ಪೋಲಿಯೋ ನಿರ್ಮೂಲನೆಗೆ ಶ್ರಮಿಸಿ: ಆರ್.ರಾಜೇಶ್ ಕರೆ

Spread the love

ಮೈಸೂರು: ಪೋಷಕರು ಪೋಲಿಯೋ ಲಸಿಕೆಯ ಮಹತ್ವ ಅರಿತು, ಮಕ್ಕಳಿಗೆ ಲಸಿಕೆ ಹಾಕಿಸಿ ಪೋಲಿಯೋ ನಿರ್ಮೂಲನೆಗೆ ಶ್ರಮಿಸಿ ಎಂದು ರೋಟರಿ ಕ್ಲಬ್ ಆಫ್ ಹೆರಿಟೇಜ್ ಮೈಸೂರು ಅಧ್ಯಕ್ಷ ಆರ್.ರಾಜೇಶ್ ಸಲಹೆ ನೀಡಿದರು.

ವಿಶ್ವ ಪೋಲಿಯೋ ದಿನದ ಅಂಗವಾಗಿ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಆಫ್ ಹೆರಿಟೇಜ್ ಮೈಸೂರು ವತಿಯಿಂದ ನಡೆದ ಲಸಿಕೆಯ ಮಹತ್ವದ ಅರಿವು ಕಾರ್ಯಕ್ರಮದಲ್ಲಿ ಮಕ್ಕಳಿಗೆ ಲಸಿಕೆ ಹಾಕಿ ಅವರು ಮಾತನಾಡಿದರು.

೫ ವರ್ಷದೊಳಗಿನ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಪೋಲಿಯೋ ಲಸಿಕೆ ನೀಡದೇ ಹೋದಲ್ಲಿ ಮಕ್ಕಳು ಅಂಗವೈಕಲ್ಯತೆಗೆ ತುತ್ತಾಗುತ್ತಾರೆ, ಆದ್ದರಿಂದ ತಪ್ಪದೇ ಲಸಿಕೆ ಕೊಡಸಬೇಕೆಂದು ತಿಳಿಸಿದರು.

ಈವರೆಗೂ ಪೋಲಿಯೋ ನಿರ್ಮೂಲನೆಗೆ ಜಗತ್ತಿನಾದ್ಯಂತ ಆರ್ಥಿಕವಾಗಿ ಹಾಗೂ ಅರಿವು ಮೂಡಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಸಾಕಷ್ಟು ಶ್ರಮ ವಹಿಸಿದೆ ಎಂದು ಹೇಳಿದರು.

ಇದೇ ವೇಳೆ ಆಸ್ಪತ್ರೆಗೆ ದಾಖಲಾಗಿರುವ ಸುಮಾರು ೫೦ಕ್ಕೂ ಅಧಿಕ ನವಜಾತ ಶಿಶುಗಳಿಗೆ ಅಗತ್ಯವಿರುವ ಸ್ವೆಟರ್, ಕ್ಯಾಪ್, ಸಾಕ್ಸ್ ಉಳ್ಳ ಸೆಟ್ ಅನ್ನು ನೀಡಲಾಗಿದೆ ಎಂದು ಹೇಳಿದರು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ರಾಜೇಂದ್ರ ಕುಮಾರ್ ಅವರ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದರು.

ಚೆಲುವಾಂಬ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ರಾಜೇಂದ್ರ ಕುಮಾರ್ ಅವರು ಮಾತನಾಡಿ, ಪೋಲಿಯೋ ಲಸಿಕೆ ಕುರಿತು ಸಾಕಷ್ಟು ಅರಿವು ಮೂಡಿಸಿ, ಮನೆ-ಮನೆಗೆ ತೆರಳಿ ಲಸಿಕೆ ಕೊಡಿಸುವ ಕಾರ್ಯಕ್ಕೆ ಮುಂದಾದರೂ ಸಹ ಇನ್ನೂ ಸಾಕಷ್ಟು ಮಕ್ಕಳು ಲಸಿಕೆ ವಂಚಿತರಾಗಿ ಅಂಗವೈಕಲ್ಯತೆಗೆ ತುತ್ತಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನಾದರೂ ಪೋಷಕರು ಎಚ್ಚೆತ್ತುಕೊಂಡು ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಲಸಿಕೆ ಕೊಡಿಸುವ ಮೂಲಕ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ರೋಟರಿ ಕ್ಲಬ್ ಅಧ್ಯಕ್ಷ ರೊ.ರಾಜೇಶ್, ರೋಟರಿ ಕ್ಲಬ್ ಆಫ್ ಹೆರಿಟೇಜ್ ಮೈಸೂರು ಸಂಸ್ಥಾಪಕ ಅಧ್ಯಕ್ಷ ರೊ.ಮಂಜುನಾಥ್.ಕೆ, ಕ್ಲಬ್‌ನ ಹಿರಿಯ ಸದಸ್ಯರಾದ ರೊ.ನಾರಾಯಣ್ ನಾಯಕ್, ರೊ.ರಾಘವೇಂದ್ರ ಆಚಾರ್ ಮತ್ತು ಚಂದನ್, ಜೀವನಿಧಿ ಟ್ರಸ್ಟ್ ನ ಆಯೇಷಾ, ಆಸ್ಪತ್ರೆಯ ಕಚೇರಿಯ ಅಧೀಕ್ಷಕರರಾದ ದೇವರಾಜು, ಶುಶ್ರೂಷಕರು ಮತ್ತು ಸಿಬ್ಬಂದಿ ಹಾಜರಿದ್ದರು.