ಮೈಸೂರು: ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಒನ್ ನೇಶನ್ ಒನ್ ಸಬ್‌ಸ್ಕ್ರಿಪ್ಷನ್ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು.
ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಈ ವಿಶೇಷ ಉಪನ್ಯಾಸವನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮಕ್ಕೆ ಅಖಿಲ ಭಾರತೀಯ ವಾಕ್ ಶ್ರವಣ ಸಂಸ್ಥೆಯ ಸಹಾಯಕ ಗ್ರಂಥಾಲಯ ಮತ್ತು ಮಾಹಿತಿ ಅಧಿಕಾರಿ ಡಾ. ನಂದೀಶ. ಬಿ. ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು.
ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಅಬ್ದುಲ್ ರೆಹಮಾನ ಎಂ ಉದ್ಘಾಟಿಸಿ ಮಾತನಾಡಿದರು.
ಮಾಹಿತಿ ಸಂಪನ್ಮೂಲಗಳ ಹಂಚಿಕೆ ಹಾಗೂ ದೇಶದಾದ್ಯಂತ ಜ್ಞಾನ ಲಭ್ಯತೆ ಸುಗಮವಾಗಿಸುವಲ್ಲಿ ಒಎನ್ಒಎಸ್ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.
ಐಕ್ಯೂಎಸಿ ಸಂಯೋಜಕರಾದ ಡಾ. ನಂದಕುಮಾರ್ ವಿ. ಕಾರ್ಯಕ್ರಮದ ಸಾರವನ್ನು ವಿವರಿಸಿ, ಡಿಜಿಟಲ್ ಕಾಲದಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ತಿಳಿಯಬೇಕಾದ ಪ್ರಮುಖ ರಾಷ್ಟ್ರೀಯ ಉಪಕ್ರಮಗಳಲ್ಲಿ ಒಎನ್ಒಎಸ್ ಒಂದು ಎಂದು ತಿಳಿಸಿದರು.
ಕಾಲೇಜಿನ ಗ್ರಂಥಪಾಲಕರಾದ ಶ್ರೀ ಜೈಪ್ರಕಾಶ್, ಎಚ್. ಎಲ್ ಅವರು, ಗ್ರಂಥಾಲಯ ಸೇವೆಗಳ ಬಲವರ್ಧನೆಗೆ ಇಂತಹ ಉಪನ್ಯಾಸಗಳು ಅನುಕೂಲಕರವೆಂದು ಅಭಿಪ್ರಾಯಪಟ್ಟರು.
ಸಂಪನ್ಮೂಲ ವ್ಯಕ್ತಿ ಡಾ. ನಂದೀಶ, ಬಿ. ಮಾತನಾಡಿ,ಒನ್ ನೇಶನ್ ಒನ್ ಸಬ್‌ಸ್ಕ್ರಿಪ್ಷನ್ ಕುರಿತು ಪ್ರಾಯೋಗಿಕ ದೃಷ್ಟಿಕೋನದೊಂದಿಗೆ ವಿವರವಾದ ಮಾಹಿತಿ ನೀಡಿದರು.
ದೇಶವ್ಯಾಪಿ ಶೈಕ್ಷಣಿಕ ಹಾಗೂ ಸಂಶೋಧನಾ ಕ್ಷೇತ್ರಗಳಿಗೆ ONOS ಯೋಜನೆ ನೀಡುವ ಸೌಲಭ್ಯಗಳು, ಸಂಪನ್ಮೂಲಗಳ ಏಕೀಕರಣ, ಪ್ರಕಟಣಾ ಪ್ರವೇಶ ಹಕ್ಕುಗಳ ಸುಗಮತೆ, ಯೋಜನೆಯ ಅಗತ್ಯ, ಉದ್ದೇಶಗಳು ಮತ್ತು ದೇಶದ ಸಂಶೋಧನಾ ಸಮುದಾಯಕ್ಕೆ ಇದು ತರಬಲ್ಲ ಪರಿಣಾಮಕಾರಿ ಪ್ರಯೋಜನಗಳು ಸೇರಿದಂತೆ ಹಲವು ಅಂಶಗಳನ್ನು ಉದಾಹರಣೆಗಳೊಂದಿಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಂವಾದಾತ್ಮಕವಾಗಿ ಪ್ರಶ್ನೋತ್ತರದಲ್ಲಿ ಭಾಗವಹಿಸಿದರು.
