ಬೆಂಗಳೂರು: ನಿಖಿಲ್ ಅವರಿಗೆ ಚನ್ನಪಟ್ಟಣ ಟಿಕೆಟ್ ಸಿಗುವಂತೆ ಮಾಡಲು ಕುಮಾರಸ್ವಾಮಿ ಅವರು ಚದುರಂಗದಾಟ ಸೃಷ್ಟಿಸಿದರು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ರಾಜಕಾರಣಿಯಾದ ಕುಮಾರಸ್ವಾಮಿ ಅವರು ಕಳೆದ 40 ವರ್ಷಗಳಿಂದ ತಮ್ಮದೆ ದೃಷ್ಟಿಕೋನದಲ್ಲಿ ತಂತ್ರಗಾರಿಕೆ ಮಾಡಿಕೊಂಡು ಬಂದಿದ್ದಾರೆ. ಇದರ ಮುಂದುವರೆದ ಭಾಗವಿದು. ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗುತ್ತಾರೆ ಎನ್ನುವುದು ಚನ್ನಪಟ್ಟಣದ ಎಲ್ಲರಿಗೂ ತಿಳಿದಿತ್ತು ಎಂದು ಹೇಳಿದರು.
ನಿಖಿಲ್ ಕುಮಾರಸ್ವಾಮಿ ಅವರೇ ಚನ್ನಪಟ್ಟಣ ಉಪಚುನಾವಣೆಯಲ್ಲಿ ಅಭ್ಯರ್ಥಿಯಾಗುತ್ತಾರೆ ಎನ್ನುವ ಸತ್ಯ ಎಲ್ಲರಿಗೂ ತಿಳಿದಿತ್ತು. ಜೆಡಿಎಸ್ ಪಕ್ಷಕ್ಕೆ ಕುಮಾರಸ್ವಾಮಿ ಅವರೇ ಅಧಿನಾಯಕರು. ಎಲ್ಲವೂ ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಬಲವಂತವಾಗಿ ಚುನಾವಣೆಗೆ ನಿಖಿಲ್ ಅವರನ್ನು ನಿಲ್ಲಿಸಲಾಗುತ್ತಿದೆ ಎನ್ನುವುದೆಲ್ಲಾ ಸುಳ್ಳು, ಅವರ ಉದ್ದೇಶ ಈ ಮೂಲಕ ಫಲ ನೀಡಿದೆ ಎಂದು ತಿಳಿಸಿದರು.
ನಾಟಕ ಮಾಡಿ ನಿಖಿಲ್ ಗೆ ಟಿಕೆಟ್ ಗಳಿಸಿಕೊಂಡರೇ ಎಂಬ ಪ್ರಶ್ನೆಗೆ ಅದನ್ನು ಮಾಧ್ಯಮದವರು ಹೇಳಬೇಕು. ನಾಮಪತ್ರ ಸಲ್ಲಿಸಿದ ನಂತರ ನಾಟಕ ಪ್ರಾರಂಭವಾಗುತ್ತದೆ ಎಂದರು. ಕಣ್ಣೀರು ಬರುತ್ತದೆಯೇ ಎಂದು ಮರುಪ್ರಶ್ನಿಸಿದಾಗ ಬರಬಹುದೇನೋ, ಮಾಧ್ಯಮದವರು ಕಣ್ಣೀರು ಹಾಕಿ ಎಂದರೆ ಹಾಕುತ್ತಾರೆ ಎಂದು ವ್ಯಂಗ್ಯವಾಡಿದರು.
ನಿಖಿಲ್ ಪ್ರಬಲ ಅಭ್ಯರ್ಥಿಯಾಗಬಲ್ಲರೇ ಎಂಬ ಪ್ರಶ್ನೆಗೆ, ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಇದರಿಂದ ಕುಮಾರಸ್ವಾಮಿ ಅವರಿಗೆ ಕಾರ್ಯಕರ್ತರ ಮೇಲಿನ ಪ್ರೀತಿ ಎಷ್ಟಿದೆ ಎಂಬುದು ತಿಳಿಯುತ್ತದೆ. ಚುನಾವಣೆಯಲ್ಲಿ ಒಂದೊಂದು ಮತವೂ ಮುಖ್ಯ ಎಂದು ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಯಾರು ಪ್ರಭಾವಿಗಳು ಎನ್ನುವುದಕ್ಕಿಂತ, ನಾವು ಪಕ್ಷವನ್ನು ಗೆಲ್ಲಿಸಲು ಹೋರಾಟ ಮಾಡುತ್ತೇವೆ ಎಂದು ಡಿ.ಕೆ.ಸುರೇಶ್ ಉತ್ತರಿಸಿದರು.
ಒಂದು ವಾರಗಳ ಕಾಲ ದೇವೇಗೌಡರು ಚನ್ನಪಟ್ಟಣದಲ್ಲಿ ಪ್ರಚಾರ ಮಾಡುವುದರಿಂದ ಕಾಂಗ್ರೆಸ್ ಗೆಲುವಿಗೆ ತೊಡಕಾಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ದೇವೇಗೌಡರು ಇರುವುದೇ ಪ್ರಚಾರ ಮಾಡುವುದಕ್ಕೆ. ಅವರ ಮೊಮ್ಮಗನ ಪರವಾಗಿ ಪ್ರಚಾರ ಮಾಡಬೇಡಿ ಎಂದು ಹೇಳಲು ಆಗುತ್ತದೆಯೇ, ನಾವು ನಮ್ಮ ಸರ್ಕಾರದ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗುತ್ತೇವೆ ಎಂದು ಹೇಳಿದರು.