ಪಂಚ ಗ್ಯಾರಂಟಿ ಯೋಜನೆ; ಹಾಡಿ ಜನರಿಗೆ ಅರಿವು ಮೂಡಿಸಿ:ಅರುಣ್ ಕುಮಾರ್

Spread the love

ಮೈಸೂರು: ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ನಡೆಸಿ ಹಾಡಿ ಜನಗಳಿಗೆ ಜಾಗೃತಿ ಮೂಡಿಸುವಂತೆ
ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನದ ಪ್ರಾಧಿಕಾರದ ಅಧ್ಯಕ್ಷರಾದ ಅರುಣ್ ಕುಮಾರ್ ಎಸ್. ಅವರು ಹೇಳಿದರು.

ಪಂಚ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಮಾಡಬೇಕು ಎಂದು ಅವರು‌ ಸೂಚಿಸಿದರು.

ಜಿಲ್ಲಾ ಪಂಚಾಯತ್ ನ ಡಿ. ದೇವರಾಜ ಅರಸು ಸಭಾಂಗಣದಲ್ಲಿ ಹಮಿಕೊಂಡಿದ್ದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಹಾಡಿ ಪ್ರದೇಶಗಳು ಇರುವ ಪ್ರದೇಶಗಳಲ್ಲಿ ಅಧಿಕಾರಿಗಳು ಶಿಬಿರ ಆಯೋಜಿಸಿ ಅವರಿಗೆ ಗ್ಯಾರಂಟಿ ಯೋಜನೆ ಬಗ್ಗೆ ತಿಳಿಸಬೇಕು, ಅವರಿಗೆ ಎಲ್ಲಾ ಯೋಜನೆಗಳು ಲಭ್ಯವಾಗುತ್ತಿದೆಯಾ ಎಂದು ಪರಿಶೀಲನೆ ಮಾಡಬೇಕು. ಒಂದು ವೇಳೆ ಯೋಜನೆಗಳಿಗೆ ಅರ್ಜಿ ಸಲ್ಲಿಸಿ ತಿರಸ್ಕೃತಗೊಂಡಿದ್ದರೆ ಅರ್ಜಿಗಳನ್ನೂ ಪರಿಶೀಲಿಸಿ, ಅವರಿಗೆ ಎಲ್ಲಾ ಯೋಜನೆಗಳು ತಲುಪುವಂತೆ ಮಾಡಬೇಕು ಎಂದು ತಿಳಿಸಿದರು.

ಬಡವರ ಪಾಲಿನ ಯೋಜನೆಗಳಲ್ಲಿ ಒಂದಾದ ಉಚಿತ ಅನ್ನಭಾಗ್ಯ ವಿತರಣೆ ಯೋಜನೆಯಲ್ಲಿ ಹಲವು ದೂರುಗಳು ಕೇಳಿ ಬಂದಿದ್ದು ಕೆಲವು ಭಾಗಗಳಲ್ಲಿ ಕಳಪೆ ಗುಣಮಟ್ಟದ ಅಕ್ಕಿ, ರಾಗಿ ಸರಬರಾಜು ಪೂರೈಕೆಯಾಗುತ್ತಿದೆ ಎಂಬ ದೂರುಗಳು ಬಂದಿದೆ, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ದಾಸ್ತಾನುಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸೂಚಿಸಿದರು.

ಗೃಹಲಕ್ಷ್ಮಿ ಯೋಜನೆ ಇನ್ನೂ ಅನೇಕ ಮಹಿಳೆಯರಿಗೆ ದೊರೆಯುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದೆ,ಮೊದಲು ಅದರ ಬಗ್ಗೆಯೂ ಗಮನ ಹರಿಸಬೇಕು. ಸರಿಯಾಗಿ ಹಣ ಪಾವತಿಯಾಗುತ್ತಿದೆಯ, ಯುವ ನಿಧಿ ಯೋಜನೆಯಲ್ಲಿ ಯಾವುದೇ ತೊಂದರೆ ಕಂಡುಬಂದಿಲ್ಲ ಆದರೂ ಸಹ ಹಾಡಿ ಜನರಿಗೆ ಯುವನಿಧಿ ಸರಿಯಾಗಿ ತಲುಪುತ್ತಿದಿಯಾ ಎಂದು ಪರಿಶೀಲಿಸಿ ಯುವನಿಧಿ ಯೋಜನೆ ಎಲ್ಲಾ ಯುವಕ ಯುವತಿಯರಿಗೆ ಸಿಗುವಂತೆ ಮಾಡಬೇಕು ಎಂದು ಆಯಾ ಅಧಿಕಾರಿಗಳಿಗೆ ಆದೇಶಿಸಿದರು.

ಶಕ್ತಿ ಯೋಜನೆಯಲ್ಲಿ ಅನೇಕ ಕಡೆಗಳಿಂದ ದೂರುಗಳು ಬಂದಿದ್ದು, ಆದಷ್ಟು ಬೇಗ ದೂರುಗಳನ್ನು ಪರಿಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು, ಗೃಹಜ್ಯೋತಿ ಯೋಜನೆಯ ಯಾವುದೇ ದೂರು ಇಲ್ಲದೆ ಅಚ್ಚುಕಟ್ಟಾಗಿ ನಡೆದುಕೊಂಡು ಬರುತ್ತಿದೆ ಈ ಯೋಜನೆಯನ್ನು ಹಾಗೆಯೇ ಮುಂದುವರೆಸಿಕೊಂಡು ಹೋಗಿ ಎಂದು ಹೇಳಿ ಅರುಣ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್ , ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಪ್ರೊ. ಶಿವಕುಮಾರ್, ಹುಣಸೂರು ಬಸವಣ್ಣ, ಸಾ. ಮ. ಯೋಗೇಶ್, ಗ್ಯಾರಂಟಿ ಯೋಜನೆಯ ಸದಸ್ಯರಾದ ಲತಾ , ಕೆ.ಮಾರುತಿ, ಮಹದೇವಪ್ರಭು.ಬಿ , ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.