ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪ್ರಭಾವವಿಲ್ಲ;ಜೆಡಿಎಸ್ ಭದ್ರ ಕೋಟೆ:ನಿಖಿಲ್

Spread the love

ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಟಿಕೆಟ್ ಬಗ್ಗೆ ದೆಹಲಿಯ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಈಗಾಗಲೇ ವರದಿ ದೆಹಲಿಯ ಬಿಜೆಪಿ ಹೈಕಮಾಂಡ್ ಕೈ ಸೇರಿದೆ,ಕೆಲವೇ ದಿನಗಳಲ್ಲಿ ಎನ್ ಡಿ ಎ ಅಭ್ಯರ್ಥಿಯನ್ನ ಘೋಷಣೆ ಮಾಡುತ್ತಾರೆ ಎಂದು ಹೇಳಿದರು.

ಜೆಪಿ ಭವನ ಜೆಡಿಎಸ್ ಕಚೇರಿಯಲ್ಲಿ ಮಾತನಾಡಿದ ಅವರು,ಚನ್ನಪಟ್ಟಣದಲ್ಲಿ ಜನತೆ ಕುಮಾರಸ್ವಾಮಿ ಅವರನ್ನು ಎರಡು ಬಾರಿ ಶಾಸಕರಾಗಿ ಆಶೀರ್ವಾದ ಮಾಡಿ ಗೆಲ್ಲಿಸಿದ್ದಾರೆ,ಹಾಗಾಗಿ ಪಕ್ಷದ ಧ್ವನಿಯಾಗಿ ಕಾರ್ಯಕರ್ತನಾಗಿ ಕೆಲಸ ಮಾಡುವುದು ನನ್ನ ಜವಾಬ್ದಾರಿ ಎಂದು ಹೇಳಿದರು.

ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಗೊಂದಲ ಕಾಂಗ್ರೆಸ್‌ಗೆ ಲಾಭ ಆಗುತ್ತಾ ಎಂಬ ಮಾಧ್ಯಮದವರ ಪ್ರಶ್ನೆಗೆ, ಚನ್ನಪಟ್ಟಣ ತಾಲ್ಲೂಕು ಜೆಡಿಎಸ್ ಪಕ್ಷದ ಭದ್ರಕೋಟೆ. ಚನ್ನಪಟ್ಟಣದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯ ಕಾರ್ಯಕರ್ತ ಸ್ಪರ್ಧೆ ಮಾಡಿದರೂ 55ರಿಂದ 6೦ ಸಾವಿರ ಜೆಡಿಎಸ್ ಮತಗಳಿವೆ ಎಂದು ನಿಖಿಲ್ ಉತ್ತರಿಸಿದರು.

ಒಂದು ಕಡೆ ಜೆಡಿಎಸ್ ಶಕ್ತಿ ಮತ್ತೊಂದು ಕಡೆ ಸಿ.ಪಿ ಯೋಗಿಶ್ವರ್ ಅವರ ವೈಯಕ್ತಿಕ ವರ್ಚಸ್ಸು ಇವೆಲ್ಲ ನೋಡಿದಾಗ ಕಾಂಗ್ರೆಸ್‌ಗೆ ಚನ್ನಪಟ್ಟಣ ಕ್ಷೇತ್ರದಲ್ಲಿ ನೆಲೆ ಇಲ್ಲ, ಇತಿಹಾಸ ತೆಗೆದು ನೋಡಿದಾಗ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪ್ರಭಾವವಿಲ್ಲ ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.

ಗಣಿಗಾರಿಕೆ ಪ್ರಕರಣ ಸುಪ್ರೀಂಕೋರ್ಟ್ ಅಂಗಳಕ್ಕೆ ಹೋಗಿ 7 ವರ್ಷ ಆಗಿದೆ. ಸುಪ್ರೀಂ ಕೋರ್ಟ್ ಡೈರೆಕ್ಷನ್ ಕೊಟ್ಟಿದೆ. ಲೋಕಾಯುಕ್ತ ಮತ್ತು ಎಸ್ಐಟಿಗೆ ಮೂರು ತಿಂಗಳ ಗಡುವಿನಲ್ಲಿ ವರದಿಯನ್ನ ಕೊಡಿ ಅಂತ ಕೇಳಿತ್ತು.ಅದರೆ ಯಾವುದೇ ರೀತಿಯ
ವರದಿಗಳು ಬಂದಿಲ್ಲ ಎಂದು ಹೇಳಿದರು.

ಕುಮಾರಸ್ವಾಮಿ ಅವರ ಬಗ್ಗೆ ಇಷ್ಟೆಲ್ಲಾ ಆರೋಪ ಮಾಡುತ್ತಾರಲ್ಲ 2018ರಲ್ಲಿ ಕುಮಾರಸ್ವಾಮಿ ಅವರನ್ನ ಸಿಎಂ ಮಾಡೋಕೆ ಬಂದಾಗ‌ ಮಾಹಿತಿ ಇರಲಿಲ್ಲವಾ ಈಗ ಯಾಕೆ ಇದನ್ನ ಪ್ರಶ್ನೆ ಮಾಡ್ತಾ ಇದ್ದಾರೆ, ಅವತ್ತು ಅವರಿಗೆ ಪರಿಜ್ಞಾನ ಇರಲಿಲ್ವಾ ಎಂದು ಕಾಂಗ್ರೆಸ್ ನಾಯಕರನ್ನು ನಿಖಿಲ್ ಕುಮಾರಸ್ವಸಮಿ ಕಾರವಾಗಿ ಪ್ರಶ್ನಿಸಿದರು.

ಕುಮಾರಸ್ವಾಮಿಯವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿರೋದು ಜನರನ್ನ ದಿಕ್ಕು ತಪ್ಪಿಸುವ ಕೆಲಸವಷ್ಟೇ, ಹಾಗಂತ ಕುಮಾರಸ್ವಾಮಿಯವರನ್ನ ಸಚಿವ ಸ್ಥಾನದಿಂದ ಇಳಿಸೋಕೆ ಸಾಧ್ಯವಿಲ್ಲ ಎಂದು ಕಡಕ್ಕಾಗಿ‌ ಹೇಳಿದರು.