಬಗ್ಗೆ ವಾದ ಮಂಡಿಸಬೇಕಿದೆ, ಆದರೆ ಈ ವಾರಾಂತ್ಯ ಹಬ್ಬದ ರಜೆಗಳಿವೆ, ಆದ್ದರಿಂದ ಒಂದು ವಾರ ಕಾಲಾವಕಾಶ ನೀಡಬೇಕು ಎಂದು ಹೈಕೋರ್ಟ್​ಗೆ ಮನವಿ ಮಾಡಿದರು.

ಎಜಿ ಶಶಿಕಿರಣ್ ಶೆಟ್ಟಿ ಮನವಿಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾಗಪ್ರಸನ್ನ, ಹಬ್ಬಕ್ಕೂ ಮೊದಲೇ ವಾದಮಂಡನೆ ಮುಗಿಸಿಬಿಡಿ ಎಂದು ಹೇಳಿದರು.

ಆದರೆ ಅಡ್ವೊಕೆಟ್ ಜನರಲ್ ವಾದಿಸಿದ ಮೇಲೆ ನಾನು ವಾದಿಸುತ್ತೇನೆ. ಸೆಪ್ಟೆಂಬರ್ 9 ಅಥವಾ 21 ರಂದು ನಾನು ವಾದಿಸುತ್ತೇನೆ ಎಂದು ಸಿಎಂ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಹೇಳಿದರು.

ಅಷ್ಟು ದೂರದ ದಿನಾಂಕವನ್ನು ನೀಡಲು ಸಾಧ್ಯವಿಲ್ಲ ಎಂದ ನ್ಯಾಯಮೂರ್ತಿಗಳು, ನೀವು ಬೇಗ ವಾದಮಂಡನೆ ಮುಗಿಸಬೇಕು. ವಿಚಾರಣಾ ನ್ಯಾಯಾಲಯದ ಕಲಾಪ ಬಹಳ ಕಾಲ ಮುಂದೂಡುವುದು ಸೂಕ್ತವಲ್ಲ ಎಂದು ಹೇಳಿ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಿದರು.

ನಂತರ ಸೆಪ್ಟೆಂಬರ್ 12ರಂದು ತಾವು ವಾದಿಸುವುದಾಗಿ ಸಿಎಂ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಹೇಳಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ಸೆಪ್ಟೆಂಬರ್ 12ರಂದು ಸಂಪೂರ್ಣ ವಿಚಾರಣೆ ಮುಗಿಸೋಣ ಎಂದು ತಿಳಿಸಿದರು.

ಸಿದ್ದರಾಮಯ್ಯ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ Read More

ಕಿಚ್ಚ ಸುದೀಪ್ ಹುಟ್ಟುಹಬ್ಬ:ಹಣ್ಣು,ದಿನಸಿ ಸಾಮಗ್ರಿ ವಿತರಣೆ

ಮೈಸೂರು: ಖ್ಯಾತ ನಟ ಕಿಚ್ಚ ಸುದೀಪ್ ಹುಟ್ಟು ಹಬ್ಬದ ಅಂಗವಾಗಿ ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ಜೆ.ಎಸ್.ಎಸ್. ಸಂಸ್ಥೆಯ ವಿಕಲಚೇತನ ಉದ್ಯೋಗಸ್ಥ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರ ನಿಲಯದವರಿಗೆ ಹಣ್ಣು, ದಿನಸಿ ಸಾಮಗ್ರಿ ವಿತರಿಸಲಾಯಿತು.

ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ಹಣ್ಣು, ದಿನಸಿ ಸಾಮಗ್ರಿ ವಿತರಿಸಲಾಯಿತು.

ಈ ವೇಳೆ ಮಾತನಾಡಿದ ಜೆಡಿಎಸ್ ಕಾರ್ಯಾದಕ್ಷ ಪ್ರಕಾಶ್ ಪ್ರಿಯದರ್ಶನ್
ಸ್ಯಾಂಡಲ್‌ ವುಡ್ ಅಷ್ಟೇ ಅಲ್ಲದೇ ಬಾಲಿವುಡ್‌ ಸಿನಿಮಾಗಳಲ್ಲೂ ತಮ್ಮ ಅಮೋಘ ಅಭಿನಯದ ಮೂಲಕ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಕೀರ್ತಿ ಪತಾಕೆ ಹಾರಿಸುತ್ತಿರುವ ಕಿಚ್ಚ ಸುದೀಪ್ ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಈ ವೇಳೆ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ,ಸುಬ್ರಮಣ್ಯ, ಛಾಯಾ, ಯಶವಂತ್ ಕುಮಾರ್, ವೀರಭದ್ರ ಸ್ವಾಮಿ, ಚಂದ್ರಶೇಖರ್ , ಮಹೇಶ್, ಮಹದೇವ್,ಎಸ್‌.ಪಿ. ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.

ಕಿಚ್ಚ ಸುದೀಪ್ ಹುಟ್ಟುಹಬ್ಬ:ಹಣ್ಣು,ದಿನಸಿ ಸಾಮಗ್ರಿ ವಿತರಣೆ Read More

ಮಕ್ಕಳಿಗೆ ಪರಿಸರ ಸ್ನೇಹಿ ಜೇಡಿ ಮಣ್ಣಿನ ಗಣಪತಿ‌ ತಯಾರಿಕೆ ಕಾರ್ಯಾಗಾರ

ಮೈಸೂರು: ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಮಕ್ಕಳಿಗೆ ಪರಿಸರ ಸ್ನೇಹಿ ಜೇಡಿ ಮಣ್ಣಿನ ಗಣಪತಿ ಕಾರ್ಯಾಗಾರ ವನ್ನು ಸೆ.3 ರಂದು ಹಮ್ಮಿಕೊಳ್ಳಲಾಗಿದೆ.

ಮಂಚೆಗೌಡನ ಕೊಪ್ಪಲು ವೃತ್ತದಲ್ಲಿರುವ
ಮಂಚೆಗೌಡನ ಕೊಪ್ಪಲು
ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸೆ 3 ರಂದು ಬೆಳಗ್ಗೆ 10 ಗಂಟೆಗೆ ಕಲಾವಿದರಾದ ಆರ್ ಲಕ್ಷ್ಮಿ ಚಲಪತಿ ಅವರು ಮಕ್ಕಳಿಗೆ ಕಾರ್ಯಾಗಾರದಲ್ಲಿ ಗಣಪತಿ ತಯಾರಿ ಬಗ್ಗೆ ಹೇಳಿಕೊಡಲಿದ್ದಾರೆ.

ಕಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಗೌಡ,ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷ ರವಿ ಮಂಚೇಗೌಡನ ಕೊಪ್ಪಲು, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಹಾಗೂ ಶಾಲೆಯ ಶಿಕ್ಷಕ ವೃಂದ ಭಾಗವಹಿಸಲಿದ್ದಾರೆ ಎಂದು ಶ್ರೀ ದುರ್ಗಾ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್ ತಿಳಿಸಿದ್ದಾರೆ.

ಮಕ್ಕಳಿಗೆ ಪರಿಸರ ಸ್ನೇಹಿ ಜೇಡಿ ಮಣ್ಣಿನ ಗಣಪತಿ‌ ತಯಾರಿಕೆ ಕಾರ್ಯಾಗಾರ Read More

ಅಕ್ರಮ ಹಣ ವರ್ಗಾವಣೆ: ಎಎಪಿ ಶಾಸಕ ಅಮಾನತುಲ್ಲಾ ಖಾನ್ ಬಂಧನ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಮತ್ತಿತರರನ್ನು ಜಾರಿ ನಿರ್ದೇಶನಾಲಯ ಸೋಮವಾರ ಬಂಧಿಸಿದೆ.

ರಾಷ್ಟ್ರೀಯ ರಾಜಧಾನಿಯ ಓಖ್ಲಾ ಪ್ರದೇಶದಲ್ಲಿನ ಅವರ ನಿವಾಸದಲ್ಲಿ ಬೆಳಗ್ಗೆ ಶೋಧ ನಡೆಸಿದ ನಂತರ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ವಕ್ಫ್ ಬೋರ್ಡ್ ನಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿದ ಎಫ್ ಐಆರ್ ಹಾಗೂ ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ದೆಹಲಿ ಎಸಿಬಿ ದಾಖಲಿಸಿರುವ ಮತ್ತೊಂದು ಎಫ್ ಐಆರ್ ನಿಂದ ಅಮಾನತುಲ್ಲಾ ಖಾನ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ಬೆಳಕಿಗೆ ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್‌ನಲ್ಲಿ ಕೊನೆಯದಾಗಿ ಪ್ರಶ್ನಿಸಿದಾಗಿನಿಂದ ಖಾನ್ ಕನಿಷ್ಠ ಹತ್ತು ಇಡಿ ಸಮನ್ಸ್‌ಗಳಿಂದ ತಪ್ಪಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಕ್ರಮ ಹಣ ವರ್ಗಾವಣೆ: ಎಎಪಿ ಶಾಸಕ ಅಮಾನತುಲ್ಲಾ ಖಾನ್ ಬಂಧನ Read More