ಮೈಸೂರು: ನಿನ್ನೆ ತಾನೆ ಉದ್ಯಮಿಯೊಬ್ಬರು ಪತ್ನಿ ಮಗ ಹಾಗೂ ತಾಯಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ಸಾಂಸ್ಕೃತಿಕ ನಗರಿಯಲ್ಲಿ ನಡೆದಿದೆ.
ಆನ್ ಲೈನ್ ಬೆಟ್ಟಿಂಗ್ ಗೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಜೋಶಿ ಆಂಟೋನಿ, ಸಹೋದರ ಜೋಬಿ ಆಂಟೋನಿ ಮತ್ತು ಈತನ ಪತ್ನಿ ಸ್ವಾತಿ @ ಶರ್ಮಿಳಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನೆನ್ನೆ ಅಣ್ಣ ಮೃತಪಟ್ಟರೆ ಇಂದು ತಮ್ಮ ಹಾಗೂ ತಮ್ಮನ ಹೆಂಡತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಆನ್ ಲೈನ್ ಗೇಮ್, ಹಣ ಡಬ್ಲಿಂಗ್ ಆಸೆಗೆ ಇಡೀ ಕುಟುಂಬವೇ ಬಲಿಯಾದಂತಾಗಿದೆ.
ಮೃತರು ಮೈಸೂರಿನ ವಿದ್ಯಾನಗರ ಹಾಗೂ ಯರಗನಹಳ್ಳಿ ನಿವಾಸಿಗಳಾಗಿದ್ದು, ಜೋಬಿ ಆಂಟೋನಿ ಹಾಗು ಜೋಷಿ ಆಂಟೋನಿ ಅವಳಿ-ಜವಳಿ.
ಜೋಬಿ ಆಂಟೋನಿ ದಂಪತಿ ಆನ್ ಲೈನ್ ಬೆಟ್ಟಿಂಗ್ ಗಾಗಿ 80 ಲಕ್ಷ ರೂ ಸಾಲ ಮಾಡಿಕೊಂಡಿದ್ದರು. ಸಾಲಗಾರರ ಕಾಟ ತಾಳಲಾರದೆ ನಿನ್ನೆ ಅಣ್ಣ ಜೋಷಿ ಆಂಟೋನಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದರು.
ಸಾವಿಗೆ ಮುನ್ನ ವಿಡಿಯೋ ರೆಕಾರ್ಡ್ ಮಾಡಿ ತಂಗಿಗೆ ಕಳುಹಿಸಿದ್ದ.ತಂಗಿ ಮೇರಿ ಶರ್ಲೈನ್ ಗೂ ಆತ್ಮಹತ್ಯೆ ಮಾಡಿಕೊ, ಮಗುವನ್ನು ಕೊಲ್ಲು ಎಂದು ಆತ್ಮಹತ್ಯೆಗೂ ಮುನ್ನ ಜೋಷಿ ಆಂಟೋನಿ ಪ್ರಚೋದಿಸಿದ್ದ ಎನ್ನಲಾಗಿದೆ.
ಈ ಕಾರಣಕ್ಕೆ ತಂಗಿ ಮೇರಿ ಶರ್ಲೈನ್ ಅವರು ಜೋಬಿ ಆಂಟೋನಿ ಹಾಗೂ ಸ್ವಾತಿ ವಿರುದ್ಧ ಆತ್ಮಹತ್ಯೆ ಪ್ರಚೋದನೆ ಕೇಸ್ ದಾಖಲಿಸಿದ್ದರು. ಮೈಸೂರಿನ ದಕ್ಷಿಣ ಪೊಲೀಸ್ ಠಾಣೆಯಲ್ಲಿ ನಿನ್ನೆ ಜೋಬಿ ಹಾಗೂ ಸ್ವಾತಿ ವಿರುದ್ಧ ಕೇಸು ದಾಖಲಾಗಿತ್ತು.
ಕೇಸ್ ಗೆ ಭಯಪಟ್ಟು ಜೋಬಿ ಹಾಗೂ ಸ್ವಾತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.ತನಿಖೆಯ ನಂತರ ನಿಖರ ಕಾರಣ ಗೊತ್ತಾಗಲಿದೆ.