ರಾಜ್ಯ ಸರ್ಕಾರದ ಮೇಲೆ ಯಾರಿಗೂ ನಂಬಿಕೆ ಇಲ್ಲ: ಅಶೋಕ್

Spread the love

ಬೆಂಗಳೂರು: ಕಾಲ್ತುಳಿತ ಪ್ರಕರಣದಲ್ಲಿ ಹೈಕೋರ್ಟ್‌ ಸ್ವಯಂ ಪ್ರೇರಣೆಯ ಪ್ರಕರಣ ದಾಖಲಿಸಿಕೊಂಡಿದೆ ಎಂದರೆ, ಸರ್ಕಾರದ ಮೇಲೆ ಯಾರಿಗೂ ನಂಬಿಕೆ ಇಲ್ಲ ಎಂಬ ಅರ್ಥ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲ್ತುಳಿತ ಪ್ರಕರಣದಲ್ಲಿ ರಾಜ್ಯ ಸರ್ಕಾರ ತಪ್ಪು ಮಾಡಿಲ್ಲದಿದ್ದರೆ ಸರಿಯಾಗಿ ತನಿಖೆ ನಡೆಸಬೇಕಿತ್ತು. ಈಗ ಹೈಕೋರ್ಟ್‌ ಸ್ವಯಂ ಪ್ರೇರಣೆಯ ಪ್ರಕರಣ ದಾಖಲಿಸಿಕೊಂಡಿದೆ. ಇದಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಎಂದರೆ, ಕೋರ್ಟ್‌ ಸರ್ಕಾರವನ್ನು ನಂಬುತ್ತಿಲ್ಲ ಎಂದರ್ಥ ಎಂದು ತಿಳಿಸಿದರು.

ಸತ್ತಿರುವ 11 ಜನರ ಕುಟುಂಬದವರನ್ನೇ ಕೇಳಿ ತನಿಖೆಗೆ ನೀಡಬಹುದಿತ್ತು. ಮೊದಲು ಜಿಲ್ಲಾಧಿಕಾರಿ, ಆ ನಂತರ ನಿವೃತ್ತ ನ್ಯಾಯಾಧೀಶರು, ಆ ಬಳಿಕ ಎಸ್‌ಐಟಿ ತನಿಖೆ ಎಂದು ಹೇಳಿದ್ದಾರೆ ಯಾವುದರಲ್ಲೂ ಖಚಿತತೆ ಇಲ್ಲ ಎಂದು ವ್ಯಂಗ್ಯವಾಡಿದರು.

ಸಿಎಂ ಸಿದ್ದರಾಮಯ್ಯ ಹಾಗೂ ಕುಟುಂಬದವರು ಕ್ರಿಕೆಟಿಗರ ಜೊತೆಗೆ ಫೋಟೋ ಶೂಟ್‌ ಮಾಡಿಕೊಂಡಿದ್ದರಿಂದಲೇ 11 ಜನರು ಮೃತರಾಗಿದ್ದಾರೆ. ಬಿಜೆಪಿ ಎಲ್ಲ ಬಗೆಯ ಹೋರಾಟಗಳನ್ನು ಮಾಡಿದೆ. ಇನ್ನು ಮುಂದೆಯೂ ಹೋರಾಟ ಮುಂದುವರಿಸುತ್ತೇವೆ ಎಂದು ತಿಳಿಸಿದರು.

ಸರ್ಕಾರವೇ ಜನರನ್ನು ವಿಧಾನಸೌಧಕ್ಕೆ ಆಹ್ವಾನಿಸಿದೆ. ಹಾಗೆ ಆಹ್ವಾನ ನೀಡದೇ ಹೋಗಿದ್ದರೆ ಈ ದುರಂತ ನಡೆಯುತ್ತಿರಲಿಲ್ಲ. ನಾವು ಪ್ರತಿಭಟನೆ ಮಾಡಿದಾಗ ನೂರಾರು ಪೊಲೀಸರು ಬಂದಿದ್ದರು. ಅದೇ ರೀತಿ ಎರಡು ಲಕ್ಷ ಜನರನ್ನು ನಿಯಂತ್ರಣ ಮಾಡಲು ಹೆಚ್ಚು ಪೊಲೀಸರನ್ನು ನಿಯೋಜಿಸಬೇಕಿತ್ತು.

ಇದನ್ನೆಲ್ಲ ಪ್ರಶ್ನಿಸಲೆಂದೇ ಮೂರು ದಿನದ ಅಧಿವೇಶನ ಕರೆಯಲು ಆಗ್ರಹಿಸಿದ್ದೇನೆ. ಸರ್ಕಾರದ ತಪ್ಪಿಲ್ಲದಿದ್ದರೆಯಾರ ತಪ್ಪು ಎಂದು ತಿಳಿಸಲಿ ಎಂಬುದಾಗಿ ಅಶೋಕ್ ಸವಾಲು ಹಾಕಿದರು.

ಅಕ್ಟೋಬರ್‌ ತಿಂಗಳಲ್ಲೇ ಈ ಸರ್ಕಾರದ ಕಥೆ ಮುಗಿಯಲಿದೆ. ಎಲ್ಲ ಶಾಸಕರು ನಾವೇ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಇನ್ನು 2028 ಕ್ಕೆ ಇವರು ಅಧಿಕಾರಕ್ಕೆ ಬರಲು ಹೇಗೆ ಸಾಧ್ಯ ಹಾಗಾಗಿ ಡಿ.ಕೆ.ಶಿವಕುಮಾರ್‌ ಬಹಳ ಚಿಂತೆಯಲ್ಲಿದ್ದಾರೆ ಎಂದು ಟೀಕಿಸಿದರು.