ಬಿಬಿಎಂಪಿಗೆ ಚುನಾವಣೆ ನಡೆಸದೆ ನಾಮನಿರ್ದೇಶನ-ಆಪ್ ಖಂಡನೆ

ಬೆಂಗಳೂರು: ಬೆಂಗಳೂರು ನಗರ ಪಾಲಿಕೆಗಳಿಗೆ ಚುನಾವಣೆ ನಡೆಸದೆ ನಾಮನಿರ್ದೇಶನ ಮಾಡುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆಮ್ ಆದ್ಮಿ ಪಾರ್ಟಿ ಕಿಡಿಕಾರಿದೆ.

ಬೆಳಗಾವಿ ವಿಧಾನಸಭೆಯಲ್ಲಿ ಮಂಡಿಸಿರುವ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ 2025 ರಲ್ಲಿ ಸರ್ಕಾರಕ್ಕೆ ಬೆಂಗಳೂರಿನ 5 ನಗರ ಪಾಲಿಕೆಗಳಿಗೆ ನಾಮ ನಿರ್ದೇಶನ ಮಾಡುವ ಅಧಿಕಾರ ಪಡೆದುಕೊಳ್ಳಲು ಹೊರಟಿರುವುದು ನಿಜಕ್ಕೂ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಕಟುವಾಗಿ ಖಂಡಿಸಿದರು.

ಕಳೆದ ಐದು ವರ್ಷಗಳಿಂದ ಚುನಾವಣೆಗಳನ್ನು ನಡೆಸಲು ಹೆದರಿ ಬೆಂಗಳೂರಿನ ಅಭಿವೃದ್ಧಿ ಹೆಸರಿನಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಈಗಾಗಲೇ ನುಂಗಿ ನೀರು ಕುಡಿದಿದ್ದಾರೆ. ಇಂತಹ ಭ್ರಷ್ಟ ವ್ಯವಸ್ಥೆಯನ್ನು ಮತ್ತಷ್ಟು ಅವಧಿಯ ಕಾಲ ಮುಂದುವರಿಸಲು ಈ ರೀತಿಯ ಕರಾಳ ಮಸೂದೆಯನ್ನು ಮಂಡಿಸುತ್ತಿದ್ದಾರೆ. ಇದು ಬೆಂಗಳೂರಿಗರಿಗೆ ಮಾಡುತ್ತಿರುವ ಅನ್ಯಾಯ ಎಂದು ಹೇಳಿದರು.
ಬೆಂಗಳೂರಿನ ಜನತೆಗೆ ಈ ರಾಷ್ಟ್ರದ ಸಂವಿಧಾನ ಕೊಡ ಮಾಡಿರುವ ಹಕ್ಕಿನಂತೆ ಚುನಾವಣೆಯನ್ನು ನಡೆಸಿ ತಮ್ಮ ತಮ್ಮ ನಗರ ಪಾಲಿಕೆ ಸದಸ್ಯರುಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲ ಅವಕಾಶವನ್ನು ತಪ್ಪಿಸುವುದೇ ಇವರ ಉದ್ದೇಶವಾಗಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರವು ಈ ಮೂಲಕ ಕಾನೂನನ್ನೇ ತಿರುಚಲು ಹೊರಟಿರುವುದನ್ನು ಬೆಂಗಳೂರಿನ ಪ್ರತಿ ಮನೆಮನೆಗಳಿಗೆ ತಿಳಿಸಿ ಸರ್ಕಾರದ ವಿರುದ್ಧ ಆಂದೋಲನವನ್ನು ರೂಪಿಸುತ್ತೇವೆ ಎಂದು ಸೀತಾರಾಮ್ ಗುಂಡಪ್ಪ ತಿಳಿಸಿದರು.

ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ತನ್ನ ಕಾರ್ಯಕರ್ತರುಗಳನ್ನು ಜೀತದಾಳುಗಳಂತೆ ದುಡಿಸಿಕೊಂಡು ಪಕ್ಷದ ವಿರುದ್ಧ ತಿರುಗಿ ಬೀಳುವ ಸಮಯದಲ್ಲಿ ಇವರೆಲ್ಲರಿಗೂ ಬೆಂಗಳೂರಿನ ಎಲ್ಲಾ ಐದು ಪಾಲಿಕೆಗಳಲ್ಲಿಯ ಆಡಳಿತದಲ್ಲಿ ಮೂಗು ತೂರಿಸಿ, ಭ್ರಷ್ಟ ದುಷ್ಟ ಕೂಟಗಳನ್ನು ತಯಾರು ಮಾಡುವ ಹುನ್ನಾರವೇ ಈ ಮಸೂದೆಯ ಮೂಲ ಉದ್ದೇಶವಾಗಿದೆ. ಆಮ್ ಆದ್ಮಿ ಪಕ್ಷವು ಯಾವುದೇ ಕಾರಣಕ್ಕೂ ಇದನ್ನು ಸಹಿಸುವುದಿಲ್ಲ. ಬೆಂಗಳೂರಿಗರನ್ನು ಒಟ್ಟುಗೂಡಿಸಿ ಈ ಕರಾಳ ಮಸೂದೆಯನ್ನು ಜಾರಿಗೊಳಿಸಲು ಬಿಡುವುದಿಲ್ಲ ಎಂದು ಸೀತಾರಾಮ್ ಗುಂಡಪ್ಪ ಎಚ್ಚರಿಸಿದರು.