ನಂಜನಗೂಡು: ಪುಟ್ಟ ಮಕ್ಕಳ ಕೈನಲ್ಲಿ ಸಂಪ್ ನಿಂದ ನೀರು ತೆಗೆಸುವ ಮೂಲಕ ಅವರ ಜೀವದ ಜೊತೆ ಸಿಬ್ಬಂದಿ ಚೆಲ್ಲಾಟವಾಡುತ್ತಿದ್ದಾರೆ.
ಇದು ಎಲ್ಲಿ ಅಂತೀರಾ. ಸಿಎಂ ತವರು ಕ್ಷೇತ್ರ, ವರುಣಾ ವಿಧಾನಸಭಾ ಕ್ಷೇತ್ರದ ಬಿಳಿಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ.
ಶಾಲೆಯ ಸಂಪ್ ನಿಂದ ಪುಟ್ಟ ಮಕ್ಕಳು ಬಿಂದಿಗೆಯಿಂದ ನೀರನ್ನ ಹೊರತೆಗೆದು ಬಳಕೆ ಮಾಡುತ್ತಿದ್ದಾರೆ.ಶಾಲೆಯ ಸಿಬ್ಬಂದಿ ಮಾಡಬೇಕಾದ ಕೆಲಸಗಳನ್ನ ಮಕ್ಕಳ ಕೈಲಿ ಮಾಡಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.
ಸುಮಾರು 10 ಅಡಿ ಆಳವಿರುವ ಸಂಪ್ ನಿಂದ ಮಕ್ಕಳು ಬಿಂದಿಗೆಯಲ್ಲಿ ನೀರು ತೆಗೆಯುತ್ತಿದ್ದಾರೆ.ಆಯತಪ್ಪಿ ಬಿದ್ದರೆ ಯಾರು ಹೊಣೆ?ಇದನ್ನು ಕೇಳುವವರು ಯಾರೂ ಇಲ್ಲವೆ?.

ಈ ಸರ್ಕಾರಿ ಶಾಲೆಯಲ್ಲಿ 90 ಕ್ಕೂ ಹೆಚ್ಚು ವಿಧ್ಯಾರ್ಥಿಗಳಿದ್ದಾರೆ.ಆದರೆ ಇಂತಹ ಕೆಲಸಗಳ ನಿರ್ವಹಣೆಗೆ ಕೆಲಸಗಾರರೇ ಇಲ್ಲ.
ಹೀಗಾಗಿ ಮಕ್ಕಳಿಂದಲೇ ಕೆಲಸ ಮಾಡಿಸುತ್ತಿದ್ದಾರೆ.
ಮುಖ್ಯಶಿಕ್ಷಕಿ ಸೇರಿದಂತೆ 5 ಮಂದಿ ಶಿಕ್ಷಕಿಯರಿದ್ದಾರೆ.ಮಕ್ಕಳು ಅಪಾಯಕ್ಕೆ ಆಹ್ವಾನ ನೀಡುವ ಕೆಲಸಗಳನ್ನ ಮಾಡುತ್ತಿದ್ದರೂ ಮುಖ್ಯ ಶಿಕ್ಷಕಿಗೆ ಇದು ತಿಳಿದಿಲ್ಲವೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ.
ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಸರ್ಕಾರಿ ಶಾಲೆ ಮಕ್ಕಳೆಂದರೆ ಬಹಳ ಪ್ರೀತಿ.ಆದರೆ ಅವರು ಪ್ರತಿನಿಧಿಸುವ ಕ್ಷೇತ್ರದಲ್ಲೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಶಿಕ್ಷಣ ಇಲಾಖೆ ಏನು ಮಾಡುತ್ತಿದೆಯೊ ತಿಳಿಯದಾಗಿದೆ.
ಅನಾಹುತ ಸಂಭವಿಸುವ ಮುನ್ನಾ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.ಇತ್ತ ಗಮನ ಹರಿಸಿ ಮಕ್ಕಳ ರಕ್ಷಣೆಗೆ ಮುಂದಾಗಲಿ
ಇದಕ್ಕೆ ಕಾರಣರಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಿ.