ಮೈಸೂರನ್ನು ಇಡೀ ದೇಶ ತಿರುಗಿ ನೋಡುವಂತೆ ಮಾಡಿದ್ದು ನಾಲ್ವಡಿ ಅವರು-ಹರೀಶ್ ಗೌಡ

Spread the love

ಮೈಸೂರು: ಮೈಸೂರು ರಾಜ್ಯವನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ಮಹಾನ್ ರಾಜ ಋಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೊಡುಗೆ ನೀಡದ ಕ್ಷೇತ್ರಗಳೇ ಇಲ್ಲ ಎಂದು ಶಾಸಕ ಹರೀಶ್ ಗೌಡ ಬಣ್ಣಿಸಿದರು.

ಕರ್ನಾಟಕ ಸೇನಾ ಪಡೆ ವತಿಯಿಂದ ಮೈಸೂರು ಅರಮನೆ ದಕ್ಷಿಣ ದ್ವಾರದ ಮುಂಭಾಗ ಆಯೋಜಿಸಿದ್ದ ಮೈಸೂರಿನ ಪ್ರಸಿದ್ಧ ಅರಸರು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 141 ನೇ ಹುಟ್ಟು ಹಬ್ಬದ ಸವಿ ನೆನಪಿಗಾಗಿ ಅರಮನೆಗೆ ಆಗಮಿಸುವ ಪ್ರವಾಸಿಗರಿಗೆ ಮೈಸೂರು ಪಾಕ್ ವಿತರಣೆ ಕಾರ್ಯಕ್ರಮ ದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಹರೀಶ್ ಗೌಡ ಮಾತನಾಡಿದರು.

ಕೃಷಿ, ಕೈಗಾರಿಕೆ, ನೀರಾವರಿ, ಜಲ ವಿದ್ಯುತ್, ಶಿಕ್ಷಣ, ಆರೋಗ್ಯ, ಸಮಾನತೆ ಸೇರಿದಂತೆ ಅಂದು ಮೈಸೂರು ಬೆಂಗಳೂರು ಆಕರ್ಷಣೀಯ ಕೇಂದ್ರವಾಗುವಂತೆ ಮಾಡಿದ್ದು ನಾಲ್ವಡಿಯವರು ಎಂದು ‌ಸ್ಮರಿಸಿದರು.

ಬಾಲಕನಾಗಿರುವಾಗಲೇ ಸಿಂಹಾಸನ ಏರಿದ ನಾಲ್ವಡಿ ಅವರು ಹತ್ತನೇ ಚಾಮರಾಜ ಒಡೆಯರ್ ಹಾಗೂ ತಾಯಿ ವಾಣಿವಿಲಾಸ ಸನ್ನಿಧಾನ ಕೆಂಪನಂಜಮ್ಮಣ್ಣಿ ಮಗನಾಗಿ ಜೂನ್ 4-1884 ರಲ್ಲಿ ಜನಿಸಿ ಆಗಲೇ ಪ್ರಜಾಪ್ರತಿನಿಧಿ ಸಭೆಯನ್ನು ಜಾರಿಗೆ ತಂದರು ಎಂದು ವಿವರಿಸಿದರು.

ಶಿಕ್ಷಣಕ್ಕೆ ಹೆಚ್ಚು ಆದ್ಯತೆ ಕೊಟ್ಟು1916ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸಿದವರು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ತೆರೆದವರು ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಹರೀಶ್ ಗೌಡ ತಿಳಿಸಿದರು.

ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಮಾತನಾಡಿ, ನಾಲ್ವಡಿ ಅವರು ರಾಜ್ಯದ ನಾನಾ ಭಾಗಗಳಲ್ಲಿ 270ಕ್ಕೂ ಹೆಚ್ಚು ಉಚಿತ ಆಸ್ಪತ್ರೆಗಳನ್ನು ಪ್ರಾರಂಭಿಸಿದರು,ಜೊತೆಗೆ ಮೈಸೂರು ಬೆಂಗಳೂರು ನಗರಗಳಲ್ಲಿ ವಿಶಾಲವಾದ ರಸ್ತೆಗಳು, ವಿದ್ಯುತ್ ದೀಪಗಳು, ಉದ್ಯಾನಗಳು, ಶ್ರೇಷ್ಠ ವಿದ್ಯಾಸಂಸ್ಥೆಗಳು, ಅನಾಥಾಲಯಗಳನ್ನು ನಿರ್ಮಾಣ ಮಾಡಿದರು. ನಾಲ್ವಡಿ ಅವರ ಆಡಳಿತ ಅವಧಿಯ ವರ್ಷಗಳನ್ನು ಮೈಸೂರಿನ ಸುವರ್ಣ ಯುಗ ಎಂದು ವರ್ಣಿಸಿದರು.

ಕನ್ನಡಿಗರು ಬೆಳಗೆದ್ದು ನೆನೆಯಲೇಬೇಕಾದ ಮಹನೀಯರಲ್ಲಿ, ಪ್ರಾತಃ ಸ್ಮರಣೀಯರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮೊದಲಿಗರು ಎಂದು ಹೇಳಿದರು.

ಕೇಂದ್ರ ಸರ್ಕಾರ ನಾಲ್ವಡಿ ಕೃಷ್ಣರಾಜ ಒಡೆಯರ್ ರವರಿಗೆ ಕೂಡಲೇ ಭಾರತ ರತ್ನ ಪ್ರಶಸ್ತಿ ನೀಡಬೇಕು ಹಾಗೂ ರಾಜ್ಯ ಸರ್ಕಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ದಿನ ಸರ್ಕಾರಿ ರಜೆ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕರು ಟಿ ಎಸ್ ಸುಬ್ರಹ್ಮಣ್ಯ‌ಅವರು ಅರಮನೆಗೆ ಆಗಮಿಸುವ ಪ್ರವಾಸಿಗರಿಗೆ ಮೈಸೂರು ಪಾಕ್ ವಿತರಣೆ ಮಾಡಿದರು

ಮುಖ್ಯ ಅತಿಥಿಗಳಾಗಿ‌ ಉದ್ಯಮಿ ಎ.ಪಿ ನಾಗೇಶ್, ಅನ್ವೇಷಣಾ ಟ್ರಸ್ಟ್ ನ ಅಧ್ಯಕ್ಷ ಅಮರನಾಥ ರಾಜೇಅರಸ್, ಕಾಂಗ್ರೆಸ್ ಮುಖಂಡ ನಜರಬಾದ್ ನಟರಾಜ್, ಸುರೇಶ್ ಗೋಲ್ಡ್, ಡಾ.ಶಾಂತರಾಜೇ ಅರಸ್, ಪ್ರಭುಶಂಕರ, ಸಿ ಎಚ್ ಕೃಷ್ಣಯ್ಯ, ಪ್ರಭಾಕರ, ನೇಹಾ, ಸಿಂದುವಳ್ಳಿ ಶಿವಕುಮಾರ್, ಭಾಗ್ಯಮ್ಮ, ಹನುಮಂತಯ್ಯ, ತಾಯೂರು ಗಣೇಶ್, ಕುಮಾರ್, ರಘು ಅರಸ್, ರವಿ ನಾಯಕ್, ರವೀಶ್, ವಿಷ್ಣು,ಮತ್ತಿತರರು ಹಾಜರಿದ್ದರು.