ಪೊಲೀಸರನ್ನು ಹರಕೆಯ ಕುರಿ ಮಾಡಿದ ಸರ್ಕಾರ:ಅಶೋಕ್ ಆರೋಪ

Spread the love

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ನಡೆದ ಕಾಲ್ತುಳಿತದ ಘಟನೆಯಲ್ಲಿ ಸರ್ಕಾರವೇ ಅಪರಾಧಿ, ಇದನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಹೋರಾಟ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಅಶೋಕ ತಿಳಿಸಿದರು.

ಈ ಘಟನೆಯಲ್ಲಿ ಪೊಲೀಸರನ್ನು ಹರಕೆಯ ಕುರಿ ಮಾಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಈ ಘಟನೆಯಲ್ಲಿ ಪೊಲೀಸರನ್ನು ಹರಕೆಯ ಕುರಿ ಮಾಡಲಾಗಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಕಾನೂನನ್ನು ಕಗ್ಗತ್ತಲಿನಲ್ಲಿಟ್ಟಿದ್ದಾರೆ. ಗ್ರೇಟ್‌ ಸಮಾಜವಾದಿ, ಮಜಾವಾದಿ ಸಿದ್ದರಾಮಯ್ಯನವರಿಂದ ಹೀಗಾಗಿದೆ. ಆರ್‌ಸಿಬಿ ತಂಡ ಐಪಿಎಲ್‌ ಗೆದ್ದಿದ್ದರೆ, ಕೆಪಿಸಿಸಿ ತಂಡ ಫೋಟೋಗೆ ಫೋಸ್‌ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಬ್ಯಾಟ್ಸ್‌ಮನ್‌ ಹಾಗೂ ಡಿ.ಕೆ.ಶಿವಕುಮಾರ್‌ ಬೌಲರ್‌ ಎಂದು ‌ಲೇವಡಿ ಮಾಡಿದರು.

ಸಿದ್ದರಾಮಯ್ಯನವರನ್ನು ಬೋಲ್ಡ್‌ ಮಾಡಬೇಕೆಂದು ಡಿ.ಕೆ.ಶಿವಕುಮಾರ್‌ ಪ್ರಯತ್ನ ಮಾಡುತ್ತಿದ್ದರೆ, ಐದು ವರ್ಷ ಸೆಂಚುರಿ ಹೊಡೆಯಬೇಕೆಂದು ಸಿದ್ದರಾಮಯ್ಯ ಪ್ರಯತ್ನ ಮಾಡುತ್ತಿದ್ದಾರೆ. ಇವರಿಬ್ಬರ ನಡುವೆ ರಾಜ್ಯದ ಜನರು ಹಿಟ್‌ ವಿಕೆಟ್‌ ಆಗಿದ್ದಾರೆ. 11 ಪ್ರತಿಭಾವಂತ ಯುವಜನರು ಬಲಿಯಾಗಿದ್ದಾರೆ ಎಂದು ಕಿಡಿಕಾರಿದರು.

ವೇದಿಕೆಯಲ್ಲಿ ಕಾಂಗ್ರೆಸ್‌ ನಾಯಕರ ಕೈಯಲ್ಲೇ ಟ್ರೋಫಿ ಇತ್ತು. ವರ್ಷಾನುಗಟ್ಟಲೆ ಶ್ರಮವಹಿಸಿ ಆಟವಾಡಿದ ಆಟಗಾರರನ್ನು ಮೂಲೆಗೆ ತಳ್ಳಿದ್ದರು. ಈ ಸಂಭ್ರಮಾಚರಣೆ ಆತುರದ ತೀರ್ಮಾನವೆಂದು ಕಾಂಗ್ರೆಸ್‌ನ ಕೆಲವರು ಹೇಳುತ್ತಿದ್ದಾರೆ. ಕಾಂಗ್ರೆಸ್‌ನ ಸಮರ್ಪಣಾ ಸಮಾವೇಶ ಮಾಡುವ ಮುನ್ನ, ಬೆಂಗಳೂರಿನಲ್ಲಿ ಪ್ರವಾಹ ಬಂದರೂ ಬಹಳಷ್ಟು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಯುವಜನರಿಗೆ ಸಂಬಂಧಿಸಿದಂತೆ ಕ್ರೀಡಾ ಕಾರ್ಯಕ್ರಮ ಮಾಡುವಾಗ ಸಿದ್ಧತೆಯನ್ನೇ ಮಾಡಿಕೊಳ್ಳಲಿಲ್ಲ. ಕಾಂಗ್ರೆಸ್‌ನ ಸಮಾವೇಶಕ್ಕೆ ಮಾಡಿದ್ದ ಸಿದ್ಧತೆಯ ಒಂದು ಪರ್ಸೆಂಟ್‌ ಸಮಯವನ್ನು ಇಲ್ಲಿ ನೀಡಿದ್ದರೆ ಯುವಜನರ ಬದುಕು ಉಳಿಯುತ್ತಿತ್ತು ಎಂದು ಹೇಳಿದರು.

ಕರ್ನಾಟಕದ ಇತಿಹಾಸದಲ್ಲಿ ಮೊದಲ ಸಲ ಪೊಲೀಸ್‌ ಆಯುಕ್ತರನ್ನು ಅಮಾನತು ಮಾಡಲಾಗಿದೆ. ಜನರು ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ಜೊತೆಗಿದ್ದೇವೆ ಎಂದು ಹೇಳುತ್ತಿದ್ದಾರೆ. ಕಾಲ್ತುಳಿತಕ್ಕೆ ಸಿಲುಕಿ ನಿತ್ರಾಣರಾಗಿದ್ದ ಯುವಕ ಯುವತಿಯರನ್ನು ಪೊಲೀಸರು ಕೈಯಲ್ಲಿ ಎತ್ತಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲಿ ಯಾವುದೇ ಕಾಂಗ್ರೆಸ್‌ ಕಾರ್ಯಕರ್ತರು ಇರಲಿಲ್ಲ. ಆದರೆ ಈಗ ಪೊಲೀಸರನ್ನೇ ಅಮಾನತು ಮಾಡಲಾಗಿದೆ. ನಾವು ನ್ಯಾಯ ಸಿಗುವವರೆಗೂ ರಾಜಕಾರಣ ಮಾಡುತ್ತೇವೆ. ಯಾರನ್ನೋ ಹರಕೆಯ ಕುರಿ ಮಾಡುವುದರ ವಿರುದ್ಧ ನಾವು ರಾಜಕಾರಣ ಮಾಡುತ್ತೇವೆ ಎಂದು ಅಶೋಕ್ ತಿಳಿಸಿದರು.

ಎರಡು ಕಡೆ ಕಾರ್ಯಕ್ರಮ ನಡೆಸುವುದು ಬೇಡ ಎಂದು ಪೊಲೀಸರು ಹೇಳಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಘಟನೆ ನಡೆದಿಲ್ಲ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದೆ ಎಂದು ಹೇಳಿದ್ದಾರೆ. ಈ ಎರಡೂ ಸ್ಥಳಗಳು ಅಕ್ಕಪಕ್ಕದಲ್ಲೇ ಇವೆ. ಪೊಲೀಸರು ಅನುಮತಿ ನೀಡದಿದ್ದರೂ, ಕಾಂಗ್ರೆಸ್‌ ಸರ್ಕಾರ ಕಾನೂನು ಕೈಗೆ ತೆಗೆದುಕೊಂಡು ಕಾರ್ಯಕ್ರಮ ನಡೆಸಿದೆ. ಎಲ್ಲರೂ ಫೋಟೋ ಶೂಟ್‌ನಲ್ಲಿ ನಿರತರಾಗಿದ್ದರೇ ಹೊರತು, ಜನರ ಬಗ್ಗೆ ಯಾರೂ ಯೋಚಿಸಲಿಲ್ಲ ಎಂದು ದೂರಿದರು.

ಮೊದಲು ಜಿಲ್ಲಾಧಿಕಾರಿಯಿಂದ ತನಿಖೆ ನಡೆಯಲಿದೆ ಎಂದು ಹೇಳಿದರು. ಮತ್ತೆ ಸಿಐಡಿಯಿಂದ ತನಿಖೆ ನಡೆಯಲಿದೆ ಎಂದು ಹೇಳಿದ್ದಾರೆ. ಇದು ಕೂಡ ಮುಡಾ, ವಾಲ್ಮೀಕಿ ನಿಗಮದ ಹಗರಣದಂತೆಯೇ ಮುಚ್ಚಿಹೋಗಲಿದೆ. ಇಲ್ಲಿ ಸರ್ಕಾರವೇ ಅಪರಾಧಿಯಾಗಿರುವುದರಿಂದ, ಸರ್ಕಾರದಲ್ಲಿರುವ ಯಾರೂ ತನಿಖೆ ಮಾಡಬಾರದು. ಇದನ್ನು ನ್ಯಾಯಾಧೀಶರೇ ತನಿಖೆ ಮಾಡಬೇಕು ಪ್ರತಿಪಕ್ಷ ನಾಯಕ ಆಗ್ರಹಿಸಿದರು.