ನಂಜಯ್ಯನಕಟ್ಟೆ 75 ಬಡ ಕುಟುಂಬಗಳಿಗೆ ಹಕ್ಕುಪತ್ರ ನೀಡದ‌ ಬಗ್ಗೆ ಸದನದಲ್ಲಿ ಗಮನ ಸೆಳೆದ ಕೃಷ್ಣಮೂರ್ತಿ

Spread the love

ಕೊಳ್ಳೇಗಾಲ:ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯ ಬಸ್ತಿಪುರದ ಸರ್ವೇ ನಂಬರ್ 15 ರಲ್ಲಿ 3.56 ಎಕರೆ ಪ್ರದೇಶದಲ್ಲಿ 1998 ರಿಂದ ವಾಸುತ್ತಿರುವ ನಂಜಯ್ಯನಕಟ್ಟೆಯ 75 ಬಡ ಕುಟುಂಬಗಳಿಗೆ ಹಕ್ಕುಪತ್ರ ನೀಡದೆ ಇರುವ ಬಗ್ಗೆ ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಸದನದಲ್ಲಿ ಕಂದಾಯ ಸಚಿವರ ಗಮನ ಸೆಳೆದಿದ್ದಾರೆ.

ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯ ಬಸ್ತಿಪುರದ ನಂಜಯ್ಯನಕಟ್ಟೆಯಲ್ಲಿ ಸುಮಾರು 75 ಬಡ ಕುಟುಂಬಗಳಿಗೆ ಹಕ್ಕುಪತ್ರ ನೀಡದೆ ಇರುವ ಬಗ್ಗೆ ಪ್ರಶ್ನೋತ್ತರ ವೇಳೆ ಕಂದಾಯ ಸಚಿವರ ಗಮನ ಸೆಳೆದರು.

ಈ ವೇಳೆ ಡಿ.ಸಿ.ಎಂ ಡಿ.ಕೆ. ಶಿವಕುಮಾರ್ ಅವರು ಉತ್ತರ ನೀಡಿ ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯ ಬಸ್ತಿಪುರ ಸರ್ವೇ ನಂಬರ್ 15 ರಲ್ಲಿನ ನಂಜಯ್ಯನಕಟ್ಟೆ ಕೆರೆಯಲ್ಲಿ ಒತ್ತುವರಿ ಮತ್ತು ತೆರವುಗೊಳಿಸುವ ಸಂಬಂಧ ಈಗಾಗಲೇ ಒಂದು ವರದಿಯನ್ನು ಪೂರಕವಾಗಿ ಕೊಡಲಾಗಿದೆ. ಲೋಕಾಯುಕ್ತರು ಕೂಡ ತಹಸಿಲ್ದಾರ್ ರವರಿಗೆ ಬರೆದಿದ್ದಾರೆ. ಈಗಾಗಲೇ ನಮ್ಮ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಮಿಕ್ಕಿದ್ದು ಅವರ ಶಾಸಕರ ಜೊತೆ ಮಾತನಾಡಿ ಸ್ಥಳೀಯವಾಗಿ ಏನು ಸಮಸ್ಯೆ ಇದೆ ಈ ಸಂಬಂಧ ಏನು ಘೋಷಣೆ ಮಾಡಬಹುದು, ಅವರು ಕೊಳಚೆ ಪ್ರದೇಶ ಎಂದು ಘೋಷಣೆ ಮಾಡಿ ಎಂದು ಹೇಳುತ್ತಿದ್ದಾರೆ. ಈಗ ಕೆರೆಗಳನ್ನು ಘೋಷಣೆ ಮಾಡುವುದು ಎಷ್ಟು ಕಷ್ಟ ಇದೆ ಕೋರ್ಟ್ ಲ್ಲಿ ಎಂಬದು ವಿರೋಧ ಪಕ್ಷದವರಿಗೂ ಗೊತ್ತಿದೆ ನಮಗೂ ಗೊತ್ತಿದೆ ಆದರೆ ನಾವು ಕುಳಿತುಕೊಂಡು ಕಾನೂನಾತ್ಮಕವಾಗಿ ಏನು ಮಾಡಬಹುದು ಅದನ್ನು ಮಾಡುತ್ತೇವೆ ಅದನ್ನು ಕೆರೆಗಳನ್ನು ಅಧಿಕೃತವಾಗಿ ಘೋಷಣೆ ಮಾಡಲು ಸಾಧ್ಯವಿಲ್ಲ ಆದರೆ ಅವರಿಗೆ ಏನು ಸಹಾಯ ಮಾಡಲು ಸಾಧ್ಯವೂ ಅದನ್ನು ಮಾಡುತ್ತೇವೆ ಎಂದು ಉತ್ತರಿಸಿದರು.

ಮುಂದುವರೆದು ಮಾತನಾಡಿದ ಎ.ಆರ್. ಕೃಷ್ಣಮೂರ್ತಿ ಅವರು ಅದು ಟೌನ್ ಶಿಪ್ ವ್ಯಾಪ್ತಿಯಲ್ಲಿ ಬರುತ್ತದೆ. ಕಂದಾಯ ಭೂಮಿ ಹಾಗೂ ನೀರಾವರಿ ಇಲಾಖೆಯ ಭಾಗವಾಗಿಯೂ ಇದೆ ಆದರೆ ಅಲ್ಲಿ ಕೆರೆಯ ಸ್ವರೂಪವೇ ಇಲ್ಲ. ನಗರಸಭೆ ವ್ಯಾಪ್ತಿಯಲ್ಲಿ ನಂಜಯ್ಯನ ಕಟ್ಟೆ ಎಂದು ಹೇಳುತ್ತಿದ್ದೇವೋ ಅಲ್ಲಿ ಜನ 1998 ರಿಂದ ವಾಸವಿದ್ದಾರೆ, 75 ಕ್ಕೂ ಹೆಚ್ಚು ಮನೆಗಳು ನಿರ್ಮಾಣವಾಗಿವೆ, ಎಲ್ಲಾ ಮೂಲಭೂತ ಸೌಕರ್ಯಗಳನ್ನು ಸರ್ಕಾರದಿಂದ ನಗರಸಭೆಯ ಮೂಲಕ ಒದಗಿಸಿಕೊಟ್ಟಿದೆ. ಈ ಸಂದರ್ಭದಲ್ಲಿ ಸ್ವಯಂ ದೂರನ್ನು ಲೋಕಾಯುಕ್ತ ಪಡೆದು ಅದನ್ನು ತೆರವು ಗೊಳಿಸಿ ಎಂದು ನಿರ್ದೇಶನ ನೀಡುವಂತದ್ದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಇದಕ್ಕೆ ಉಪಮುಖ್ಯಮಂತ್ರಿಗಳು ಉತ್ತರಿಸಿದ ಹಾಗೆ ತಾವು ಅವರಿಗೆ ರಕ್ಷಣೆ ಕೊಡಬೇಕು ಹಾಗೆಯೇ ಅಲ್ಲಿ ಖಾತೆ ವಿತರಣೆಗೆ ಅವಕಾಶ ಮಾಡಿಕೊಡ ಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಇದಕ್ಕೆ ಡಿ.ಕೆ ಶಿವಕುಮಾರ್ ಅವರು ಕೆರೆಗಳನ್ನು ಅಧಿಕೃತವಾಗಿ ಘೋಷಣೆ ಮಾಡಲು ಆಕ್ಷೇಪಣೆ ಇದೆ ಆದ್ದರಿಂದ ಕರೆದು ಮಾತನಾಡಿ ಯಾವ ರೀತಿ ಬಗೆ ಹರಿಸಬಹುದು ಎಂದು ನಿರ್ಧರಿಸಿ ಬಗೆಹರಿಸುತ್ತೆವೆ ಎಂದು ಪುನರುಚ್ಚರಿಸಿದರು.

ಕೊಳ್ಳೇಗಾಲ ತಾಲೂಕು ಆಸ್ಪತ್ರೆಯನ್ನು ಜಿಲ್ಲಾ ಮಟ್ಟದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆರಿಸುವ ಪ್ರಸ್ತಾವನೆಯೂ ಪರಿಶೀಲನೆಯಲ್ಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸದನದಲ್ಲಿ ಉತ್ತರಿಸಿದರು.

ಚಾಮರಾಜನಗರ ಜಿಲ್ಲೆಯ ಆರೋಗ್ಯ ಇಲಾಖೆ ಈ ಹಿಂದೆ ಇದ್ದ ಜಿಲ್ಲಾಸ್ಪತ್ರೆಯನ್ನು ವೈದ್ಯಕೀಯ ಶಿಕ್ಷಣ ಇಲಾಖೆಯು ನಡೆಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ. ಬಂದಿದ್ದಲ್ಲಿ ಚಾಮರಾಜನಗರ ಜಿಲ್ಲೆಗೆ ಮತ್ತೊಂದು ಜಿಲ್ಲಾಸ್ಪತ್ರೆ ಮಾಡಲು ಅವಕಾಶವಿರುವು ದರಿಂದ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 490 ಕ್ಕೆ ಆರೋಗ್ಯ ಸಚಿವರು ಉತ್ತರಿಸಿದರು.

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಯಳಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು 2007-08 ನೇ ಸಾಲಿನಲ್ಲಿ ಪ್ರಾರಂಭವಾಗಿದ್ದು ಸದರಿ ಕಾಲೇಜಿಗೆ ದಾನವಾಗಿ ದೊರೆತ ಒಟ್ಟಾರೆ 1.39 ಎಕರೆ ಜಮೀನಿನಲ್ಲಿ ನೂತನ ಕಟ್ಟಡ ನಿರ್ಮಾಣಕ್ಕಾಗಿ 2012-13 ನೇ ಸಾಲಿನಲ್ಲಿ ರೂ 202.75 ಲಕ್ಷಗಳನ್ನು ಮಂಜೂರು ಮಾಡಲಾಗಿದೆ.

ಆದರೆ ದಾನವಾಗಿ ದೊರೆತ ಜಮೀನು ತರಿ (ವೆಟ್ ಲ್ಯಾಂಡ್) ಆಗಿರುವುದರಿಂದ ಕಟ್ಟಡ ನಿರ್ಮಾಣಕ್ಕೆ ಮಣ್ಣಿನ ಗುಣಮಟ್ಟ ಸೂಕ್ತವಾಗಿರುವುದಿಲ್ಲ ಹಾಗೂ ಸದರಿ ಜಮೀನಿಗೆ ಸಂಪರ್ಕ ರಸ್ತೆ ಇರುವುದಿಲ್ಲ ಸಂಪರ್ಕ ರಸ್ತೆಗೆ ಜಮೀನು ನೀಡಲು ಸರ್ಕಾರಿ ಡಿ ದರ್ಜೆ ನೌಕರಿ ನೀಡಬೇಕೆಂದು ಪಕ್ಕದ ಜಮೀನಿನ ಮಾಲೀಕರು ಬೇಡಿಕೆ ಇಟ್ಟಿರುವುದರಿಂದ ಕಾಮಗಾರಿಯನ್ನು ಪ್ರಾರಂಭಿಸಿರುವುದಿಲ್ಲ.

ಈ ಹಿನ್ನೆಲೆಯಲ್ಲಿ ಪ್ರಸ್ತಾಪಿತ ಕಾಲೇಜಿಗೆ ಮಂಜೂರಾಗಿದ್ದ ರೂ 202.75 ಲಕ್ಷಗಳು ಸುಮಾರು 12 ವರ್ಷಗಳಿಂದ ಬಳಕೆಯಾಗದ ಕಾರಣ ಸದರಿ ಅನುದಾನವನ್ನು ಸದುಪಯೋಗ ಮಾಡುವ ನಿಟ್ಟಿನಲ್ಲಿ 2024 25 ನೇ ಸಾಲಿನಲ್ಲಿ ಅವಶ್ಯವಿದ್ದ ಸರ್ಕಾರಿ ಪದವಿ ಕಾಲೇಜಿಗೆ ಅನುದಾನವನ್ನು ವರ್ಗಾಯಿಸಲಾಗಿರುತ್ತದೆ.

ಸದರಿ ಕಾಲೇಜಿನ ನೂತನ ಕಟ್ಟಡ ನಿರ್ಮಾಣಕ್ಕಾಗಿ  ಸೂಕ್ತ ನಿವೇಶನ/ಜಮೀನು ದೊರೆತ ನಂತರದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕಾಗಿ ಅನುದಾನದ ಲಭ್ಯತೆಯನುಸಾರ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್ ಉತ್ತರಿಸಿದರು.

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಳಂದೂರು ತಾಲೂಕು ಕೇಂದ್ರವಾಗಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡಕ್ಕೆ ಬಿಡುಗಡೆ ಮಾಡಿದ್ದ 2.ಕೋಟಿ ಅನುದಾನ ಹಿಂದಕ್ಕೆ ಪಡೆದುಕೊಂಡಿರುವುದರಿಂದ ಹೊಸ ಕಟ್ಟಡ ನಿರ್ಮಾಣಕ್ಕೆ ತೊಂದರೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ. ಬಂದಿದ್ದಲ್ಲಿ ಯಾವ ಕಾಲ ಮಿತಿಯಲ್ಲಿ ಹಿಂದಕ್ಕೆ ಪಡೆದ ಅನುದಾನವನ್ನು ಮರುಮಂಜೂರು ಮಾಡಲಾಗುವುದು ಎಂಬ ಕನ್ನಡದ ಎ.ಆರ್. ಕೃಷ್ಣಮೂರ್ತಿ ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 489 ಕ್ಕೆ ಉತ್ತರಿಸಿದರು.

ಯಳಂದೂರು ತಾಲೂಕಿನ ಪುರಾಣ ಪ್ರಸಿದ್ಧ ಧಾರ್ಮಿಕ ಸ್ಥಳ ಹಾಗೂ ಪ್ರವಾಸೋದ್ಯಮದ ಪ್ರದೇಶವಾಗಿರುವ ಬಿಳಿಗಿರಿರಂಗನ ಬೆಟ್ಟದಲ್ಲಿ  ಬಸ್ ನಿಲ್ದಾಣ ನಿರ್ಮಾಣ ಮಾಡುವ ಬಗ್ಗೆ  ಅನುದಾನ ಲಭ್ಯತೆಯನ್ನು ಆಧರಿಸಿ ಆದ್ಯತೆಯ ಮೇರೆಗೆ ಪರಿಶೀಲಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಉತ್ತರಿಸಿದರು.

ಯಳಂದೂರಿನಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಪಟ್ಟಣ ಪಂಚಾಯಿತಿಯವರು 1-03-2024 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಯಳಂದೂರಿನ ಆಶ್ರಯ ಬಡಾವಣೆಯಲ್ಲಿ ರಸ್ತೆ ವಿಸ್ತರಣೆಗಾಗಿ ಕಾಯ್ದಿರಿಸಿರುವ ಜಾಗದಲ್ಲಿ ಒಂದು ಎಕರೆ 14 ಗುಂಟೆ ಜಮೀನನ್ನು ನಿಗಮಕ್ಕೆ ಹಸ್ತಾಂತರಿಸಲು ತೀರ್ಮಾನಿಸಲಾಗಿದ್ದು ಹಸ್ತಾಂತರ ಮಾಡುವ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ ನಿವೇಶನವನ್ನು ನಿಗಮ ವಶಕ್ಕೆ ಪಡೆದ ನಂತರ ಸಾರಿಗೆ ಅವಶ್ಯಕತೆ ಹಾಗೂ ಅನುದಾನದ ಲಭ್ಯತೆ ಆದರಿಸಿ ಬಸ್ ನಿಲ್ದಾಣ ನಿರ್ಮಾಣ ಮಾಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಾರಿಗೆ ಸಚಿವರು ಹೇಳಿದರು

ಸಂತೆಮರಳ್ಳಿ ಹೋಬಳಿ ಸಂತೆಮರಳ್ಳಿ ಗ್ರಾಮಕ್ಕೆ ಸೇರಿದ ನಿಗಮದ ಬಸ್ ನಿಲ್ದಾಣಕ್ಕೆ ಕಾಯ್ದಿರಿಸಿದ ಸರ್ವೆ ನಂಬರ್ 130/3 ರ 1 ಎಕರೆ ಜಮೀನಿನ ಬಗ್ಗೆ ಖಾಸಗಿ ವ್ಯಕ್ತಿಗಳಾದ ಶ್ರೀಮತಿ ಬರಮ ಮತ್ತು ಇತರರು ಜೆಎಂಎಫ್ ನ್ಯಾಯಾಲಯ ಯಳಂದೂರು ಇಲ್ಲಿ ದಾಖಲಿಸಿದ ಪ್ರಕರಣವು ಇತ್ಯರ್ಥ ಗೊಂಡಿದ್ದು 29-11-2024 ರಂದು ನಿಗಮದ ಪರ ಇತ್ಯರ್ಥಗೊಂಡಿರುತ್ತದೆ. ಮುಂದಿನ ದಿನಗಳಲ್ಲಿ ಸಾರಿಗೆ ಅವಶ್ಯಕತೆ ಹಾಗೂ ಅನುದಾನದ ಲಭ್ಯತೆ ಆದರಿಸಿ ಬಸ್ ನಿಲ್ದಾಣ ನಿರ್ಮಾಣ ಮಾಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಶಾಸಕರ ಮತ್ತೊಂದು ಪ್ರಶ್ನೆಗೆ ಸಚಿವರು ವಿವರಣೆ ನೀಡಿದರು.

ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಪ್ರಶ್ನೆಗಳನ್ನು ಕೇಳುವಾಗ ಸ್ಪೀಕರ್ ಯು.ಟಿ.ಖಾದರ್ ತದೇಕಚಿತ್ತದಿಂದ ಆಲಿಸಿದರು.