ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಹೊಣೆಗಾರಿಕೆ ಬೆಳೆಸುವ ಮಹತ್ವದ ವೇದಿಕೆ ಎನ್ಎಸ್ಎಸ್-ಸಿ.ಆರ್.ದಿನೇಶ್

ಹುಣಸೂರು: ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವ ಮಹತ್ವದ ವೇದಿಕೆಯಾಗಿದೆ ಎಂದು ನಂಜನಗೂಡು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಹಾಗೂ ರಾಜ್ಯ ಪ್ರಶಸ್ತಿ ವಿಜೇತರಾದ ಸಿ ಆರ್ ದಿನೇಶ್ ತಿಳಿಸಿದರು.

ತಟ್ಟೆಕೆರೆ ಗ್ರಾಮದಲ್ಲಿ ಅಯೋಜಿಸಲಾಗಿದ್ದ
ಹುಣಸೂರಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ
ಸಮಾರೋಪ ಭಾಷಣದಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಸೇವಾ ಸಂಸ್ಕೃತಿ, ಮಾನವೀಯ ಮೌಲ್ಯಗಳನ್ನು ಬೆಳೆಸುತ್ತದೆ, ಪುಸ್ತಕದ ಜ್ಞಾನಕ್ಕಿಂತ ಹೊರತಾಗಿ ಸಮಾಜದ ನೈಜ ಸಮಸ್ಯೆಗಳನ್ನು ಅರಿಯಲು ಎನ್ಎಸ್ಎಸ್ ಶಿಬಿರಗಳು ವಿದ್ಯಾರ್ಥಿಗಳಿಗೆ ಅವಕಾಶ ಒದಗಿಸುತ್ತವೆ ಎಂದು ಹೇಳಿದರು.

ಎನ್ಎಸ್ಎಸ್ ಶಿಬಿರಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನ, ಆರೋಗ್ಯ ತಪಾಸಣೆ ಶಿಬಿರಗಳು, ಮಹಿಳಾ ಸಬಲೀಕರಣ, ಮತದಾರರ ಜಾಗೃತಿ, ಪರಿಸರ ಸಂರಕ್ಷಣೆ, ರಸ್ತೆ ಸುರಕ್ಷತೆ, ಡಿಜಿಟಲ್ ಸಾಕ್ಷರತೆ ಹಾಗೂ ಸಂವಿಧಾನ ಜಾಗೃತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿರುವುದನ್ನು ದಿನೇಶ್ ಅವರು ಪ್ರಶಂಸಿಸಿದರು.

ಈ ಎಲ್ಲ ಚಟುವಟಿಕೆಗಳು ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ನಾಗರಿಕರಾಗಿ ರೂಪಿಸುವಲ್ಲಿ ಸಹಕಾರಿಯಾಗಿವೆ ಎಂದು ಅಭಿಪ್ರಾಯಪಟ್ಟರು.
ಹುಣಸೂರಿನ ತಹಸಿಲ್ದಾರರಾದ ಮಂಜುನಾಥ್ ಅವರು ಮಾತನಾಡಿ ಇಂದಿನ ಯುವ ಪೀಳಿಗೆ ರಾಷ್ಟ್ರದ ಭವಿಷ್ಯ ಎಂದು ತಿಳಿಸಿದರು.

ಸೇವೆಯ ಮೂಲಕ ಸ್ವಭಾವ ನಿರ್ಮಾಣವೇ ಎನ್ ಎಸ್ ಎಸ್ ಮೂಲ ತತ್ವ. ಸೇವೆಯ ಅನುಭವದಿಂದ ವಿದ್ಯಾರ್ಥಿಗಳಲ್ಲಿ ಸಹಾನುಭೂತಿ, ನಾಯಕತ್ವ ಮತ್ತು ಶಿಸ್ತು ಗುಣಗಳು ಬೆಳೆಯುತ್ತವೆ ಎಂದು ಹೇಳಿದರು.

ಪ್ರತಿಯೊಬ್ಬ ಎನ್ಎಸ್ಎಸ್ ಸ್ವಯಂಸೇವಕರು ತಮ್ಮ ಜೀವನದಲ್ಲಿಯೂ ಸೇವಾ ಮನೋಭಾವವನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪತ್ರಕರ್ತ ಹನುಗೋಡು ನಟರಾಜ್ ಅವರು ಮಾತಾಡಿ, ರಾಷ್ಟ್ರೀಯ ಸೇವಾ ಯೋಜನೆಯಿಂದ ವಿದ್ಯಾರ್ಥಿಗಳು ಕ್ರಿಯಾಶೀಲರಾಗಲು ಸಾಧ್ಯವಾಗುತ್ತದೆ. ಉನ್ನತ ಹುದ್ದೆ ಪಡೆದವರು ಅವರ ವಿದ್ಯಾರ್ಥಿ ಜೀವನದಲ್ಲಿ ಇಂತಹ ಶಿಬಿರದಲ್ಲಿ ಭಾಗವಹಿಸಿದ ಪರಿಣಾಮವಾಗಿ ಅವರುಗಳು ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.

ಕೊಡಗಿನ ಈ ಹಿಂದೆ ಜಿಲ್ಲಾಧಿಕಾರಿ ಆಗಿದ್ದ ಐಎಎಸ್ ಅಧಿಕಾರಿ ಶ್ರೀವಿದ್ಯಾ ಇದಕ್ಕೆ ಉದಾಹರಣೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ರಾಮೇಗೌಡ ಅವರು ಅಧ್ಯಕ್ಷೀಯ ಭಾಷಣ ಮಾಡಿ ರಾಷ್ಟ್ರೀಯ ಸೇವಾ ಯೋಜನೆ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು.

ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ತಟ್ಟೆಕೆರೆ ಶ್ರೀನಿವಾಸ್ ವಿದ್ಯಾರ್ಥಿನಿಯರು ನಮ್ಮ ಗ್ರಾಮಕ್ಕೆ ಆಗಮಿಸಿ ಬಹಳ ಅಚ್ಚುಕಟ್ಟಾಗಿ ಸ್ವಚ್ಛತೆಯ ಅರಿವು ಮೂಡಿಸಿದ್ದಾರೆ. ನಮ್ಮ ಗ್ರಾಮಸ್ಥರು ಎಲ್ಲಾ ರೀತಿಯಲ್ಲೂ ಅವರಿಗೆ ಸಹಕಾರ ನೀಡಿದ್ದಾರೆ. ಅದಕ್ಕಾಗಿ ಎಲ್ಲಾ ಗ್ರಾಮಸ್ಥರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ದೇವರಾಜ್ ಅವರು ವಾರ್ಷಿಕ ವರದಿಯನ್ನು ಮಂಡಿಸಿ, ಸ್ವಯಂಸೇವಕರ ಶ್ರಮ, ತ್ಯಾಗ ಮತ್ತು ಸೇವಾಭಾವವನ್ನು ಸ್ಮರಿಸಿದರು.

ಸಮಾರಂಭದಲ್ಲಿ ಉತ್ತಮ ಸೇವೆ ಸಲ್ಲಿಸಿದ ಎನ್ಎಸ್ಎಸ್ ಸ್ವಯಂಸೇವಕರಿಗೆ ಹಾಗೂ ತಂಡಗಳಿಗೆ ಪ್ರಮಾಣಪತ್ರಗಳು ಮತ್ತು ಗೌರವ ಪತ್ರಗಳನ್ನು ವಿತರಿಸಲಾಯಿತು.

ಸುಶ್ಮಿತಾ ತಮ್ಮ ಶಿಬಿರ ಅನುಭವಗಳನ್ನು ಹಂಚಿಕೊಂಡು,ಎನ್ಎಸ್ಎಸ್ ಜೀವನದಲ್ಲಿ ತಂದಿರುವ ಸಕಾರಾತ್ಮಕ ಬದಲಾವಣೆಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗೌರಮ್ಮ, ಉಪಾಧ್ಯಕ್ಷರಾದ ನಟರಾಜು ,ಉಪನ್ಯಾಸಕರು, ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮದ ಯಜಮಾನರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.