ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮಕ್ಷಮದಲ್ಲಿ ಇಂದು ನಕ್ಸಲರು ಶರಣಾಗತಿ ಯಾಗಿದ್ದಾರೆ.
ಈ ವೇಳೆ ಮಾತನಾಡಿದ ಸಿಎಂ,ಅನ್ಯಾಯದ ವಿರುದ್ಧ, ಶೋಷಣೆ, ದೌರ್ಜನನ್ಯದ ವಿರುದ್ಧ ನ್ಯಾಯಕ್ಕಾಗಿ ಹೋರಾಡುವುದು ತಪ್ಪಲ್ಲ ಎಂದು ಹೇಳಿದ್ದಾರೆ.
ವ್ಯವಸ್ಥೆ ಬದಲಾವಣೆಗೆ ಹೋರಾಟ ಮಾಡಲು ಸಂವಿಧಾನದಲ್ಲಿ ಅವಕಾಶವಿದೆ,ಆದರೆ ಹೋರಾಟ ಶಾಂತಿಯುತವಾಗಿ ಹಾಗೂ ನ್ಯಾಯಯುತವಾಗಿ ಮಾಡಬೇಕು ಎಂದು ಸಲಹೆ ನೀಡಿದರು.
ನಕ್ಸಲಿಸಂ, ಶಸ್ತ್ರಾಸ್ತ್ರ ಹೋರಾಟಕ್ಕೆ ಸಂವಿಧಾನದಲ್ಲಿ, ಪ್ರಜಾಪ್ರಭತ್ವ ವ್ಯವಸ್ಥೆಯಲ್ಲಿ ಅವಕಾಶವಿಲ್ಲ,ಈ ಹಿಂದೆಯೂ ಬಹಳ ನಕ್ಸಲೀಯರು ಶಸ್ತ್ರಾಸ್ತ ತ್ಯಜಿಸಿ ಮುಖ್ಯಧಾರೆಗೆ ಬಂದಿದ್ದಾರೆ,ಅವರ ಪುನರ್ ವಸತಿಗೆ ಸರ್ಕಾರ ನೆರವು ಒದಗಿಸಿದೆ ಎಂದು ಹೇಳಿದರು.
ಶಾಂತಿಗಾಗಿ ನಾಗರಿಕ ವೇದಿಕೆಯವರು ನನ್ನನ್ನು ಭೇಟಿ ಮಾಡಿ ನಕ್ಸಲಿಯರ ಮನವೊಲಿಸುವ ಬಗ್ಗೆ ತಿಳಿಸಿದ್ದರು. ಆ ಸಂದರ್ಭದಲ್ಲಿ ನಕ್ಸಲಿಸಂ ತ್ಯಜಿಸಿ ಮುಖ್ಯವಾಹಿನಿಗೆ ಬರಲು ಸರಕಾರ ಎಲ್ಲಾ ನೆರವು ನೀಡಲಿದೆ ಎಂದು ಭರವಸೆ ನೀಡಿದ್ದೆ,ಅದರಂತೆ ಇಂದು ಅವರನ್ನು ಸಮಸಜಕ್ಕೆ ಬರಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ನಾವು ಕರ್ನಾಟಕದಲ್ಲಿ ನಕ್ಸಲಿಸಂ ಕೊನೆಗಾಣಿಸಲು, ಅವರ ಬೇಡಿಕೆಗೆ ಸ್ಪಂದಿಸಲು ಏನೆಲ್ಲಾ ಕಾರ್ಯಕ್ರಮ ಬೇಕೋ ಅದನ್ನು ಕಾನೂನು ಚೌಕಟ್ಟಿನಲ್ಲಿ ಮಾಡುತ್ತೇವೆ ಎಂದು ಇದೇ ವೇಳೆ ಸಿಎಂ ಭರವಸೆ ನೀಡಿದರು.
ಶಸ್ತ್ರಾಸ್ತ್ರ ಮೂಲಕ ಹೋರಾಟ ಮಾಡಿ ನ್ಯಾಯ ಪಡೆಯಲು ಪ್ರಜಾಪ್ರಭುತ್ವದಲಿ, ಸಂವಿಧಾನದಲ್ಲಿ ಅವಕಾಶವಿಲ್ಲ,
ಶಾಂತಿಯುತವಾಗಿ ಹೋರಾಟ ನಡೆಸಲು ಪ್ರಜಾಪ್ರಭುತ್ವದಲ್ಲಿ ಅವಕಾಶವಿದೆ. ಸರ್ಕಾರ ಇದನ್ನು ವಿರೋಧಿಸುವುದಿಲ್ಲ. ಆದರೆ ಕಾನೂನು ಕೈಗೆತ್ತಿಕೊಂಡರೆ ಸರ್ಕಾರ ಸುಮ್ಮನಿರುವುದಿಲ್ಲ ಎಂದು ಸೂಚ್ಯವಾಗಿ ಎಚ್ಚರಿಕೆ ಸಹಾ ನೀಡಿದರು.
ಅನ್ಯಾಯ ಕಡಿಮೆ ಮಾಡಲು ನಮ್ಮ ಸರ್ಕಾರ ಬಹಳ ಪ್ರಯತ್ನ ಮಾಡುತ್ತಿದೆ. ಯಾರ ಮೇಲೂ ಅನ್ಯಾಯ ಆಗಬಾರದು ಎಂಬುವುದು ನಮ್ಮ ಧ್ಯೇಯ ಎಂದರು.
ನಕ್ಸಲಿಸಂ ರಹಿತವಾದ ಮುಕ್ತವಾದ ಸಮಾಜ ನಮ್ಮ ಗುರಿ. ಈ ಹಿನ್ನೆಲೆಯಲ್ಲಿ ಮುಖ್ಯವಾಹಿನಿಗೆ ಬರುವ ನಕ್ಸಲಿಯರಿಗೆ ಎಲ್ಲಾ ರೀತಿಯ ನೆರವು ಕೊಡುವುದಾಗಿ ಬಹಿರಂಗವಾಗಿ ಹೇಳಿದ್ದೆ. ನಿಮ್ಮನ್ನು ಕ್ರಿಮಿನಲ್‌ಗಳ ರೀತಿ ನೋಡದೆ, ಮಾನವರಂತೆ ನೋಡುವ ಭರವಸೆ ನೀಡಿದ್ದೆ ಅದರಂತೆ ನೋಡಿಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ನಕ್ಸಲೀಯರ ಶರಣಾಗತಿಯಲ್ಲಿ ಸಮಿತಿಯ ಸದಸ್ಯರ ಪಾತ್ರ ಮುಖ್ಯವಾಗಿದ್ದು, ಅವರಿಗೆ ಹಾಗೂ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.