ನಾಡಿನಿಂದ‌ ಕಾಡಿನತ್ತ‌ ಹೊರಟ ‌ಗಜಪಡೆ:ಭಾವುಕರಾದರು ಜನತೆ

Spread the love

ಮೈಸೂರು: ಕಾಡಿನಿಂದ ನಾಡಿಗೆ ಬಂದು ಮೈಸೂರಿಗರ ಮನ ಸೂರೆಗೊಂಡಿದ್ದ‌ ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ ‌ದಸರಾ ಗಜಪಡೆ‌ ಮತ್ತೆ ಕಾಡಿಗೆ ಮರಳಿತು.

ಗಜಪಡೆಯನ್ನು ಲಾರಿಗೆ ಹತ್ತಿಸುವಾಗ ಅಧಿಕಾರಿಗಳು,ಅಭಿಮಾನಿಗಳು ಹಾಗೂ ಅಲ್ಲಿ ನೆರೆದಿದ್ದವರ‌ ಕಣ್ಣುಗಳು ತುಂಬಿಬಂದವು.

ಅದರಲ್ಲೂ ಅಭಿಮನ್ಯು ‌ಎಲ್ಲರತ್ತ‌ ಸೊಂಡಿಲು‌ ಎತ್ತಿ ನಮಸ್ಕರಿಸಿದ ಪರಿಗೆ‌ ಎಲ್ಲರೂ‌ ಭಾವುಕರಾದರು.

ಜಿಲ್ಲಾಧಿಕಾರಿ ಲಕ್ಷ್ಮೀ ಕಾಂತರೆಡ್ಡಿ ಮತ್ತಿತರ ಅಧಿಕಾರಿಗಳು‌ ಅಭಿಮನ್ಯುವಿನ ಸೊಂಡಿಲು‌‌ ಹಿಡಿದು‌ ಪ್ರೀತಿ ತೋರಿದರು.ಇದಕ್ಕೆ ಅಭಿಮನ್ಯು ಕೂಡಾ ಸೊಂಡಿಲು ಎತ್ತಿ ತನ್ನ ಪ್ರೀತಿ ಪ್ರಕಟಿಸಿದ.

ಲಾರಿಗೆ‌ ಅಭಿಮನ್ಯು ಮತ್ತಿತರ‌ ಆನೆಗಳನ್ನು ಹತ್ತಿಸುತ್ತಿದ್ದಾಗ ಎಲ್ಲರೂ ಅಭಿಮನ್ಯು ವಿಗೆ ಜೈಕಾರ ಕೂಗಿದರು,ಟಾಟಾ ಮಾಡಿದರು ಸೆಲ್ಫಿ ತೆಗೆದುಕೊಳ್ಳಲು ಮುಂದಾದರು, ಕೆಲವರಂತೂ ಆನೆಗಳನ್ನು ಕಳಿಸಲಾಗದೆ ದುಃಖಿತರಾದರು.

ಅಭಿಮನ್ಯು ಕೂಡಾ‌ ಮೈಸೂರನ್ನು ಬಿಟ್ಟಿರಲಾರದವನಂತೆ‌ ಮೌನವಾಗಿ ಲಾರಿ ಹತ್ತಿ ಮುಂದೆ‌ ಸಾಗಿದ.ಅಭಿಮನ್ಯು ಬಾ,ಮತ್ತೆ‌ ಬಾ ಎಂಬ ಕೂಗು ಕೇಳುತ್ತಲೇ‌ ಲಾರಿ ಮುಂದೆ‌ ಸಾಗಿತು.

ಈ‌‌ ವೇಳೆ‌ ಲಕ್ಷ್ಮೀ ಕಾಂತ ರೆಡ್ಡಿ ‌ಅವರು‌ ಮಾವುತರು,ಕಾವಾಡಿಗರಿಗೆ‌ ಅವರ‌‌ ಗೌರವಧನದ ಚೆಕ್ ನೀಡಿ ಅಭಿನಂದಿಸಿ ಕೃತಜ್ಞತೆ‌ ಸಲ್ಲಿಸಿದರು.