ಮೈಸೂರು: ದಸರಾ ಮತ್ತು ನವರಾತ್ರಿ ಪ್ರಯುಕ್ತ ಮೈಸೂರಿನ ಅಗ್ರಹಾರದ ನವಗ್ರಹ ದೇವಸ್ಥಾನದಲ್ಲಿ ವಿಶೇಷ ಪೂಜೆ ಅಲಂಕಾರ ಮಾಡಿಕೊಂಡು ಬರಲಾಗುತ್ತಿದೆ.
ನಗರದ ಅಗ್ರಹಾರ ಕೆ ಆರ್ ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ಶ್ರೀ ನವಗ್ರಹ, ಶ್ರೀ ಮೃತ್ಯುಂಜಯೇಶ್ವರ,ಶ್ರೀ ಪಾರ್ವತಿ ದೇವಾಲಯದಲ್ಲಿ ನವರಾತ್ರಿಯ ವಿಶೇಷ ಪೂಜಾಕಾರ್ಯಗಳನ್ನು ನೆರವೇರಿಸಲಾಗುತ್ತಿದೆ.
ಶಿವಾರ್ಚಕರಾದ ಎಸ್.ಯೋಗಾನಂದ ಅವರ ಪುತ್ರ ಅಭಿನಂದನ್ ಅವರು ತಾಯಿ ಪಾರ್ವತಿಗೆ ವಿಶೇಷ ಅಲಂಕಾರಗಳನ್ನು ಮಾಡುತ್ತಿದ್ದಾರೆ.
ನವರಾತ್ರಿ ನಾಲ್ಕನೆ ದಿನವಾದ ಗುರುವಾರ ತಾಯಿ ಕೂಷ್ಮಾಂಡ ದೇವಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ. ತಾಯಿಯನ್ನು ನೋಡಲು ಎರಡು ಕಣ್ಣು ಸಾಲದೆಂಬಂತಿದೆ.ಅಷ್ಟು ಚೆಂದದ ಅಲಂಕಾರ ಮಾಡಿದ್ದಾರೆ ಅಭಿನಂದನ್.

ದೇವಿಯು ಅರಿಶಿಣ ಬಣ್ಣದಲ್ಲಿ ಸಿರಿಗೌರಿಯಂತೆ ಕಾಣುತ್ತಿದ್ದಾಳೆ. ತಾಯಿ ಪಾರ್ವತಿಗೆ ವಿವಿಧ ಹೂಗಳು ಅದರಲ್ಲೂ ವಿಶೇಷವಾಗಿ ವೀಳ್ಯದೆಲೆ ಹಾರದಿಂದ ಅಲಂಕರಿಸಲಾಗಿದೆ.
ಜತೆಗೆ ಬೆಳ್ಳಿಯ ಕೈಗಳು ಹಾಗೂ ಕಿರೀಟಧಾರಿ ಮತ್ತು ತ್ರಿಶೂಲಧಾರಿಯಾಗಿ ಭವ್ಯವಾಗಿ ಕಾಣುತ್ತಾಳೆ.ನೂರಾರು ಭಕ್ತರು ಆಗಮಿಸಿ ತಾಯಿಯ ದರ್ಶನ ಪಡೆದು ಮಂಗಳಾರತಿ ತೆಗೆದುಕೊಂಡು ಪ್ರಸಾದ ಸ್ವೀಕರಿಸಿದರು.