ಆಟೋಗಳಿಗೆ ಸೂಕ್ತ ಪರ್ಮಿಟ್ ನೀಡದೆ ಸರ್ಕಾರದಿಂದ ದಂಡ- ಎ ಎ ಪಿ ಕಿಡಿ

Spread the love

ಬೆಂಗಳೂರು: ಬಿಎಸ್ 6 ಆಟೋಗಳಿಗೆ ರಾಜ್ಯ ಸಾರಿಗೆ ಇಲಾಖೆ ಇದುವರೆವಿಗೆ ಪರ್ಮಿಟ್ ನೀಡಿಲ್ಲ, ಆದರೆ ಈಗ ಏಕಾಏಕಿ ಆಟೋಗಳಿಗೆ ದಂಡ ವಿಧಿಸಿ ಜಪ್ತಿ ಮಾಡುತ್ತಿರುವುದು ಎಷ್ಟು ಸರಿ ಎಂದು ಆಮ್ ಆದ್ಮಿ ಪಕ್ಷ ಪ್ರಶ್ನಿಸಿದೆ.

2019, 1920 ಎರಡು ವರ್ಷಗಳ ಕೊರೋನಾ ಸಂದರ್ಭದಲ್ಲಿ ಪ್ರಪಂಚದಾದ್ಯಂತ ಲಕ್ಷಾಂತರ ಸಾವು ನೋವುಗಳಿಂದ ತತ್ತರಿಸಿದ ಸಂದರ್ಭ ದಲ್ಲಿ ಸಂಚಾರಕ್ಕೆ ಬಿಡುಗಡೆಯಾದ ಸಾವಿರಾರು ಬಿಎಸ್ 6 ಆಟೋಗಳಿಗೆ ರಾಜ್ಯ ಸಾರಿಗೆ ಇಲಾಖೆ ಇದುವರೆವಿಗೂ ಪರ್ಮಿಟ್ ನೀಡಿಲ್ಲ. ಆದರೆ ಈಗ ಏಕಾಏಕಿ ಆಟೋಗಳಿಗೆ ಎಲ್ಲೆಂದರಲ್ಲಿ ದಂಡ ವಿಧಿಸಿ ಜಪ್ತಿ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಮ್ ಆದ್ಮಿ ಪಕ್ಷವು ಇಂದು ಇಲ್ಲಿ ಕರೆದಿದ್ದ ಸಾರಿಗೆ ಇಲಾಖೆಯ ಸಭೆಯಲ್ಲಿ ಸಚಿವ ರಾಮಲಿಂಗ ರೆಡ್ಡಿ ಅವರನ್ನು ಪ್ರಶ್ನಿಸಿತು.

ಸಭೆಯ ನಂತರ ರಾಜ್ಯ ಆಟೋ ಘಟಕದ ಅಧ್ಯಕ್ಷ ಆಯುಬ್ ಖಾನ್ ಮಾತನಾಡಿ ಏಕಾಏಕಿ ಬಿಎಸ್ 7 ಆಟೋಗಳನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಲು ಅವಕಾಶ ನೀಡಿದ್ದೆ ಇದಕ್ಕೆ ಪ್ರಮುಖ ಕಾರಣ ಎಂದು ಹೇಳಿದರು.

ಕೊರೋನಾ ಸಂದರ್ಭದಲ್ಲಿ ಯಾವುದೇ ಸಾಲ ಸೌಲಭ್ಯಗಳು ಸಿಗದಿದ್ದ ದುಸ್ಥಿತಿಯ ಕಾಲದಲ್ಲಿ ತಮ್ಮ ಜೀವನ ನಡೆಸಲು ಬಿಎಸ್ 6 ಆಟೋಗಳನ್ನು ಖರೀದಿಸಿದ್ದ ಬೆಂಗಳೂರಿನ ಸಾವಿರಾರು ಆಟೋ ಚಾಲಕರು ಸಾರಿಗೆ ಇಲಾಖೆಯಿಂದ ಕೇವಲ ನೊಂದಾವಣಿ ಮಾತ್ರ ಮಾಡಿಕೊಂಡು ಪರ್ಮಿಟ್ ಭಾಗ್ಯವಿಲ್ಲದೆ ಇದುವರೆಗೂ ಸಾರಿಗೆ ಕಚೇರಿಗಳಿಗೆ ಅಲೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಆದರೆ ಈಗ ಏಕಾಏಕಿ ಸಾರಿಗೆ ಇಲಾಖೆಯ ಅಧಿಕಾರಿಗಳು ರಸ್ತೆಗಳಲ್ಲಿ ಅಲ್ಲಲ್ಲಿ ಪರ್ಮಿಟ್ ಇಲ್ಲದ ಕಾರಣ ಬಿಎಸ್ 6 ಆಟೋಗಳನ್ನು ಜಪ್ತಿ ಮಾಡಿ ದುಬಾರಿ ದಂಡ ವಿಧಿಸುತ್ತಿದ್ದಾರೆ ಎಂದು ಆಯುಬ್ ಖಾನ್ ಅಲವತ್ತುಕೊಂಡರು.

ಕೂಡಲೇ ಬಿಎಸ್ 6 ಆಟೋಗಳಿಗೆ ಪರ್ಮಿಟ್ ಭಾಗ್ಯ ನೀಡಿ ಜಪ್ತಿ ಹಾಗೂ ಇನ್ನಿತರ ಕಾನೂನು ಕ್ರಮಗಳಿಂದ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು.

ಅಲ್ಲದೆ ಬಡ ಆಟೋ ಚಾಲಕರು ತಮ್ಮ ಯೂನಿಫಾರಂ , ಎಮಿಷನ್ ಸರ್ಟಿಫಿಕೇಟ್, ಇನ್ಶೂರೆನ್ಸ್ ಗಳನ್ನು ಮಾಡಿಸಿಕೊಳ್ಳಲು ವಾರಗಟ್ಟಲೆ ಕಂಪನಿಗಳ ಮುಂದೆ ಸರಣಿ ಸಾಲಿನಲ್ಲಿ ನಿಲ್ಲುವ ದುಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರಣ ಕೇಳಿದರೆ ಸರ್ವರ್ ಡೌನ್ ಎಂದು ಹೇಳುತ್ತಿದ್ದಾರೆ. ಮೀಟರ್ ತಯಾರಿ ಮಾಡಿಕೊಳ್ಳಲು ಅಂಗಡಿಗಳ ಮುಂದೆ ಕನಿಷ್ಠ 5 ದಿವಸಗಳ ಕಾಲ ಕಾಯಬೇಕಿದೆ. ಅಲ್ಲಿಯ ತನಕ ಬಡ ಆಟೋ ಚಾಲಕರು ಹಾಗೂ ಅವರ ಕುಟುಂಬದವರಿಗೆ ಉಪವಾಸವೇ ಗತಿಯಾಗಿದೆ ಎಂದು ಆಯುಬ್ ಖಾನ್ ತಿಳಿಸಿದರು.

ಈಗಾಗಲೇ ಆಟೋ ಚಾಲಕರು ತಮ್ಮ ಮಕ್ಕಳ ಶಾಲಾ ಶುಲ್ಕ, ಆರೋಗ್ಯ ವೆಚ್ಚ ಹಾಗೂ ಹಬ್ಬ ಹರಿದಿನಗಳ ಸಲುವಾಗಿ ತಮ್ಮಲ್ಲಿದ್ದ ಹಣವನ್ನು ಖರ್ಚು ಮಾಡಿಕೊಂಡು ಸಾಲಗಾರರ ಸುಳಿಗೆ ಸಿಲುಕುವಂತಹ ಪರಿಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ. ಆಟೋ ಚಾಲಕರುಗಳಿಗೆ ಪರ್ಮಿಟ್ ಸೇರಿದಂತೆ ತಮ್ಮ ಎಲ್ಲಾ ದಾಖಲಾತಿಗಳನ್ನು ಸರಿಪಡಿಸಿಕೊಳ್ಳಲು ಮೂರು ತಿಂಗಳು ಕಾಲಾವಕಾಶ ನೀಡಿ ಬಡ ಆಟೋ ಚಾಲಕರ ಕುಟುಂಬ ನಿರ್ವಹಣೆಗೆ ಸರ್ಕಾರ ಈ ಮೂಲಕ ನೆರವಾಗಬೇಕು
ಎಂದು ಪಕ್ಷದ ಪರವಾಗಿ ರಾಮಲಿಂಗಾರೆಡ್ಡಿ ಅವರಲ್ಲಿ ಮನವಿ ಮಾಡಿದರು.