ಗ್ರಹಣ ಹಿಡಿದ ಬಿ.ಆರ್.ಅಂಬೇಡ್ಕರ್ ಭವನ:ಸಚಿವ ವೆಂಕಟೇಶ್‌ ಇತ್ತ ಗಮನಿಸಲಿ

Spread the love

ಪಿರಿಯಾಪಟ್ಟಣ: ಮೈಸೂರು ಜಿಲ್ಲೆ ಪಿರಿಯಾ ಪಟ್ಟಣದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಡಾ. ಬಿ.ಆರ್ ಅಂಬೇಡ್ಕರ್ ಭವನವನ್ನು ನಿರ್ಮಿಸಲಾಗಿದೆ.

ಆದರೆ ಈ ಭವನ ಇದುವರೆಗೂ ಉದ್ಘಾಟನೆಯ ಭಾಗ್ಯವನ್ನೇ ಪಡೆಯದಿರುವುದು ಪಿರಿಯಾಪಟ್ಟಣದ ಜನರ ದೌರ್ಭಾಗ್ಯವೇ ಆಗಿದೆ.

15 ಮೂರು 2016ರಲ್ಲಿ ಈ ಡಾ. ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಪಿರಿಯಾಪಟ್ಟಣದ ಈಗಿನ ಶಾಸಕರೂ ಸಚಿವರಾದ ಕೆ ವೆಂಕಟೇಶ್ ಅವರು ಅಂದು ಶಾಸಕರಾಗಿದ್ದರು ಆಗ ಅವರ ಅಧ್ಯಕ್ಷತೆಯಲ್ಲೇ ಈ ಭವನಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗಿತ್ತು.

ಈ ಭವನ ನಿರ್ಮಾಣವಾಗಿ ಇಲ್ಲಿಗೆ ಸುಮಾರು 9 ವರ್ಷಗಳು ಕಳೆದಿವೆ ಅದೇನು ಕಾರಣವೂ ಇದುವರೆಗೂ ಇದು ಉದ್ಘಾಟನೆ ಭಾಗ್ಯ ಕಂಡಿಲ್ಲ. ಇದಕ್ಕೆ ಕಾರಣವನ್ನು ಸಂಬಂಧಪಟ್ಟ ಮಂತ್ರಿಗಳು, ಮುಖ್ಯಮಂತ್ರಿಗಳು ಸ್ಥಳೀಯ ಆಡಳಿತ ಉತ್ತರಿಸಬೇಕಿದೆ.

ಡಾಕ್ಟರ್ ಬಿ ಆರ್ ಅಂಬೇಡ್ಕರ್ ಭವನ ನಿರ್ಮಿಸಿ ಜನಸಾಮಾನ್ಯರ ಉಪಯೋಗಕ್ಕೆ ಬಾರದೆ ಹೋದರೆ ಯಾವ ಪುರುಷಾರ್ಥಕ್ಕಾಗಿ ಇದನ್ನು ನಿರ್ಮಿಸಬೇಕಿತ್ತು ಎಂದು ಜನ ಶಾಪ ಹಾಕುತ್ತಿದ್ದಾರೆ.

ಈ ಭವನವನ್ನು ಹೇಳುವವರು ಕೇಳುವವರು ಇಲ್ಲದಂತಾಗಿದೆ, ಹಾಗಾಗಿ ಇದು ಪುಂಡು ಪೋಕರಿಗಳ ತಾಣವಾಗಿ ಬಿಟ್ಟಿದೆ. ಯಾರು,ಯರೋ ಬಂದು ಇಲ್ಲಿ ಕಸ ಕಡ್ಡಿ ಬಿಸಾಡುತ್ತಾರೆ.

ಯಾರು ಕೇಳೋರು,ಕೇಳೋರು ಇಲ್ಲದ ಕಾರಣ ದುಷ್ಕರ್ಮಿಗಳು ಭವನದ ಗಾಜುಗಳನ್ನು ಒಡೆದು ಹಾಕಿದ್ದಾರೆ.

ಇನ್ನೂ ಹೀಗೆ ಬಿಟ್ಟರೆ ಕಟ್ಟಡದಲ್ಲಿರುವ ಕಿಟಕಿ ಬಾಗಿಲುಗಳನ್ನು ಕತ್ತರಿಸಿ ಹೊತ್ತೊಯ್ಯುವುದು ಖಂಡಿತಾ.

ಈಗಾಗಲೇ ಈ ಭವನದ ಹಿಂದೆ ಮುಂದೆ ಅನೈತಿಕ ಚಟುವಟಿಕೆಗಳು ನಡೆಯುತ್ತಿದೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಗಂಭೀರ ಆರೋಪ ಮಾಡಿದ್ದಾರೆ.

ಅಂದು ಶಾಸಕರಾಗಿದ್ದ ಕೆ ವೆಂಕಟೇಶ್ ಅವರು ಈಗ ಸಚಿವರಾಗಿದ್ದಾರೆ, ಸಿದ್ದರಾಮಯ್ಯ ಅವರು ಈಗಲೂ ಮುಖ್ಯಮಂತ್ರಿ ಆಗಿದ್ದರೆ ತಮ್ಮ ತವರು ಜಿಲ್ಲೆಯಲ್ಲೇ ಹೀಗಾದರೆ ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.

ಕನಿಷ್ಠ ಪಕ್ಷ ಪಿರಿಯಾಪಟ್ಟಣದ ತಾಲೂಕು ಆಡಳಿತ ದವರು ಈ ಭವನದ ಸುತ್ತ ಬೇಲಿಯನ್ನು ಹಾಕಿಸಿ ಗೇಟ್ ಅಳವಡಿಸಬೇಕು. ಇಲ್ಲಿ ಒಂದು ಸುಂದರವಾದ ಪಾರ್ಕ್ ಮಾಡಿದರೆ ಜನರು ವಿಶ್ರಾಂತಿಯನ್ನಾದರೂ ಪಡೆಯುತ್ತಾರೆ ಎಂದು ಅವರು ಸಲಹೆ ನೀಡಿದ್ದಾರೆ.

ಈಗಾಗಲೇ ಒಂಬತ್ತು ವರ್ಷ ಕಳೆದಿರುವುದರಿಂದ ಸುಣ್ಣ ಬಣ್ಣ ಕಾಣದೆ ಕಟ್ಟಡ ಶಿಥಿಲವಾಗುವ ಸಾಧ್ಯತೆ ಇದೆ.

ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಸುಂದರವಾದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಭವನವನ್ನು ನಿರ್ಮಿಸಿದೆ.ಆದರೆ ಉಪಯೋಗಕ್ಕೆ ಬಾರದಂತಾಗಿದೆ ಇದು ಒಂದು ರೀತಿ ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನ ಎಂದು ಚೆಲುವರಾಜು ಕಿಡಿ ಕಾರಿದ್ದಾರೆ.

ಉದ್ಘಾಟನೆ ಕಾಣದೆ ಇರಲು ಕಾಣದ ಕೈಗಳು ಕೆಲಸ ಮಾಡುತ್ತಿವೆ, ಕಟ್ಟಡ ನಿರ್ಮಾಣದಲ್ಲಿ ಬೇಕಾದಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಅವರು ದೂರಿದ್ದಾರೆ.

ಇನ್ನಾದರೂ ಬಿ ಆರ್ ಅಂಬೇಡ್ಕರ್ ಭವನಕ್ಕೆ ಹಿಡಿದಿರುವ ಗ್ರಹಣವನ್ನು ಬಿಡಿಸಿ ಎಲ್ಲಿ ಏನು ತೊಡಕಾಗಿದೆ ಎಂಬುದನ್ನು ಮನಗಂಡು ಸ್ಥಳೀಯ ಶಾಸಕರು ಸಚಿವರೂ ಆದ ಕೆ ವೆಂಕಟೇಶ್ ಅವರು ಭವನ ಉದ್ಘಾಟನೆಗೆ ಕ್ರಮ ಕೈಗೊಳ್ಳಬೇಕೆಂದು ಚೆಲುವರಾಜು ಒತ್ತಾಯಿಸಿದ್ದಾರೆ.