ಮೈಸೂರು,ಮಾ.4: ಹಾಡುಹಗಲೇ ತೋಟದ ಮನೆಯಲ್ಲಿ ವೃದ್ದ ದಂಪತಿಯನ್ನ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಹುಣಸೂರು ತಾಲ್ಲೂಕಿನ ನಾಡಪ್ಪನ ಹಳ್ಳಿಯಲ್ಲಿ ನಡೆದಿದ್ದು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ವೃದ್ದ ದಂಪತಿಯನ್ನು ಖಾರ ಆಡಿಸುವ ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಲಾಗಿದೆ.
ಬಿಳಿಕೆರೆ ಹೋಬಳಿಯ ನಾಡಪ್ಪನಹಳ್ಳಿ ಗ್ರಾಮದ ರಂಗಸ್ವಾಮಿಗೌಡ(65) ಇವರ ಪತ್ನಿ ಶಾಂತಮ್ಮ (52)ಕೊಲೆಯಾದ ದುರ್ದೈವಿಗಳು.
ಇವರಿಗೆ ಗ್ರಾಮ ಪಂಚಾಯ್ತಿ ಸದಸ್ಯ ದೇವರಾಜ್ ಸೇರಿದಂತೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳಿದ್ದಾರೆ.
ಸೋಮವಾರ ಸಂಜೆ ಶುಂಠಿ ತುಂಬಲು ಕುಕ್ಕೆ ತರಲು ಕಾರ್ಮಿಕ ಗಣೇಶ್ ತೋಟದ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.
ರಕ್ತದ ಮಡುವಿನಲ್ಲಿ ಮೃತದೇಹಗಳನ್ನ ಕಂಡ ಗಣೇಶ್ ಕೂಡಲೇ ಪುತ್ರ ದೇವರಾಜ್ ಗೆ ತಿಳಿಸಿದ್ದಾರೆ.ದೇವರಾಜ್
ಮನೆಗೆ ಬಂದು ನೋಡಿದಾಗ ತಂದೆ,ತಾಯಿ ಸಾವನ್ನಪ್ಪಿದ್ದುದು ಗೊತ್ತಾಗಿದೆ.
ಕೂಡಲೇ ಬಿಳಿಕೆರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ದಕ್ಷಿಣ ವಲಯ ಐಜಿಪಿ ಡಾ.ಬೋರಲಿಂಗಯ್ಯ,ಎಸ್ಪಿ ವಿಷ್ಣುವರ್ಧನ್ ,ಡಿವೈಎಸ್ಪಿ ಗೋಪಾಲಕೃಷ್ಣ,ಸಬ್ ಇನ್ಸ್ಪೆಕ್ಟರ್ ಲೋಲಾಕ್ಷಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮೈಸೂರಿನಿಂದ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.ತನಿಖೆಯ ನಂತರವೇ ಕೊಲೆಗೆ ಕಾರಣ ತಿಳಿಯಬೇಕಿದೆ.