ಮೈಸೂರು: ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ನಡೆಸಿದ ಹತ್ಯಾಕಾಂಡ ಖಂಡಿಸಿ ಕಪ್ಪು ಪಟ್ಟಿ ಧರಿಸಿ ಕರ್ನಾಟಕ ಸೇನಾಪಡೆ ಸದಸ್ಯರು ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಜಮ್ಮು-ಕಾಶ್ಮೀರ ಭೂಲೋಕದ ಸ್ವರ್ಗವೇ ಸರಿ. ಆದರೆ ಇಲ್ಲಿ ಪದೇಪದೇ ಉಗ್ರಗಾಮಿಗಳಿಂದ ಹಿಂದುಗಳ ಮೇಲೆ ಹತ್ಯೆಗಳು ನಡೆಯುತ್ತಲೇ ಇವೆ. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಉಗ್ರಗಾಮಿಗಳು ಯಾವುದೇ ಬಿಲದಲ್ಲಿ ಅಡಗಿ ಕುಳಿತಿದ್ದರು ಸಹ ಅವರನ್ನು ನಿರ್ನಾಮ ಮಾಡಬೇಕು ಎಂದು ಆಗ್ರಹಿಸಿದರು.

ಮತ್ತೊಮ್ಮೆ ಯಾವ ಉಗ್ರರು ನಮ್ಮ ದೇಶದೊಳಗೆ ನುಸುಳದಂತೆ, ಇಂತಹ ಘಟನೆಗಳು ಮರುಕಳಿಸದಂತೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮವಹಿಸಿ ಹೆಚ್ಚಿನ ಸೈನಿಕರುಗಳನ್ನು ನಿಯೋಜನೆ ಮಾಡಬೇಕು. ಧರ್ಮದ ಕಾರಣಕ್ಕಾಗಿ ಅಧರ್ಮದಿಂದ ಅಮಾಯಕ ಹಿಂದುಗಳನ್ನು ಕೊಂದ ಪಾಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಇಡೀ ಜಗತ್ತು ನಮ್ಮ ಭಾರತದ ಪರವಾಗಿದೆ, ಆದರೆ ಭಾರತದಲ್ಲಿನ ಕೆಲ ವಿರೋಧ ಪಕ್ಷಗಳು ಪಾಕಿಸ್ತಾನದ ಪರವಾಗಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಕರ್ನಾಟಕ ಸೇನಾಪಡೆಯ ಸದಸ್ಯರು ಬೇಸರ ವ್ಯಕ್ತಪಡಿಸಿದರು.
ಈ ವಿಚಾರದಲ್ಲಿ ಸಮಸ್ತ ಭಾರತೀಯರು, ಸರ್ವ ಪಕ್ಷಗಳು ಒಂದಾಗಬೇಕು, ಭಾರತದ ಶಕ್ತಿಪ್ರದರ್ಶನವಾಗಬೇಕು. ಪಕ್ಷಾತೀತವಾಗಿ, ಜಾತ್ಯತೀತವಾಗಿ ಈ ದುಷ್ಕೃತ್ಯವನ್ನು ಎಲ್ಲರೂ ಖಂಡಿಸಲೇಬೇಕು ಎಂದು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಕರೆ ನೀಡಿದರು.

ಸ್ಥಳೀಯರ ಸಹಕಾರವಿಲ್ಲದೇ ಈ ಕೃತ್ಯವನ್ನು ಎಸಗಲು ಉಗ್ರರಿಗೆ ಸಾಧ್ಯವಿಲ್ಲ. ಉಗ್ರರಿಗೆ ಸಹಕಾರ ನೀಡುತ್ತಿರುವವರ ಮೇಲೆ ತೀವ್ರ ನಿಗಾ ಇರಿಸಿ ಅಮಾಯಕ ಹಿಂದೂಗಳ ಸಾವಿಗೆ ಕಾರಣವಾಗಿರುವವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಹೇಳಿದರು.
ವಿಶ್ವಸಂಸ್ಥೆ ಈ ಭಯೋತ್ಪಾದಕರ ಹುಟ್ಟನ್ನು ಅಡಗಿಸಬೇಕು.ಪ್ರಪಂಚದ ಯಾವುದೇ ಮೂಲೆಯಲ್ಲೂ ಈ ರೀತಿ ಕೃತ್ಯ ನಡೆಯಬಾರದು, ಕೇಂದ್ರ ಸರ್ಕಾರ ಪಿ ಒ ಕೆ ಯನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಧಾನಿಗಳು ಕೂಡಲೇ ನಮ್ಮ ಭಾರತವನ್ನು ಭರತ ಖಂಡವನ್ನು, ಹಿಂದೂಸ್ಥಾನವನ್ನು ಹಿಂದೂ ರಾಷ್ಟ್ರ ವನ್ನಾಗಿ ಘೋಷಣೆ ಮಾಡಬೇಕೆಂದು ಪ್ರತಿಭಟನಾ ನಿರತರು ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಹಾಗೂ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯ ಅಧ್ಯಕ್ಷ ಸಿ.ಜಿ ಗಂಗಾಧರ್ ವಹಿಸಿದ್ದರು.
ಮಹಿಳಾ ಅಧ್ಯಕ್ಷೆ ಲತಾ ರಂಗನಾಥ್, ಲಿಂಗಪ್ಪ, ಪ್ರಭುಶಂಕರ, ಮಧುವನ ಚಂದ್ರು, ಪದ್ಮ, ರಘುರಾಂ, ಮಂಜುನಾಥ್, ಭಾಗ್ಯಮ್ಮ, ಶಿವಕುಮಾರ್, ಪೂರ್ಣಿಮಾ, ಲಕ್ಷಿ, ಶಿಲ್ಪ, ಪ್ರಮೀಳಾ, ಕೃಷ್ಣೇಗೌಡ, ಸಿಂದುವಳ್ಳಿ ಶಿವಕುಮಾರ್, ಮೂರ್ತಿ ಲಿಂಗಯ್ಯ, ಎಳನೀರು ರಾಮಣ್ಣ, ದರ್ಶನ್ ಗೌಡ, ಅನಿತಾ, ಪರಿಸರ ಚಂದ್ರು, ಹನುಮಂತಯ್ಯ, ಆನಂದ್ ಗೌಡ, ಯಶೋಧ, ರಘು ಅರಸ್, ಕುಮಾರ್,ರವೀಶ್, ಪ್ರಭಾಕರ್, ರವಿ ನಾಯಕ್, ಸೌಭಾಗ್ಯ, ವಿಷ್ಣು, ಮಹದೇವಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.