ಸಂಕ್ರಾಂತಿ ದಿನವೇ ಸೆಟ್ಟೇರಿದ ದೊಡ್ಮನೆ ಸೊಸೆ: ಆಸ್ಕರ್ ಕೃಷ್ಣ ಚಿತ್ರಕ್ಕೆ ಶುಭ ಹಾರೈಸಿದ ಸಾ.ರಾ ಗೋವಿಂದು.

Spread the love

ಬೆಂಗಳೂರು: ನಿರ್ದೇಶಕ ಆಸ್ಕರ್ ಕೃಷ್ಣ ಮತ್ತೊಂದು ಸಿನಿಮಾ ಶುರು ಮಾಡಿದ್ದು, ಹೊಸ ಚಿತ್ರಕ್ಕೆ “ದೊಡ್ಮನೆ ಸೊಸೆ” ಎಂಬ ಶೀರ್ಷಿಕೆಯನ್ನಿಟ್ಟಿದ್ದಾರೆ.

ಮಾನ್ಯ ಸಿನಿ ಕ್ರಿಯೇಷನ್ಸ್ ಲಾಂಚನದಲ್ಲಿ ತೇಜ್ ವಿನಯ್.ಎಸ್ ದೊಡ್ಮನೆ ಸೊಸೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕರಾಗಿ ಪ್ರವೇಶ ನೀಡಿದ್ದಾರೆ.

ವರ್ಷದ ಮೊದಲ ಹಬ್ಬ “ಸಂಕ್ರಾಂತಿ” ಯಂದು ಹಿರಿಯ ನಿರ್ಮಾಪಕರು ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಸಾ.ರಾ ಗೋವಿಂದು ಅವರು “ದೊಡ್ಮನೆ ಸೊಸೆ” ಶೀರ್ಷಿಕೆಯನ್ನು ಬಿಡುಗಡೆ ಮಾಡಿದರು.

ಪ್ರತಿ ಹೆಣ್ಣು ಮಗಳೂ ಒಂದು ಮನೆಗೆ ಸೊಸೆಯಾಗಿ ಪ್ರವೇಶ ನೀಡುತ್ತಾಳೆ, ಆ ಮನೆಗೆ ಬರುವ ಸೊಸೆಯ ವ್ಯಕ್ತಿತ್ವ ಮತ್ತು ನಡತೆ ಇಡೀ ಮನೆಯ ಗೌರವ ಹಾಗೂ ಘನತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಈ ವೇಳೆ ಸಾ ರಾ ಗೋವಿಂದು ತಿಳಿಸಿದರು.

ಹೆಣ್ಣು ಕಟ್ಟಲೂ ಬಲ್ಲಳು, ಕೆಡವಲೂ ಬಲ್ಲಳು. ಆಸ್ಕರ್ ಕೃಷ್ಣ ಅವರ ಚಿತ್ರದ ಕಥೆಯ ಪಾತ್ರವು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಲಿ, ಮುರಿದ ಮನೆ, ಮನಗಳ ಪುನಃಶ್ಚೇತನಕ್ಕೆ ಸ್ಪೂರ್ತಿಯಾಗಲಿ ಎಂದು ಹೇಳಿ‌ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದರು ಸಾ.ರಾ.ಗೋವಿಂದು.

ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಎಂ.ನರಸಿಂಹಲು‌ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಿರ್ಮಾಪಕ ಡಾ. ಸುನಿಲ್ ಕುಮಾರ್ ಆರ್.ಎಂ ಅವರ ಪುತ್ರ ತೇಜ್ ವಿನಯ್.ಎಸ್ ನಿರ್ಮಾಣದ ಚೊಚ್ಚಲ ಚಿತ್ರ “ದೊಡ್ಮನೆ ಸೊಸೆ” ಯ ಕಥೆಯನ್ನು ಆಸ್ಕರ್ ಕೃಷ್ಣ ಅವರೇ ಬರೆದಿದ್ದು, ಇದು ಅವರ ನಿರ್ದೇಶನದ ಏಳನೇ ಚಿತ್ರವಾಗಿದೆ.

ನಿತೀಶ್.ವಿ ಸಂಗೀತ, ಮೈಸೂರು ಸೋಮು ಛಾಯಾಗ್ರಹಣ, ಕೌಶಿಕ್ ಕಿರಣ್ ಸಂಕಲನ, ಬಿ. ನಿಂಗರಾಜ್ ನಿರ್ಮಾಣ ಮೇಲ್ವಿಚಾರಣೆ ಹಾಗೂ ವಿನಯ್ ಕುಮಾರ್ ಸಂಭಾಷಣೆ ಚಿತ್ರಕ್ಕಿದೆ.

ಕಲಾವಿದರ ಆಯ್ಕೆ ಕೆಲಸ ಮುಗಿಯುವ ಹಂತದಲ್ಲಿದ್ದು “ದೊಡ್ಮನೆ ಸೊಸೆ” ಪಾತ್ರವನ್ನು ಯಾರು ಮಾಡಲಿದ್ದಾರೆ? ಎಂಬ ಪ್ರಶ್ನೆಗೆ ಒಂದೆರಡು ದಿನಗಳಲ್ಲಿ ಉತ್ತರ ದೊರೆಯಲಿದೆ ಎಂದು ಆಸ್ಕರ್ ಕೃಷ್ಣ ತಿಳಿಸಿದ್ದಾರೆ.

ಫೆಬ್ರವರಿ ಮೊದಲ ವಾರದಿಂದ ಚಿತ್ರೀಕರಣ ಪ್ರಾರಂಭವಾಗಿ ಒಂದೇ ಶೆಡ್ಯೂಲ್ ನಲ್ಲಿ ಸಂಪೂರ್ಣ ಚಿತ್ರೀಕರಣ ಮುಗಿಸಿ ಏಪ್ರಿಲ್ ನಲ್ಲಿ ಚಿತ್ರ ಬಿಡುಗಡೆ ಮಾಡಲಾಗುವುದು ಎಂದು ನಿರ್ಮಾಪಕ ತೇಜ್ ವಿನಯ್ ತಿಳಿಸಿದರು.