ಬೆಂಗಳೂರು: ಅಂಬೇಡ್ಕರ್ ಅಧ್ಯಯನ ಪೀಠಗಳನ್ನು ರಾಜ್ಯದ ಎಲ್ಲಾ ವಿವಿಗಳಲ್ಲಿ ಸ್ಥಾಪಿಸಬೇಕೆಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಭಾರತ ಸರ್ಕಾರದ ಐಸಿಸಿಆರ್ ಸದಸ್ಯ ಡಾ ಜಾನಪದ ಎಸ್ ಬಾಲಾಜಿ ಸರ್ಕಾರವನ್ನು ಅಗ್ರಹಿಸಿದರು.

ನೆಲಮಂಗಲದ ಸಿದ್ದಗಂಗಾ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನೆಹರು ಯುವಕ ಕೇಂದ್ರ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಮಾತೃಭೂಮಿ ವಿವೇಕ ಸಂಘ ನೆಲಮಂಗಲ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134 ನೇ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಠ್ಯಗಳಲ್ಲಿ ಬಾಬಾ ಸಾಹೇಬರ ಬಗ್ಗೆ ಹೆಚ್ಚು ಪದ್ಯ ಮತ್ತು ಗದ್ಯಗಳನ್ನು ಅಳವಡಿಸಬೇಕು, ಶಾಲಾ ಹಂತದಲ್ಲಿ ಅಂಬೇಡ್ಕರ್ ಅವರ ಬದುಕು ಆದರ್ಶಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು, ಸಂವಿಧಾನದ ಪ್ರತಿಯನ್ನು ಎಲ್ಲರ ಮನೆಗಳಲ್ಲಿ ಕಡ್ಡಾಯಗೊಳಿಸಬೇಕು ಎಂದು ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ ಧನಲಕ್ಷ್ಮಿ ಹಾಗೂ ವಕೀಲರಾದ ಕನಕರಾಜು ಅವರು ಅಂಬೇಡ್ಕರ್ ವಿಚಾರಧಾರೆಗಳ ಬಗ್ಗೆ ಉಪನ್ಯಾಸ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ ಅಮರೇಂದ್ರ ಅವರು ಮಾತನಾಡಿ ಅಂಬೇಡ್ಕರ್ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು, ವಿದ್ಯಾರ್ಥಿಗಳು ಹೆಚ್ಚು ಅವರ ಬಗ್ಗೆ ಓದುವ ಮೂಲಕ ಪಾಂಡಿತ್ಯವನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಭಾರತ ಸಂವಿಧಾನದ ಪೀಠಿಕೆಯನ್ನು ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಿದ್ದಯ್ಯ ಬೋಧಿಸಿದರು.
ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಗಂಗರಾಜು ಸ್ವಾಗತಿಸಿದರು, ಮಾತೃಭೂಮಿ ಸಂಘದ ಅಧ್ಯಕ್ಷರಾದ ಪವನ್ ಕುಮಾರ್ ನಾಯಕ್ ವಂದಿಸಿದರು.
ಕನ್ನಡ ಜಾನಪದ ಪರಿಷತ್ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ರಾ ನರಸಿಂಹಮೂರ್ತಿ, ಮಾತೃಭೂಮಿ ವಿವೇಕ ಸಂಘದ ಚೇತನ್, ನವೀನ್, ಹಾಗೂ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.