ಮೈಸೂರು: ಹೊಸ ಬಗೆಯ ಸೈಬರ್ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಸನ್ನದ್ಧರಾಗಬೇಕು ಎಂದು ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರಿನ ನಿರ್ದೇಶಕರ ಚೆನ್ನಬಸವಣ್ಣ ಎಸ್ ಎಲ್ ಅವರು ಸಲಹೆ ನೀಡಿದರು.
ಸೈಬರ್ ಅಪರಾಧಗಳು ಮತ್ತು ಅವುಗಳ ಹೊಸ ಮಾದರಿಗಳು ಹಾಗೂ ಪರಿಣಾಮಕಾರಿ ತನಿಖೆ ವಿಷಯದ ಕುರಿತು ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳಿಗೆ ಹಮ್ಮಿಕೊಂಡಿರುವ ಮೂರು ದಿನಗಳ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು,ಇದು ಪೊಲೀಸ್ ವ್ಯವಸ್ಥೆಗೆ ಹಾಗೂ ಸಮಾಜಕ್ಕೆ ಬಹಳ ದೊಡ್ಡ ಸವಾಲಾಗಿದೆ. ಸೈಬರ್ ಅಪರಾಧಗಳಿಗೆ ಮುಗ್ಧ ಜನರು ಬಲಿಪಶುಗಳಾಗುತ್ತಿದ್ದು, ನವೀನ ತಂತ್ರಜ್ಞಾನ ಬಳಸಿ ಅಪರಾಧಗಳಲ್ಲಿ ತೊಡಗುತ್ತಿರುವುದರಿಂದ, ಅವುಗಳ ತನಿಖೆ ಪೊಲೀಸ್ ವ್ಯವಸ್ಥೆಗೆ ಬಹಳ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಹೊಸ ಬಗೆಯ ಸೈಬರ್ ಅಪರಾಧಗಳು ಮತ್ತು ಅವುಗಳ ಕಾರ್ಯ ವಿಧಾನಗಳ ಬಗ್ಗೆ ನಮ್ಮ ಪೊಲೀಸ್ ಅಧಿಕಾರಿಗಳು ಸಂವೇದನಾಶೀಲರಾಗಿ, ಸೈಬರ್ ಅಪರಾಧಗಳನ್ನು ತಡೆಗಟ್ಟಲು ಹಾಗೂ ಘಟಸಿರುವ ಅಪರಾಧಗಳನ್ನು ಪರಿಣಾಮಕಾರಿಯಾಗಿ ತನಿಖೆ ನಡೆಸಿ, ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ತಿಳಿಸಿದರು
ಈ ನಿಟ್ಟಿನಲ್ಲಿ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಸೇವಾನಿರತ ಪೊಲೀಸ್ ಅಧಿಕಾರಿಗಳಿಗೆ ಮೊರು ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ಈ ಕಾರ್ಯಾಗಾರದಲ್ಲಿ, ಸೈಬರ್ ಅಪರಾಧಗಳ ತನಿಖೆ ಕುರಿತು ಅಪಾರ ಜ್ಞಾನ ಹೊಂದಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ಸೈಬರ್ ವಿಷಯ ತಜ್ಞರು ಹಾಗೂ ಸೈಬರ್ ಶಿಕ್ಷಣ ಕ್ಷೇತ್ರದ ತಜ್ಞರಿಂದ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ನೀಡುತ್ತಾರೆ,ಅದರ ಉಪಯೋಗವನ್ನು ಪಡೆದುಕೊಂಡು, ತಮ್ಮ ಕಾರ್ಯಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ತನಿಖೆ ನಡೆಸುವುದೂ ಅಲ್ಲದೇ, ಸೈಬರ್ ಅಪರಾಧಗಳು ಘಟಿಸುವ ಮೊದಲೇ ಕಾರ್ಯಪ್ರವೃತ್ತರಾಗಿ ಅವುಗಳನ್ನು ತಡೆಗಟ್ಟಿ, ಸಂತ್ರಸ್ತರಿಗೆ ಹಾಗೂ ಸಾಮಾಜಿಕ ವ್ಯವಸ್ಥೆಗೆ ನ್ಯಾಯ ಒದಗಿಸಲು ಪೊಲೀಸ್ ಅಧಿಕಾರಿಗಳು ಸನ್ನದ್ಧರಾಗಬೇಕೆಂದು ಚೆನ್ನಬಸವಣ್ಣ ಎಸ್ ಎಲ್ ಪೊಲೀಸ್ ಅಧಿಕಾರಿಗಳಿಗೆ ತಿಳಿಹೇಳಿದರು.
ಕಾರ್ಯಕ್ರಮದಲ್ಲಿ ಆಕಾಡೆಯಿಯ ಸಹಾಯಕ ನಿರ್ದೇಶಕರು ಹಾಗೂ ಕಾರ್ಯಾಗಾರದ ಸಂಯೋಜಕರಾದ ಎಂ ಎಚ್ ಖಾನ್ ಹಾಗೂ ಸಹಾಯಕ ನಿರ್ದೇಶಕರುಗಳು ಹಾಜರಿದ್ದರು.