ಮೈಸೂರಲ್ಲಿ ಮೇಲ್ಸೇತುವೆ, ಸುರಂಗ ಮಾರ್ಗ: ಮೈಸೂರು ರಕ್ಷಣಾ ವೇದಿಕೆ ತೀವ್ರ ವಿರೋಧ

ಮೈಸೂರು: ಮೈಸೂರು ನಗರದಲ್ಲಿ ಮೇಲ್ ಸೇತುವೆ, ಸುರಂಗ ಮಾರ್ಗ ಹಾಗೂ ಗ್ರೇಟರ್ ಮೈಸೂರು ಯೋಜನೆ ಬರುವುದನ್ನು ಮೈಸೂರು ರಕ್ಷಣಾ ವೇದಿಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ
ಮೈ,ಕಾ,ಪ್ರೇಮ್ ಕುಮಾರ್,ಆಳುವ ಸರ್ಕಾರ, ಅದರಲ್ಲೂ ಮೈಸೂರು ಜಿಲ್ಲೆಯವರೆ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರಿನ ಮೇಲಿನ ಮಮತೆಯಿಂದ ಗ್ರೇಟರ್ ಮೈಸೂರು ಯೋಜನೆಯನ್ನು ಜಾರಿಗೆ ತರುವ ಯೋಚನೆ ನಡೆಸುತ್ತಿದ್ದಾರೆ, ಈ ಯೋಜನೆ ಸರ್ಕಾರ ಮತ್ತು ಕೆಲವು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಸಂತಸ ತಂದಿರಬಹುದು, ಆದರೆ ಮೈಸೂರು ಜನತೆಗೆ ಇದು ಮಾರಕವಾದ ಯೋಜನೆ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಎಲ್ಲಾ ಯೋಜನೆಗಳನ್ನು ತಾತ್ಕಾಲಿಕವಾಗಿ ಬದಿಗಿಟ್ಟು, ಮೈಸೂರಿನ ಜನತೆಗೆ ನಿಜವಾಗಿ ಅಗತ್ಯವಿರುವ ಮೂಲಭೂತ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಿ ಎಂದು ಆಗ್ರಹಿಸಿದರು.

1800ನೇ ಇಸವಿಯಿಂದ ಮುಮ್ಮಡಿ ಕೃಷ್ಣರಾಜ ಒಡೆಯರ್‌ರವರಿಂದ ಆರಂಭವಾದ ಮೈಸೂರು ರಾಜ್ಯದ ಅಭಿವೃದ್ಧಿಯ ಪರಂಪರೆ, ಮಹಾರಾಜ ಜಯ ಚಾಮರಾಜೇಂದ್ರ ಒಡೆಯರ್‌ರ ಕಾಲದವರೆಗೆ ಜನಹಿತವಾದ ಯೋಜನೆಗಳಿಂದ ತುಂಬಿತ್ತು. ದಿವಾನ್ ಪೂರ್ಣಯ್ಯ ಸೇರಿದಂತೆ ಇತರ ದಿವಾನರುಗಳು ಮೈಸೂರನ್ನು ಶ್ರದ್ದೆಯಿಂದ ಯೋಚಿಸಿ ಯೋಜಿಸಿ ಸುಂದರ ನಗರವನ್ನಾಗಿ ರೂಪಿಸಿದ್ದಾರೆ. ಅವರ ಈ ಯೋಜನೆಗಳು ಇಂದಿಗೂ ಪ್ರಸ್ತುತ ಜನತೆ ಅವುಗಳನ್ನು ನಿರಾತಂಕವಾಗಿ ಬಳಸುತ್ತಿದ್ದಾರೆ ಎಂದು ತಿಳಿಸಿದರು.

ಇಂತಹ ಪಾರಂಪರಿಕ ನಗರವನ್ನು ಈಗ ಗ್ರೇಟರ್ ಮೈಸೂರು ಎಂಬ ಹೆಸರಿನಲ್ಲಿ ಬದಲಾಯಿಸಲು ಹೊರಟಿರುವುದು ಪರಂಪರೆಗೆ ಮಾಡಿದ ಅಪಮಾನ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ದಂಧೆಯೇ ಆಗಿದೆ ಎಂದು ಗಂಭೀರ ಆರೋಪ ಮಾಡಿದರು.

ಮೈಸೂರಿನ ಸಂಸದ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೂಡ ಮೇಲ್ಲೇತುವೆ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರ ಉಲ್ಲೇಖಿಸಿರುವ ವಿನೋಬಾ ರಸ್ತೆ ಮತ್ತು ಜೆ.ಎಲ್.ಬಿ. ರಸ್ತೆಗಳಲ್ಲಿ ಪಾರಂಪರಿಕ ಕಟ್ಟಡಗಳಿವೆ, ಜೊತೆಗೆ ರಸ್ತೆಯಲ್ಲಿ ಭೂಗತ ನೀರಿನ ಪೈಪ್‌ ಲೈನ್‌ಗಳು ಹಾದುಹೋಗಿವೆ. ಇಂತಹ ಪ್ರದೇಶದಲ್ಲಿ ಯಾವುದೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವುದು ಅವೈಜ್ಞಾನಿಕ ಮತ್ತು ಅಪಾಯಕಾರಿ ಯೋಜನೆಯಾಗುತ್ತದೆ ಎಂದು ಪ್ರೇಮ್ ಕುಮಾರ್ ಹೇಳಿದರು.

ಮೈಸೂರಿನ ಹಳೆಯ ಪ್ರದೇಶಗಳಲ್ಲಿ ಅಂದರೆ (ರಿಂಗ್ ರಸ್ತೆಯೊಳಗಿನ 65 ವಾರ್ಡ್‌ಗಳಲ್ಲಿ) ಜನತೆಗೆ ಬೇಕಾದ ಪ್ರಮುಖ ಅಗತ್ಯಗಳೆಂದರೆ
ಕುಡಿಯಲು ಕಾವೇರಿ ನೀರಿನ 24 x 7 ಸರಬರಾಜು,ಉತ್ತಮ ಒಳಚರಂಡಿ ವ್ಯವಸ್ಥೆ, ಕಸದ ವಿಲೇವಾರಿ,ಅಗಲವಾದ ಪಾದಚಾರಿಗಳ ಮಾರ್ಗ, ಉತ್ತಮವಾದ ರಸ್ತೆಗಳು, ಈ ರೀತಿಯ ಮೂಲಭೂತ ಸೌಕರ್ಯಗಳನ್ನು ಸರಿಯಾಗಿ ಕೊಡಿ ಅದು ಬಿಟ್ಟು ಸರ್ಕಾರದ ಜನಪ್ರತಿನಿಧಿಗಳು ಗ್ರೇಟರ್ ಮೈಸೂರು ಯೋಜನೆ ಎಂಬ ದಂಧೆಗೆ ಕೈಜೋಡಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ವೇದಿಕೆಯವರು ಖಂಡಿಸಿದರು.

ಹಲವಾರು ವರ್ಷಗಳಿಂದ ನೆನೆಗುದಿಗೆ ಇರುವ ದೇವರಾಜ ಮಾರುಕಟ್ಟೆ, ಲ್ಯಾನ್ಸ್ ಡೌನ್ ಕಟ್ಟಡ, ಹಾಗೂ ಅಗ್ರಹಾರದ ವಾಣಿವಿಲಾಸ ಮಾರುಕಟ್ಟೆಗಳ ಪುನರ್‌ನಿರ್ಮಾಣಕ್ಕೆ ಯೋಜನೆಗಳನ್ನು ರೂಪಿಸದಿರುವುದು ಈ ಜಡ್ಡುಗಟ್ಟಿದ ಅಡಳಿತ ವ್ಯವಸ್ಥೆಗೆ ಜೀವಂತ ಉದಾಹರಣೆಯಾಗಿದೆ ಎಂದು ಕಿಡಿಕಾರಿದರು.

ದೇವರಾಜ ಮಾರುಕಟ್ಟೆಯ ಪಾರಂಪರಿಕತೆಯನ್ನು ಉಳಿಸಿಕೊಳ್ಳುವುದೇ ಆದರೆ ಸಯ್ಯಾಜಿರಾವ್ ರಸ್ತೆ ಮತ್ತು ದಕ್ಷಿಣ ಭಾಗದ ಕಟ್ಟಡವನ್ನು ಉಳಿಸಿಕೊಂಡು ಮಾರುಕಟ್ಟೆಯ ಒಳಭಾಗವನ್ನು ಸಂಪೂರ್ಣವಾಗಿ ಕೆಡವಿ ನೆಲಮಹಡಿ ಮತ್ತು ಮೊದಲನೆಯ ಅಂತಸ್ತಿನ ಪಾರ್ಕಿಂಗ್ ಸಹಿತ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಮಾಡಬಹುದು. ಇದರ ಜೊತೆಗೆ ಆನೆ ಸಾರೋಟ್ ರಸ್ತೆಯನ್ನು ಅಗಲೀಕರಣ ಮಾಡಿದರೆ ವಿನೋಬಾ ರಸ್ತೆಯ ಸಂಚಾರದ ಒತ್ತಡವನ್ನು ಕಡಿಮೆ ಬಹುದು ಎಂದು ಸಲಹೆ ನೀಡಿದರು.

ಅಪರಾಧ ರಹಿತ ಮತ್ತು ಸುಂದರವಾದ ಪಾರಂಪರಿಕವಾದ ಮೈಸೂರು ಉಳಿಯಬೇಕಾದರೆ ಫುಟ್‌ಪಾತ್ ವ್ಯಾಪಾರಿಗಳ ಆತಿಕ್ರಮಣ, ತಳ್ಳುವ ಗಾಡಿಗಳ ಹಾವಳಿ ಮತ್ತು ಅಕ್ರಮ ಅಂಗಡಿಗಳ ಸಮಸ್ಯೆ ಪರಿಹರಿಸಬೇಕು.

ಮುಖ್ಯಮಂತ್ರಿಗಳು ಮೈಸೂರಿನ ಅಭಿವೃದ್ಧಿಗೆ ನಿಜವಾದ ಬದ್ಧತೆಯುಳ್ಳವರಾದರೆ, ಮೈಸೂರು ಮಹಾನಗರ ಪಾಲಿಕೆ, ಜಿಲ್ಲಾಧಿಕಾರಿ ಕಚೇರಿ ಹಾಗೂ ಪೊಲೀಸ್ ಇಲಾಖೆಯಲ್ಲಿ ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಬೇಕು ಇದರಿಂದ ಮೈಸೂರು ನಗರ ನಿಜವಾದ ಬದಲಾವಣೆಯಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಗ್ರೇಟರ್ ಮೈಸೂರು ಯೋಜನೆಯನ್ನು ಜಾರಿಗೊಳಿಸುವ ಬದಲು, ಮೈಸೂರನ್ನು ಮೈಸೂರು 1 ಮತ್ತು ಮೈಸೂರು 2 ಎಂದು ವಿಭಾಗಿಸಿ ಅಭಿವೃದ್ಧಿ ಕಾರ್ಯಗಳನ್ನು ಸಮನ್ವಯಗೊಳಿಸಬಹುದು ಎಂದು ಪ್ರೆಮ್ ಕುಮಾರ್ ತಿಳಿಸಿದರು.

ಸುದ್ದಿ ಗೋಷ್ಠಿಯಲ್ಲಿ ವೇದಿಕೆಯ ಉಪಾಧ್ಯಕ್ಷ
ಕುಂಬಾರ ಕೊಪ್ಪಲು ಕುಮಾರ್ ಗೌಡ ಹಾಗೂ
ಗುರುರಾಜ್,ಪ್ರಮೋದ್,
ಸಂಜಯ್ ಉಪಸ್ಥಿತರಿದ್ದರು.