ನವದೆಹಲಿ: ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ಜೋರಾಗುತ್ತಲೇ ಇದ್ದು,ಹೈ ಕಮಾಂಡ್ ಇದಕ್ಕೆಲ್ಲ ಬ್ರೇಕ್ ಹಾಕಲು ಮುಂದಾಗಿದೆ.
ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಯತ್ನಾಳ್ ಟೀಂ ಬಂಡಾಯ ಸಾರಿದರೆ, ಇತ್ತ ಯತ್ನಾಳ್ ಟೀಂ ವಿರುದ್ಧ ಬಿಎಸ್‌ವೈ ಟೀಂ ತಿರುಗಿ ಬಿದ್ದಿದೆ.
ಇದೆಲ್ಲದರ ನಡುವೆ ಬಿಜೆಪಿಯಲ್ಲಿದ್ದುಕೊಂಡೇ ಕಾಂಗ್ರೇಸ್ ಪರ ಮಾತನಾಡುವ ಮತ್ತೊಂದು ಗುಂಪು ಕೂಡಾ ಏನೇನೊ ಸಾಹಸ ಮಾಡುತ್ತಿದೆ.
ಈ ಗುಂಪುಗಾರಿಕೆಯಿಂದ ಬೇಸತ್ತ ಹೈಕಮಾಂಡ್ ಒಂದೇ ಕಲ್ಲಿಗೆ ಮೂರು ಹಕ್ಕಿ ಹೊಡೆಯುವ ನಿರ್ಧಾರಕ್ಕೆ ಬಂದಿದ್ದು, ಬಿಜೆಪಿಯ ಐವರು ನಾಯಕರಿಗೆ ಶೋಕಾಸ್ ನೋಟಿಸ್ ನೀಡಿದೆ.
ರಾಜ್ಯ ಬಿಜೆಪಿಯಲ್ಲಿರುವ ಬಣ ರಾಜಕೀಯಕ್ಕೆ ಇತಿಶ್ರೀ ಹಾಡಲು ಮುಂದಾಗಿರುವ ಬಿಜೆಪಿ ಹೈಕಮಾಂಡ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಳಿಕ ಐದು ಮಂದಿ ನಾಯಕರಿಗೆ ಶೋಕಾಸ್ ನೋಟಿಸ್ ನೀಡಿದೆ.
ಬಿಜೆಪಿ ರಾಷ್ಟ್ರೀಯ ಶಿಸ್ತು ಪಾಲನ ಸಮಿತಿ ಯತ್ನಾಳ್ ಬಣದ ಶಾಸಕ ಬಿ.ಪಿ ಹರೀಶ್, ವಿಜಯೇಂದ್ರ ಪರ ಬ್ಯಾಟ್ ಬೀಸುತ್ತಿದ್ದ ಮಾಜಿ ಶಾಸಕರಾದ ಎಂ.ಪಿ ರೇಣುಕಾಚಾರ್ಯ, ಕಟ್ಟಾ ಸುಬ್ರಮಣ್ಮನಾಯ್ಡು ಹಾಗೂ ಬಿಜೆಪಿಯಲ್ಲಿದ್ದು ಕೈಪರ ಮಾತನಾಡುತ್ತಿದ್ದ ಶಿವರಾಮ್ ಹೆಬ್ಬಾರ್ ಮತ್ತು ಎಸ್.ಟಿ ಸೋಮಶೇಖರ್‌ಗೆ ಶೋಕಾಸ್ ನೋಟಿಸ್ ನೀಡಿದೆ.
ಜತೆಗೆ 72 ಗಂಟೆಗಳಲ್ಲಿ ಉತ್ತರ ನೀಡುವಂತೆ ಸೂಚನೆ ನೀಡಿದೆ.
ರಾಜ್ಯಾಧ್ಯಕ್ಷರ ಆಯ್ಕೆಗೂ ಮುನ್ನ ಪಕ್ಷದಲ್ಲಿ ಗುಂಪುಗಾರಿಕೆ ನಡೆಸುತ್ತಿರುವ ಬಣಗಳಿಗೆ ಬುದ್ದಿ ಕಲಿಸಬೇಕು ಎಂದು ಹೈಕಮಾಂಡ್ ನಿರ್ಧರುಸಿರುವ ಹೈಕಮಾಂಡ್ ಹೊಸ ಅಧ್ಯಕ್ಷರ ನೇಮಕದ ಬಳಿಕ ಯಾರೂ ತುಟಿ ಬಿಚ್ಚದಂತೆ ನೋಡಿಕೊಳ್ಳುವ ತಂತ್ರ ಅನುಸರಿಸಿದೆ ಎನ್ನಲಾಗುತ್ತಿದೆ.