ಮೈಸೂರು: ,ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಅಂಗವಾಗಿ ಎನ್ಐಇ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡಿ ಮಾದರಿಯಾದರು.
ವಿಶ್ವೇಶ್ವರ ನಗರದಲ್ಲಿರುವ ಎನ್ಐಇ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೈಸೂರು, ಜಿಲ್ಲಾ ಏಡ್ಸ್ ಪ್ರತಿಬಂದಕ ಮತ್ತು ನಿಯಂತ್ರಣ ಘಟಕ ಮೈಸೂರು ಹಾಗೂ ಎನ್ ಐ ಇ ಪ್ರಥಮ ದರ್ಜೆ ಕಾಲೇಜು, ಲಯನ್ಸ್ ಬ್ಲಡ್ ಸೆಂಟರ್ ಜೀವದಾರ ವತಿಯಿಂದ ಹಮ್ಮುಕೊಂಡಿದ್ದ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ವೇಳೆ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

ರಕ್ತ ನೀಡಿ ಬರವಸೆ ನೀಡಿ, ಜೊತೆಯಾಗಿ ನಾವು ಜೀವ ಉಳಿಸೋಣ ಎಂಬ ಘೋಷ ವಾಕ್ಯದೊಂದಿಗೆ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ 70ಕ್ಕೂ ಹೆಚ್ಚು ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡಿ ಮಾದರಿಯಾದರು.
ಶಿಬಿರವನ್ನು ಉದ್ಘಾಟಿಸಿದ ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಜಿಲ್ಲಾ ಮೇಲ್ವಿಚಾರಕರಾದ ಸವಿತಾ ಅವರು ಮಾತನಾಡಿ,ರಕ್ತದಾನದ ಮೂಲಕ ಹಲವರ ಜೀವ ಉಳಿಸಲು ಸಾಧ್ಯ ಎಂದು ಹೇಳಿದರು.
ಎನ್ಐಇ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್ ಗೋಪಾಲಕೃಷ್ಣ ಅರಸ್ ಮಾತನಾಡಿ,ಇಂದಿನ ಯುವಜನತೆ ದೇಶದ ಸಂಪತ್ತು,ನಿಮ್ಮ ಒಂದು ಸೇವೆ ದೇಶವನ್ನು ಮತ್ತು ಜೀವವನ್ನು ಕಾಪಾಡಬಲ್ಲದು ಎಂದು ತಿಳಿಹೇಳಿದರು.
ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ ನಮ್ಮ ಮನಸ್ಸು ಇನ್ನೊಬ್ಬರ ಉಳಿವಿಗೆ ಸಹಕರಿಸಬೇಕು ಎಂದು ಸಲಹೆ ನೀಡಿದರು.
ರಕ್ತದಾನ ಮಾಡುವವರಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಜಾಸ್ತಿ ಇರಬೇಕು, ಪ್ರತಿ ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು, ನಿಮ್ಮ ಸೇವಾಗುಣ ಸಮಾಜಕ್ಕೆ ಮಾದರಿ ಆಗಬೇಕೆಂದು ಕಿವಿಮಾತು ಹೇಳಿದರು
ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಅವರು ಸ್ವಯಂ ಪ್ರೇರಿತ ರಕ್ತದಾನ ಮಾಡುವುದರಿಂದ ಆಗುವ ಉಪಯೋಗಗಳು ಹಾಗೂ ರಕ್ತದಾನದ ಜಾಗೃತಿಯ ಬಗ್ಗೆ ತಿಳಿಸಿಕೊಟ್ಟರು.
ಶಿಬಿರದಲ್ಲಿ ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಂ ಅಯ್ಯಂಗಾರ್, ಕಾಲೇಜು ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಕುಮಾರ್, ಸಹ ಕಾರ್ಯಕ್ರಮ ಅಧಿಕಾರಿ ದಿನಕರ್,ಯೂತ್ ರೆಡ್ ಕ್ರಾಸ್ ಸಂಯೋಜನ ಅಧಿಕಾರಿ ಶೈಲಜ, ನವ್ಯ ಮತ್ತಿತರರು ಹಾಜರಿದ್ದರು.