ಮೈಸೂರು: ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆ ಹಾಗೂ ಪಂಜಿನ ಕವಾಯತು ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸುವ ಉದ್ದೇಶದಿಂದ ಪೊಲೀಸ್ ಇಲಾಖೆ ಹಲವು ನಿಯಮಗಳನ್ನು ಜಾರಿ ಮಾಡಿದೆ.
ಈ ಬಾರಿ ಕಡ್ಡಾಯವಾಗಿ ಜಂಬೂಸವಾರಿ ಹಾಗೂ ಪಂಜಿನ ಕವಾಯತು ಕಾರ್ಯಕ್ರಮಕ್ಕೆ ನಿಗದಿತ ಪಾಸ್ ಇರುವವರಿಗೆ ಮಾತ್ರ ಪ್ರವೇಶ ನೀಡಲಾಗುವುದು, ಪಾಸ್ ಇಲ್ಲದವರಿಗೆ ಖಂಡಿತಾ ಪ್ರವೇಶ ಇರುವುದಿಲ್ಲ ಎಂದು ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಸ್ಪಷ್ಟವಾಗಿ ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಬರುವವರು ನಿಗದಿತ ಸ್ಥಳದಲ್ಲೇ ತಮ್ಮ ವಾಹನಗಳನ್ನು ಪಾರ್ಕ್ ಮಾಡಬೇಕು, ಜಂಬೂ ಸವಾರಿ ಸಾಗುವ ರಸ್ತೆಯಲ್ಲಿ ಹಲವು ಶಿಥಿಲಗೊಂಡ ಕಟ್ಟಡಗಳಿದ್ದು ಈ ಬಾರಿ ಆ ಕಟ್ಟಡಗಳ ಮೇಲೆ ಕುಳಿತು ಮೆರವಣಿಗೆ ವೀಕ್ಷಣೆಗೆ ನಿರ್ಬಂಧ ವಿಧಿಸಲಾಗಿದೆ ಎಂದು ಕಮಿಷನರ್ ಪ್ರಕಟಣೆ ಹೊರಡಿಸಿದ್ದಾರೆ
ಭದ್ರತೆಗೆ ನಿಯೋಜನೆಗೊಂಡ ಪೊಲೀಸರು ನೀಡುವ ಸಲಹೆ ಸೂಚನೆಯನ್ನು ತಪ್ಪದೆ ಪಾಲಿಸಬೇಕು. ಇದು ಇತ್ತೀಚೆಗೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ದುರ್ಘಟನೆ ಹಾಗೂ ನಟ ವಿಜಯ್ ರ‌್ಯಾಲಿಯಲ್ಲಿ ನಡೆದ ಅವಘಡಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾರ್ವಜನಿಕರ ಹಿತದೃಷ್ಠಿಯಿಂದ ಮುಂಜಾಗ್ರತಾ ಕ್ರಮವಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿರುವ ಸೀಮಾ ಲಾಟ್ಕರ್ ಅವರು ನಾಡಿನ ಜನರಿಗೆ ಆಯುಧಪೂಜೆ ಹಾಗೂ ನಾಡಹಬ್ಬದ ಜಂಬೂಸವಾರಿ ಶುಭಾಶಯಗಳನ್ನು ಸಲ್ಲಿಸಿದ್ದಾರೆ.