ಪ್ರಧಾನಿ ಜಿಎಸ್‌ಟಿ ಸರಳೀಕರಣ ಮಾಡಿ ಜನರಿಗೆ ಕೊಡುಗೆ ನೀಡಿದ್ದಾರೆ:ಸುಧಾಕರ್

Spread the love

ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎಲ್ಲ ರಾಜ್ಯಗಳ ಗಮನಕ್ಕೆ ತಂದು ಜಿಎಸ್‌ಟಿ ಸುಧಾರಣೆ ತಂದಿದೆ ಎಂದು
ಸಂಸದ ಡಾ.ಕೆ.ಸುಧಾಕರ್‌ ಹೇಳಿದರು.

ರಾಜ್ಯದಲ್ಲಿ ತೆರಿಗೆ ಏರಿಕೆಯಾಗಿದ್ದರೆ, ಕೇಂದ್ರ ಸರ್ಕಾರ ತೆರಿಗೆ ಕಡಿಮೆ ಮಾಡಿ ಜನರಿಗೆ ಆರ್ಥಿಕ ಚೈತನ್ಯ ನೀಡಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಧಾಕರ್, ವಿಜಯದಶಮಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಜಿಎಸ್‌ಟಿಯನ್ನು ಸರಳೀಕರಣ ಮಾಡಿ ಜನರಿಗೆ ಕೊಡುಗೆ ನೀಡಿದ್ದಾರೆ. ಶೇ.18 ರ ತೆರಿಗೆಯನ್ನು ಶೇ.5 ಕ್ಕೆ ತಂದಿದ್ದಾರೆ. ಕೆಲವು ಸರಕು, ಸೇವೆಗಳಲ್ಲಿ ತೆರಿಗೆ ವಿನಾಯಿತಿ ನೀಡಿದ್ದಾರೆ. ನಾನು ಆರ್ಥಿಕ ಸ್ಥಾಯಿ ಸಮಿತಿಯಲ್ಲಿ ಕೆಲಸ ಮಾಡುತ್ತಿದ್ದು, ಇಷ್ಟು ದೊಡ್ಡ ಮಟ್ಟದಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿದಿರಲಿಲ್ಲ. ಮಧ್ಯಮವರ್ಗ ಹಾಗೂ ಬಡಜನರ ಪರವಾಗಿ ನಾನು ಪ್ರಧಾನಿಯವರಿಗೆ ವಿಶೇಷವಾದ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ರೈತರು ಬಳಕೆ ಮಾಡುವ ಟ್ರ್ಯಾಕ್ಟರ್‌, ರಸಗೊಬ್ಬರ, ಹನಿ ನೀರಾವರಿ ಉಪಕರಣಗಳ ತೆರಿಗೆಯನ್ನು ಶೇ.5 ರ ವ್ಯಾಪ್ತಿಗೆ ತರಲಾಗಿದೆ. ಯುಪಿಎ ಅವಧಿಯಲ್ಲಿ ಎಲ್ಲ ಸರಕು, ಸೇವೆಗಳ ಮೇಲೆ ಶೇ.30 ರಷ್ಟು ತೆರಿಗೆ ಇತ್ತು. ಮೋದಿ ಸರ್ಕಾರ ಮೊದಲಿಗೆ ನಾಲ್ಕು ಹಂತಗಳಲ್ಲಿ ತೆರಿಗೆ ತಂದು ಈಗ ಎರಡು ಹಂತಗಳನ್ನು ಉಳಿಸಿಕೊಂಡಿದೆ. ಈ ಸುಧಾರಣೆಯಿಂದ ಎರಡೂವರೆ ಲಕ್ಷ ಕೋಟಿ ರೂ. ಜನರ ಕೈಗೆ ಸಿಗಲಿದೆ ಎಂದು ಅಂದಾಜಿಸಲಾಗಿದೆ,ಇದರಿಂದ ಖರೀದಿ ಸಾಮರ್ಥ್ಯ ಹೆಚ್ಚಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯುಪಿಎಗೆ ಹೋಲಿಸಿದರೆ ಎನ್‌ಡಿಎ ಸರ್ಕಾರ ರಕ್ಷಣಾ ವಲಯಕ್ಕೆ 34 ಪಟ್ಟು ಅಧಿಕ ಅನುದಾನ ನೀಡಿದೆ. ಹೀಗೆ ತೆರಿಗೆ ಹಣವನ್ನು ಕೇಂದ್ರ ಸರ್ಕಾರ ಸದ್ಬಳಕೆ ಮಾಡುತ್ತಿದೆ ಎಂದು ಸುಧಾಕರ್ ತಿಳಿಸಿದರು.

ಕಾಂಗ್ರೆಸ್‌ ಸರ್ಕಾರಕ್ಕೆ ಜಿಎಸ್‌ಟಿ ಎಂದರೆ ಗ್ಯಾರಂಟಿ ಸುಲಿಗೆ ಟ್ಯಾಕ್ಸ್‌. 38 ರೂ. ಇದ್ದ ಹಾಲಿಗೆ 47 ರೂ. ಆಗಿದೆ. ಬಸ್‌ ದರ 100 ಕಿ.ಮೀ. 100 ಇದ್ದಿದ್ದು 115 ರೂ. ಆಗಿದೆ. ಪೆಟ್ರೋಲ್‌ಗೆ 99 ರೂ. ಇದ್ದಿದ್ದು, 103 ರೂ. ಆಗಿದೆ ಹೀಗೆ ಎಲ್ಲದರ ದರ ಏರಿಸಿ ಜನರ ಸುಲಿಗೆ ಮಾಡಿದೆ‌ ಎಂದು ‌ಸುಧಾಕರ್ ಆರೋಪಿಸಿದರು.

ದಲಿತರ ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣವನ್ನು ಗ್ಯಾರಂಟಿಗೆ ಬಳಸಲಾಗಿದೆ. ಪ್ರಸಕ್ತ ಸಾಲಿನ 2025-26 ನೇ ಬಜೆಟ್ ನಲ್ಲಿ ಎಸ್ ಸಿ ಎಸ್ ಪಿ/ಟಿ ಎಸ್ ಪಿ ಅಡಿ 42,017.51 ಕೋಟಿ ರೂ. ಅನುದಾನದಲ್ಲಿ 11,896.84 ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡುವ ಕಾಂಗ್ರೆಸ್‌ ನಾಯಕರು, ದಲಿತರ ನಿಗಮಗಳಿಗೆ ಅನುದಾನ ಕಡಿತ ಮಾಡಿದ್ದಾರೆ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅನುದಾನದಲ್ಲಿ 90 ಕೋಟಿ ರೂ. ಅನುದಾನ ಕಡಿತ, ವಿಶ್ವಕರ್ಮ ನಿಗಮಕ್ಕೆ 12 ಕೋಟಿ ರೂ. ಅನುದಾನ ಕಡಿತ, ಉಪ್ಪಾರ ನಿಗಮಕ್ಕೆ 7 ಕೋಟಿ ರೂ. ಅನುದಾನ ಕಡಿತ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ತೆರಿಗೆ ಇಳಿಕೆ ಮಾಡಿರುವುದರಿಂದ ರಾಜ್ಯಕ್ಕೆ ನಷ್ಟವಾಗಿದೆ ಎಂದು ಈಗ ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದಾರೆ. ಜಿಎಸ್‌ಟಿ ಕೌನ್ಸಿಲ್‌ನಲ್ಲಿರುವ 33 ಸದಸ್ಯರು ಕೂಡ ಇದಕ್ಕೆ ಒಪ್ಪಬೇಕಾಗುತ್ತದೆ. ರಾಜ್ಯ ಸರ್ಕಾರದ ಪರವಾಗಿ ಸಚಿವ ಕೃಷ್ಣ ಭೈರೇಗೌಡರು ಇದಕ್ಕೆ ಸಹಿ ಹಾಕಿದ್ದಾರೆ. ಸರಿ ಇಲ್ಲ ಎಂದಮೇಲೆ ಸಹಿ ಹಾಕಿದ್ದು ಏಕೆ? ಈ ಸುಧಾರಣೆ ಬಗ್ಗೆ ಒಂದು ವರ್ಷದಿಂದಲೇ ಸಿದ್ಧತೆ ನಡೆದಿದೆ. ಕೇಂದ್ರ ಸರ್ಕಾರಕ್ಕೆ ಆದಾಯ ಕಡಿಮೆಯಾದರೂ ಜನರ ಹಿತದೃಷ್ಟಿಯಿಂದ ಈ ಕ್ರಮ ತರಲಾಗಿದೆ. ಈಗ ಹಣದುಬ್ಬರ 2.7% ಹಾಗೂ ಆರ್ಥಿಕ ಬೆಳವಣಿಗೆ ದರ 7.9% ಇದೆ. ಹೀಗೆ ಪ್ರಧಾನಿ ನರೇಂದ್ರ ಮೋದಿ ಜನರಿಗೆ ಆರ್ಥಿಕ ಚೈತನ್ಯ ನೀಡಿದ್ದಾರೆ ಎಂದು ಸುಧಾಕರ್ ವಿವರಣೆ ನೀಡಿದರು.