ನಂಜನಗೂಡು: ಅಂತರ್ಜಾತಿ ವಿವಾಹ ಮಾಡಿದ್ದರಿಂದ ಆಕ್ರೋಶಗೊಂಡ ಸವರ್ಣೀಯರು ಮೂವರು ದಲಿತ ಯುವಕರ ಮೇಲೆ ಹಲ್ಲೆ ನಡೆಸಿದ ಘಟನೆ ನಂಜನಗೂಡು ತಾಲೂಕು ಗೀಕಳ್ಳಿ ಗ್ರಾಮದಲ್ಲಿ ನಡೆದಿದೆ.

ಹಲ್ಲೆಯಿಂದಾಗಿ ಗ್ರಾಮದ ಆಕಾಶ್,ನಿತಿನ್ ಮತ್ತು ಸಂತೋಷ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹಲ್ಲೆ ನಡೆಸಿದ ಆರೋಪಿಗಳನ್ನ ಬಂಧಿಸುವಂತೆ ದಲಿತ ಸಂಘಟನೆಗಳ ಮುಖಂಡರು ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಕೆಲವು ದಿನಗಳ ಹಿಂದೆ ಗೀಕಳ್ಳಿಯಲ್ಲಿ ಅಂತರ್ಜಾತಿ ವಿವಾಹ ನೆರವೇರಿದ್ದು,ಇದರಿಂದ ಎರಡು ಕೋಮುಗಳ ನಡುವೆ ವೈಮನಸ್ಸು ಬೆಳೆದಿತ್ತು.
ಮಂಗಳವಾರ ರಾತ್ರಿ ಇದನ್ನೇ ನೆಪ ಮಾಡಿಕೊಂಡ ಒಂದು ಜಾತಿಯ ಯುವಕರು ಮೂವರು ದಲಿತ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ.
ಗಾಯಗೊಂಡ ಯುವಕರಿಗೆ ದಲಿತ ಸಂಘಟನೆಯ ಮುಖಂಡರು ಆತ್ಮಸ್ಥೈರ್ಯ ತುಂಬಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ಕ್ಷೇತ್ರದಲ್ಲೇ ದಲಿತರಿಗೆ ರಕ್ಷಣೆ ಇಲ್ಲ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಹಲ್ಲೆ ಮಾಡಿದ ಆರೋಪಿಗಳನ್ನ ತಕ್ಷಣ ಬಂಧಿಸಬೇಕು.ದಲಿತರಿಗೆ ರಕ್ಷಣೆ ನೀಡಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ನಂಜನಗೂಡು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.