ಮೈಸೂರು: ಕರ್ನಾಟಕ ಸುಗಮ ಸಂಗೀತ ಪರಿಷತ್ ವತಿಯಿಂದ ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮದ್ ಅವರ ಜನ್ಮ ದಿನಾಚರಣೆ ಹಮ್ಮಿಕೊಳ್ಳಲಾಯಿತು.
ಮೈಸೂರಿನ ಶಿವರಾಮಪೇಟೆಯಲ್ಲಿರುವ ಕರ್ನಾಟಕ ಸುಗಮ ಸಂಗೀತ ಪರಿಷತ್ ಕಚೇರಿಯಲ್ಲಿ ನಿಸಾರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.
ಈ ವೇಳೆ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷರಾದ ಡಾ. ನಾಗರಾಜ್ ವಿ ಬೈರಿ ಅವರು ಮಾತನಾಡಿ ನಿಸಾರರ ಅನೇಕ ಕವಿತೆಗಳು ಸುಗಮ ಸಂಗೀತದ ಧ್ವನಿ ಸುರುಳಿಗಳ ಮೂಲಕ ಕನ್ನಡಿಗರನ್ನು ತಲುಪಿವೆ ಎಂದು ತಿಳಿಸಿದರು.
ಅವುಗಳಲ್ಲಿ ‘ಸುಮಧುರ’ ಮತ್ತು ‘ನವೋಲ್ಲಾಸ’ ಕನ್ನಡದ ಮೊದಲ ಜೋಡಿ ಧ್ವನಿ ಸುರುಳಿಗಳು ಬಹಳ ಪ್ರಸಿದ್ದ, ಈವರೆಗೆ ಅವರ ಕವನಗಳ ಏಳು ಧ್ವನಿ ಸುರುಳಿಗಳು ಬಿಡುಗಡೆ ಗೊಂಡಿವೆ ಎಂದು ಹೇಳಿದರು.
ಶಿಶುನಾಳ ಶರೀಫರ ನಂತರ ತಮ್ಮ ಕಾವ್ಯಗಳ ಮೂಲಕ ನಾಡು, ನುಡಿ, ಭಾವೈಕ್ಯತೆಯನ್ನು ಬಿತ್ತಿದವರು ನಿಸಾರರು ಎಂದು ಡಾ. ನಾಗರಾಜ್ ವಿ ಬೈರಿ ಬಣ್ಣಿಸಿದರು.
ಯಾವುದೇ ಸುಗಮ ಸಂಗೀತ ಕಾರ್ಯಕ್ರಮ ನಿಸಾರರ ಕವಿತೆಗಳನ್ನು ಹಾಡದೆ ಪರಿಪೂರ್ಣವಾಗುವುದಿಲ್ಲ. ಇವರ ನಿತ್ಯೋತ್ಸವದಲ್ಲಿನ ‘ಜೋಗದ ಸಿರಿ ಬೆಳಕಿನಲ್ಲಿ’ ಹಾಡು ತುಂಬಾ ಪ್ರಸಿದ್ಧವಾಗಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ಅವರು ಮಾತನಾಡಿ, ಮೊಟ್ಟ ಮೊದಲ ಭಾವಗೀತೆಗಳ ದ್ವನಿಸುರುಳಿ ನಿತ್ಯೋತ್ಸವವನ್ನು ಹೊರತಂದು ಜನಮಾನಸದಲ್ಲಿ ನೆಲೆಯಾಗಿ ನಿಂತವರು ಅನೇಕ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಕೊಡ ಮಾಡಿದವರು ನಿಸಾರರು ಎಂದು ನುಡಿದರು.
ನಿಸಾರರ ಗೀತೆಗಳು ಕನ್ನಡದ ನಿತ್ಯೋತ್ಸವವಾಗಿದೆ ಇವರ ಜೋಗದ ಸಿರಿ ಬೆಳಕಿನಲ್ಲಿ ಗೀತೆ ಅನಧಿಕೃತ ನಾಡಗೀತೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್ ತಿಳಿಸಿದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಪಿ.ಆರ್.ಓ. ಎನ್. ಬೆಟ್ಟೆಗೌಡ ಮಾತನಾಡಿ 1974ರಲ್ಲಿ ಪ್ರಕಟವಾದ ‘ನಿತ್ಯೋತ್ಸವ’ ಕವನ ಸಂಕಲನ, ನಿಸಾರ್ ರಿಗೆ ಬಹಳ ಜನಪ್ರಿಯತೆ ತಂದು ಕೊಟ್ಟಿದೆ. ಇಂದು ಕೂಡ ಕನ್ನಡದ ಹಬ್ಬ ಎಲ್ಲೇ ನಡೆದರು ನಿತ್ಯೋತ್ಸವ ಕವಿತೆಯ ಗಾಯನವಿಲ್ಲದೆ ಅದು ಅಪೂರ್ಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಹೆಳವರಹುಂಡಿ ಸಿದ್ದಪ್ಪ, ಮೈಸೂರು ಕೈಗಾರಿಕ ವಾಣಿಜ್ಯ ಸಂಘದ ಅಧ್ಯಕ್ಷ ಕೆ ಬಿ ಲಿಂಗರಾಜು, ಮೈಸೂರು ಜಿಲ್ಲಾ ಜೆಡಿಎಸ್ ಅಧ್ಯಕ್ಷ ನರಸಿಂಹಸ್ವಾಮಿ, ಅಗಸ್ತ್ಯ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ವಿಕ್ರಂ ಅಯ್ಯಂಗಾರ್, ಪಡುವಾರಳ್ಳಿ ರಾಮಕೃಷ್ಣ, ಶ್ರೀಮತಿ ಪದ್ಮ, ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ರಾಜೇಂದ್ರ,ಸಮಾಜ ಸೇವಕರಾದ ವಿದ್ಯಾ, ಮಹಾನ್ ಶ್ರೇಯಸ್, ಗುರು, ರಾಕೇಶ್ ಮತ್ತಿತರರು ಪಾಲ್ಗೊಂಡಿದ್ದರು.