ಮಹಿಳೆಯರು ಸ್ವಾವಲಂಬನೆ ಹೊಂದಲು ಎನ್ ಆರ್ ಎಲ್ ಎಂ ಯೋಜನೆ ಸಹಕಾರಿ:ಕೆ.ಎಂ.ಗಾಯಿತ್ರಿ

ಮೈಸೂರು: ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಎನ್ ಆರ್ ಎಲ್ ಎಂ ಯೋಜನೆ ಸಹಕಾರಿ,
ಗ್ರಾಮಪಂಚಾಯಿತಿಗಳು ಈ ಯೋಜನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಜಿಪಂ ಸಿಇಒ ಕೆ.ಎಂ.ಗಾಯಿತ್ರಿ ತಿಳಿಸಿದರು.

ಪಿರಿಯಾಪಟ್ಟಣ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಗ್ರಾಮಪಂಚಾಯಿತಿ ಮಟ್ಟದಲ್ಲಿ ನಡೆಸುವ ಮಾಸಿಕ ಸಂತೆಯಲ್ಲಿ ಎನ್ ಆರ್ ಎಲ್ ಎಂ ಯೋಜನೆಯ ಮೂಲಕ ಸ್ಥಳೀಯ ಪದಾರ್ಥಗಳ ಮಾರಾಟಕ್ಕೆ ಮಾರುಕಟ್ಟೆಗೆ ಅವಕಾಶ ನೀಡಬೇಕು. ಗ್ರಾಮಪಂಚಾಯಿತಿಗಳು ಈ ನಿಟ್ಟಿನಲ್ಲಿ ಮುಂದುವರೆದರೆ ಜಿಲ್ಲಾ ಮಟ್ಟದಲ್ಲಿ ವೇದಿಕೆ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.

ಬೆಟ್ಟದಪುರ ಗ್ರಾಮಪಂಚಾಯಿತಿಯಲ್ಲಿ ಸ್ವ-ಸಹಾಯ ಸಂಘದ ಮಹಿಳೆಯರು ಈ ಯೋಜನೆಯಡಿ ಆರ್ಥಿಕ ನೆರವು ಪಡೆದು ಬಟ್ಟೆ ಬ್ಯಾಗ್ ಗಳನ್ನು ಸಿದ್ಧಪಡಿಸುತ್ತಿದ್ದು, ಆರ್ಥಿಕವಾಗಿ ಲಾಭಗಳಿಸುತ್ತಿದ್ದಾರೆ. ಉಳಿದ ಗ್ರಾಮಪಂಚಾಯಿತಿಯವರು ಈ ಕಡೆ ಗಮನಹರಿಸಬೇಕು. ಈ ಯೋಜನೆ ಅಳವಡಿಕೆಗೆ ಕೃಷಿ ಸಖಿ, ಪಶು ಸಖಿಗಳನ್ನು ಬಳಸಿಕೊಳ್ಳಬೇಕು,ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಒತ್ತು ನೀಡಿ ಎಂದು ಪಿಡಿಒಗಳಿಗೆ ಸಲಹೆ ನೀಡಿದರು.

ಈಗಾಗಲೇ ಸಂಜೀವಿನಿ ಶೆಡ್ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿರುವ ಪಂಚಾಯಿತಿಗಳಲ್ಲಿ ಕೂಡಲೇ ಕಾಮಗಾರಿಯನ್ನು ಆರಂಭಿಸಿ ಹಾಗೂ ಪ್ರಗತಿಯಲ್ಲಿರುವ ಶಾಲಾ ಶೌಚಾಲಯ, ಕಾಂಪೌಂಡ್, ಆಟದ ಮೈದಾನ ಕಾಮಗಾರಿಗಳನ್ನು ಪೂರ್ಣಗೊಳಿಸಿ ಎಂದು ಗಾಯಿತ್ರಿ ಸೂಚಿಸಿದರು.

ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಪ್ರಭುಸ್ವಾಮಿ ಅವರು ಮಾತನಾಡಿ,ಗ್ರಾಮೀಣ ಪ್ರದೇಶದ ಹಣ್ಣುಗಳು, ಸೊಪ್ಪು, ಧಾನ್ಯ ಪದಾರ್ಥಗಳಿಗೆ ವಿಶೇಷ ಬೇಡಿಕೆ ಹಾಗೂ ಉತ್ತಮ ಬೆಲೆಯಿದ್ದು, ಅದನ್ನು ಒದಗಿಸುವ ಕಾರ್ಯವಾಗಬೇಕು ಎಂದು ಹೇಳಿದರು.

ಕಾರ್ಯನಿರ್ವಾಹಕ ಅಧಿಕಾರಿ ಡಿ.ಬಿ.ಸುನಿಲ್ ಕುಮಾರ್,‌ ಪಿ ಆರ್ ಇ ಡಿ ಎಇಇ ಮಲ್ಲಿಕಾರ್ಜುನಸ್ವಾಮಿ, ಆರ್ ಡಬ್ಲ್ಯೂ ಎಸ್ ಎಇಇ ಕೃಷ್ಣಮೂರ್ತಿ, ಸಹಾಯಕ ನಿರ್ದೇಶಕ(ಗ್ರಾ.ಉ) ಕರುಣಾಕರ್, ಲೆಕ್ಕಾಧಿಕಾರಿ ರಂಗನಾಥ್ ಹಾಗೂ 34 ಗ್ರಾಮಪಂಚಾಯಿತಿ ಪಿಡಿಒಗಳು, ನರೇಗಾ ಹಾಗೂ ಎನ್ ಆರ್ ಎಲ್ ಎಂ ಸಿಬ್ಬಂದಿ ಹಾಜರಿದ್ದರು.