ಬೆಂಗಳೂರು: ಪಂಜಾಬ್ ರಾಜ್ಯದ ಆಮ್ ಆದ್ಮಿ ಪಕ್ಷದ ಸಿಎಂ ಭಗವಂತ ಮಾನ್ ಸರ್ಕಾರ ಅತಿವೃಷ್ಟಿಯಿಂದ ಬೆಳೆ ಹಾನಿಯಾದ ರೈತರ ಜಮೀನಿಗೆ ಘೋಷಿಸಿರುವಂತೆ ರಾಜ್ಯದ ರೈತರಿಗೂ ಸಹ ಪ್ರತಿ ಎಕರೆಗೆ 20 ಸಾವಿರ ರೂ ಪರಿಹಾರ ನೀಡಬೇಕೆಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ
ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಈ ಕುರಿತು ಮಾತನಾಡಿದ್ದು, ರಾಜ್ಯ ಸರ್ಕಾರವು ಹೆಕ್ಟೇರ್ ಲೆಕ್ಕದಲ್ಲಿ ಘೋಷಿಸಿರುವ 17,000 ಮತ್ತು 25,000 ರೂ.ಗಳು ಅರೆಕಾಸಿನ ಮಜ್ಜಿಗೆಯಂತಿದೆ, ಉತ್ತರ ಕರ್ನಾಟಕದ ರೈತರು ಖಾಸಗಿಯವರಿಂದ ಸಾಲ,ಸೋಲ ಮಾಡಿ ಅತಿವೃಷ್ಟಿಯಿಂದಾದ ಅನಾಹುತಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಬಂದಿದೆ. ಸರ್ಕಾರ ನೀಡುವ ಪರಿಹಾರದಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರನ್ನು ಪಾರು ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ಪಂಜಾಬ್ ಸರ್ಕಾರವು ಕ್ಷಿಪ್ರಗತಿಯಲ್ಲಿ ವೈಜ್ಞಾನಿಕವಾಗಿ ಸಮೀಕ್ಷೆ ಪೂರ್ಣಗೊಳಿಸಿ ದೇಶದಲ್ಲಿಯೇ ಅತಿ ಹೆಚ್ಚಿನ ಪರಿಹಾರ ಧನವನ್ನು ಘೋಷಿಸಿದೆ, ರಾಜ್ಯದಲ್ಲಿ ಇದುವರೆಗೂ ಜಂಟಿ ಸಮೀಕ್ಷೆ ಕಾರ್ಯ ಪೂರ್ಣ ಗೊಂಡಿಲ್ಲ, ಕೃಷಿ ಅಧಿಕಾರಿಗಳ ನಿಧಾನ ಗತಿಯ ಸರ್ವೆ ಕಾರ್ಯಗಳನ್ನು ನೋಡಿದರೆ ಮೂರ್ನಾಲ್ಕು ತಿಂಗಳಾದರೂ ಮುಗಿಯುವುದಿಲ್ಲ. ಆದರೆ ಕೃಷಿ ಸಚಿವರು ಪರಿಹಾರವನ್ನು ಈಗಲೇ ಘೋಷಿಸಿಬಿಟ್ಟಿದ್ದಾರೆ, ಯಾವ ರೀತಿ ರೈತರಿಗೆ ಈ ಅಲ್ಪ ಮೊತ್ತ ತಲುಪಲು ಸಾಧ್ಯ ಎಂಬುದನ್ನು ಕೃಷಿ ಸಚಿವರು ಉತ್ತರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಈ ರೀತಿಯ ಸೋಗಲಾಡಿತನ ವರ್ತನೆಯನ್ನು ಬಿಟ್ಟು ಕೂಡಲೇ ಮುಖ್ಯಮಂತ್ರಿಗಳು ಹಾಗೂ ಕೃಷಿ ಸಚಿವರು ಶೀಘ್ರವೇ ಜಂಟಿ ಸರ್ವೆ ಕಾರ್ಯ ಮುಗಿಸಿ ಪಂಜಾಬ್ ಸರ್ಕಾರದ ಮಾದರಿಯಲ್ಲಿ ಎಕರೆಗಳಲ್ಲಿ ಪರಿಹಾರ ಧನವನ್ನು ಮರು ಘೋಷಿಸಬೇಕೆಂದು ಜಗದೀಶ್ ವಿ. ಸದಂ ಒತ್ತಾಯಿಸಿದ್ದಾರೆ.