ಬೆಂಗಳೂರು: ಕನ್ನಡಿಗರಿಗೆ ಆದ್ಯತೆ ನೀಡದ ನಮ್ಮ ಮೆಟ್ರೋ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಅನಿವಾರ್ಯ ವಾಗಿದೆ ಎಂದು ಮುಖ್ಯಮಂತ್ರಿ ಚಂದ್ರು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಎಚ್ಚರಿಸಿದ್ದಾರೆ.
ಮಾಧ್ಯಮ ಹೇಳಿಕೆ ನೀಡಿರುವ ಅವರು,
ಬಿ ಎಂ ಆರ್ ಸಿ ಎಲ್ ಸಂಸ್ಥೆಯು ಇತ್ತೀಚಿಗೆ ಲೋಕೋ ಪೈಲೆಟ್ ಗಳ ನೇಮಕಾತಿಯಲ್ಲಿ 3 ವರ್ಷಗಳ ಅನುಭವದ ಷರತ್ತುಗಳು ವಿಧಿಸಿರುವುದು ಸಂಪೂರ್ಣ ಕನ್ನಡಿಗರನ್ನು ಹೊರಗಿಡುವ ಹುನ್ನಾರವೇ ಹೊರತು ಬೇರೇನೂ ಅಲ್ಲ, ಅನ್ಯ ರಾಜ್ಯಗಳ ಮೆಟ್ರೋಗಳಲ್ಲಿ ಕೆಲಸ ಮಾಡುತ್ತಿರುವ ಬೇರೆ ಭಾಷಿಕರನ್ನು ಚಾಲಕ ಹುದ್ದೆಗಳಿಗೆ ತುಂಬುವುದೇ ಇವರ ಷಡ್ಯಂತ್ರ ಎಂದು ಕಿಡಿಕಾರಿದ್ದಾರೆ.
ಈಗಾಗಲೇ ಸಂಸ್ಥೆಯಲ್ಲಿ ಉನ್ನತ ಹುದ್ದೆಗಳೆಲ್ಲವೂ ಅನ್ಯ ಭಾಷಿಕರ ಪಾಲಾಗಿದ್ದು ಅವರುಗಳ ಇಚ್ಛಾನುಸಾರವೇ ನೇಮಕಾತಿಗಳು ನಡೆಯುತ್ತಿರುವುದು ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ. ಕನ್ನಡದ ನೆಲ, ಜಲ, ತೆರಿಗೆ ಎಲ್ಲವನ್ನು ಬಳಸಿಕೊಳ್ಳುತ್ತಿರುವ ಸಂಸ್ಥೆಯು ಕನ್ನಡಿಗರ ನೇಮಕಾತಿ ವಿಚಾರದಲ್ಲಿ ಅನವಶ್ಯಕ ಗೊಂದಲಗಳನ್ನು ಸೃಷ್ಟಿಸುತ್ತಿದೆ, ಕೂಡಲೇ ಸರ್ಕಾರ ಇಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕಮ ತೆಗೆದುಕೊಳ್ಳಬೇಕು ಎಂದು ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದಾರೆ.
ಅಲ್ಲದೆ ಮೆಟ್ರೋ ಉನ್ನತ ಅಧಿಕಾರಿಗಳು ಅನವಶ್ಯಕವಾಗಿ ಅಧ್ಯಯನದ ಹೆಸರಿನಲ್ಲಿ ವಿದೇಶ ಪ್ರವಾಸಗಳನ್ನು ಕೈಗೊಂಡು ಮೋಜಿನ ಜೀವನ ನಡೆಸುತ್ತಿದ್ದಾರೆ. ಸಂಸ್ಥೆಯಲ್ಲಿ ಅನವಶ್ಯಕ ದುಬಾರಿ ಖರ್ಚುಗಳನ್ನು ಮಾಡುವ ಮೂಲಕ ನಷ್ಟವನ್ನು ತೋರಿಸುತ್ತಿದ್ದಾರೆ. ಸಂಸ್ಥೆಯು ಕನ್ನಡ ನೌಕರರ ಯೂನಿಯನ್ ಜೊತೆ ಯಾವುದೇ ಚರ್ಚೆಗಳನ್ನು ಮಾಡದೆ ಕನ್ನಡ ವಿರೋಧಿ ಧೋರಣೆಯನ್ನು ಮುಂದುವರಿಸುತ್ತಲೇ ಬರುತ್ತಿದ್ದಾರೆ ಇವುಗಳೆಲ್ಲವೂ ತಕ್ಷಣ ನಿಲ್ಲಬೇಕು ಎಂದು ಎಚ್ಚರಿಸಿದ್ದಾರೆ.
ಈಗಾಗಲೇ ಸಮಾಜದ ಎಲ್ಲ ವರ್ಗಗಳ ತೀವ್ರ ವಿರೋಧಗಳ ನಡುವೆಯೂ ಸಹ ಮೆಟ್ರೋ ಟಿಕೆಟ್ ಬೆಲೆಯನ್ನು ಏರಿಸಲಾಗಿದೆ,ಮೆಟ್ರೋ ಅಧಿಕಾರಿಗಳ ಬಂಡತನ ಎಲ್ಲೆ ಮೀರಿದೆ, ಕನ್ನಡಿಗರ ಅಸ್ಮಿತೆಯ ವಿಷಯದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಲೇಬೇಕಾಗಿದೆ.
ಇಂತಹ ಕನ್ನಡ ವಿರೋಧಿ ನೇಮಕಾತಿ ಅಧಿಸೂಚನೆಯನ್ನು ಕೂಡಲೇ ಹಿಂಪಡೆದುಕೊಳ್ಳಬೇಕು,ಅದಕ್ಕಾಗಿ 15 ದಿನಗಳ ಗಡುವನ್ನು ನೀಡುತ್ತಿದ್ದೇವೆ. ಇಲ್ಲದಿದ್ದಲ್ಲಿ ಮೆಟ್ರೋ ಸಂಸ್ಥೆಯ ವಿರುದ್ಧ ತೀವ್ರ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಚಂದ್ರು ಎಚ್ಚರಿಸಿದ್ದಾರೆ.