ಮುಡಾ ಹಿಂದಿನ ಆಯುಕ್ತರ ನಿವಾಸದಲ್ಲಿದ್ದಸಿಸಿ ಕ್ಯಾಮರಾ ನಾಪತ್ತೆ:ಅಧಿಕಾರಿಗಳಿಗೆ ನೋಟಿಸ್

ಮೈಸೂರು: ಮುಡಾ ಹಿಂದಿನ ಆಯುಕ್ತರ ನಿವಾಸದಲ್ಲಿದ್ದ ಸಿಸಿ ಕ್ಯಾಮರಾ ನಾಪತ್ತೆ ಸಂಬಂಧ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ಮುಡಾ ಆಯುಕ್ತ ರಘುನಂದನ್ ತಿಳಿಸಿದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಘುನಂದನ್, ಮುಡಾ ಕಟ್ಟಡ ನಿರ್ವಹಣಾ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ,
ಸಿಸಿ ಕ್ಯಾಮರಾ ನಾಪತ್ತೆ ಸಂಬಂಧ ಸಂಪೂರ್ಣ ವಿವರ ಕೇಳಿದ್ದೇನೆ ಎಂದು ಹೇಳಿದರು.

ನಾನು ಜವಾಬ್ದಾರಿ ವಹಿಸಿಕೊಂಡು ಕೆಲವೇ ದಿನಗಳಾಗಿದೆ. ಹಿಂದಿನ ಆಯುಕ್ತರು ಕೂಡ ಕಚೇರಿಯನ್ನ ನಿವಾಸವಾಗಿ ಬಳಕೆ ಮಾಡಿಕೊಂಡಿದ್ದರು. ಹೀಗಾಗಿ ಅಲ್ಲಿ ಯಾರಿದ್ದರು, ಏನೆಲ್ಲಾ ವಸ್ತುಗಳಿದ್ದವು ಇದರ ಬಗ್ಗೆ ಮಾಹಿತಿ ಕೇಳಿದ್ದೇನೆ ಎಂದು ತಿಳಿಸಿದರು.

ಅಲ್ಲಿ ಸಿಸಿ ಕ್ಯಾಮರಾ ಇದ್ದ ಬಗ್ಗೆ ಇಲ್ಲದಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕಟ್ಟಡ ನಿರ್ವಹಣಾ ಅಧಿಕಾರಿ ಕೂಡ ಹೊಸಬರು,ಹಾಗಾಗಿ ತಕ್ಷಣದಲ್ಲಿ ಅವರಿಗೂ ಯಾವುದೇ ಮಾಹಿತಿ ಇಲ್ಲ,ಒಂದೆರಡು ದಿನದಲ್ಲಿ ಮಾಹಿತಿ ತರಿಸಿಕೊಡಲು ಹೇಳಿದ್ದೇನೆ ಎಂದು ನೂತನ ಆಯುಕ್ತರು ತಿಳಿಸಿದರು.

ಮುಡಾದಲ್ಲಿ ಎಲ್ಲಾ ಕೆಲಸ ಎಂದಿನಂತೆ ನಡೆಯುತ್ತಿದೆ. ನಿಯಮದ ಪ್ರಕಾರ ಕೆಲಸ ಮಾಡಲು ಸರ್ಕಾರ ಸೂಚನೆ ನೀಡಿದೆ. ಸರ್ಕಾರದ ಸೂಚನೆಯಂತೆ ಮುಡಾದಲ್ಲಿ ಎಲ್ಲಾ ಕೆಲಸ ನಡೆಯುತ್ತಿದೆ, ಸಾರ್ವಜನಿಕರು ಬಂದು ಮುಡಾದಿಂದ ಆಗಬೇಕಾದ ಕೆಲಸ ಮಾಡಿಸಿಕೊಳ್ಳಬಹುದು ಎಂದು ರಘುನಂದನ್ ಮನವಿ ಮಾಡಿದರು.