ಪಿಎಂ 15 ಅಂಶಗಳ ಕಾರ್ಯಕಮದಡಿ ಸೌಲಭ್ಯಗಳನ್ನು ಅರ್ಹರಿಗೆ ನೀಡಿ : ಡಿಸಿ

Spread the love

ಮೈಸೂರು: ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದಡಿ ಅಲ್ಪಸಂಖ್ಯಾತ ಅರ್ಹ ಫಲಾನುಭವಿಗಳಿಗೆ ಪಾರದರ್ಶಕವಾಗಿ ಸೌಲಭ್ಯಗಳನ್ನು ತಲುಪಿಸಿ ಎಂದು ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದಡಿ ಅಲ್ಪಸಂಖ್ಯಾತರ ಅಭಿವೃದ್ಧಿ ಸಂಬಂಧ ಹಮ್ಮಿಕೊಂಡಿದ್ದ ತ್ರೈಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.

ಅಲ್ಪಸಂಖ್ಯಾತರಿಗೆ ಇರುವ ತೊಂದರೆಗಳ ಕುರಿತು ಪಟ್ಟಿ ಮಾಡಿ ಸಭೆಯಲ್ಲಿ ಮಂಡಿಸುವಂತೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗೆ ಸೂಚನೆ ನೀಡಿದರು.

ನರಸಿಂಹರಾಜ ವಿಧಾನ ಸಭಾ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರು ಮಾತನಾಡಿ ಸಮುದಾಯಗಳ ನಡುವೆ ಅಸಮಾನತೆಯನ್ನು ಹೋಗಲಾಡಿಸಲು ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದಡಿ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಈ ಸೌಲಭ್ಯಗಳನ್ನು ಅಲ್ಪಸಂಖ್ಯಾತರು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಆರೋಗ್ಯ ಶಿಕ್ಷಣ ಹಾಗೂ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಕಮಿಟಿಯಲ್ಲಿ ಇರುವ ಸದಸ್ಯರು ಜಿಲ್ಲೆಯಲ್ಲಿ ಪ್ರವಾಸ ಮಾಡಿ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳನ್ನು ಗುರುತಿಸಿ ಸಭೆಯಲ್ಲಿ ಚರ್ಚಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಹೆಚ್ಚಳ ಮಾಡಲು ಶಿಕ್ಷಣ ಇಲಾಖೆ ಕ್ರಮ ವಹಿಸಬೇಕು. ಉರ್ದು ಶಾಲೆಗಳಲ್ಲಿ ಮಕ್ಕಳಿಗೆ ಉರ್ದು ಭಾಷೆಯ ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಕಲಿಕೆಗೂ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಶಿಲ್ಪಾ ಅವರು ಮಾತನಾಡಿ ಮೈಸೂರು ಜಿಲ್ಲೆಯಲ್ಲಿ 3,61,778 ಅಲ್ಪಸಂಖ್ಯಾತರ ಜನಸಂಖ್ಯೆ ಇದೆ. ಇವರಿಗೆ ಪ್ರಧಾನಮಂತ್ರಿ ಗಳ 15 ಅಂಶಗಳ ಕಾರ್ಯಕ್ರಮದಡಿ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಸಮಿತಿಯ ನಾಮ ನಿರ್ದೇಶಿತ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.