ಮೈಸೂರು: ನಕಾರಾತ್ಮಕ ಚಿಂತನೆ ಬಿಟ್ಟು
ದೃಢ ವಿಶ್ವಾಸದಿಂದ ಚೆನ್ನಾಗಿ ಓದಿ,ಸ್ಪರ್ಧಾತ್ಮಕ ಜಗತ್ತಿಗೆ ಇದು ಒಳ್ಳೆಯದು ಎಂದು ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್ ನಂದಿನಿ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕಾವೇರಿ ಸಭಾಂಗಣದಲ್ಲಿ ನಡೆಯುತ್ತಿರುವ ಐಎಎಸ್ ಹಾಗೂ ಕೆಎಎಸ್ ಪರೀಕ್ಷಾ ತರಬೇತಿಯ ಶಿಬಿರಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಅವರು ಸಂವಾದ ನಡೆಸಿದರು.
ಮೊದಲು ನಕಾರಾತ್ಮಕ ಚಿಂತನೆ ಬಿಡಿ, ಗುರಿಗೆ ಸಮಯ ನಿಗದಿಪಡಿಸಿಕೊಳ್ಳಿ ಸ್ಪರ್ಧಾತ್ಮಕ ಜಗತ್ತಿಗೆ ದೃಢ ವಿಶ್ವಾಸವೇ ಮುಖ್ಯ ಎಂದು ತಿಳಿಸಿದರು.
ಸಿದ್ದತೆ ಹೇಗಿದ್ದರೆ ಉತ್ತಮ, ಓದುವುದು ಹೇಗೆ, ಓದಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಹೇಗೆ, ಪ್ರಶ್ನೆಗೆ ಉತ್ತರಿಸುವ ಕ್ರಮ, ಎಷ್ಟು ಅಂಕದ ಪ್ರಶ್ನೆಗಳಿಗೆ ಓದಲು ಆದ್ಯತೆ ನೀಡಬೇಕು ಮುಂತದುವುಗಳ ಬಗ್ಗೆ ಅಗತ್ಯ ತಿಳುವಳಿಕೆ ನೀಡಿದರು.
ಯುಪಿಎಸ್‌ಸಿ ಜರ್ನಿ ಯುನಿಕ್ ಆಗಿದೆ. ಬೇರೆಯವರೊಂದಿಗೆ ನೀವು ಹೋಲಿಕೆ ಮಾಡಿಕೊಳ್ಳಬೇಡಿ. ಪರೀಕ್ಷೆ ಬರೆಯುವವರು ಪ್ರಸ್ತುತ ವಿದ್ಯಾಮಾನದ ಬಗ್ಗೆ ಗಮನ ಹರಿಸಿ. ನೀವು ಪ್ರಸ್ತುತ ಓದುತ್ತಿರುವ ವಿಷಯದ ಕುರಿತು ಸಂಪೂರ್ಣ ತಿಳಿದುಕೊಳ್ಳಿ. ಬೆಸಿಕಲಿ ಎನ್ ಸಿ ಇ ಆರ್ ಟಿ ಪುಸ್ತಕ ಸಹಾಯ ಮಾಡುತ್ತೆ. ಇಂಗ್ಲಿಷ್, ಹಿಂದಿ ಹಾಗೂ ಕನ್ನಡ ಎಂಬ ಮಾಧ್ಯಮ ಅಸಹಾಯಕತೆ ಬೇಡ, ಕನ್ನಡದಲ್ಲೇ ಪರೀಕ್ಷೆ ಎದುರಿಸಿ. ನಾನು ಸಹ ಯುಪಿಎಸ್ ಸಿಯಲ್ಲಿ ಐಚ್ಛಿಕ ವಿಷಯ ಕನ್ನಡವನ್ನೇ ಆಯ್ಕೆ ಮಾಡಿಕೊಂಡಿದ್ದೆ ಎಂದು ಹೇಳಿ ನಂದಿನಿ ಹುರಿದುಂಬಿಸಿದರು.
ಪರೀಕ್ಷಾ ತಯಾರಿ ಬಗ್ಗೆ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ.ರಂಗೇಗೌಡ ಅವರು ಮಾತನಾಡಿ, ಓದಿಗೆ ಆಸಕ್ತಿ ಮುಖ್ಯ. ಇಲ್ಲಿ ಬಹಳ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಇದ್ದಾರೆ. ಮಾಧ್ಯಮ ಮುಖ್ಯ ಅಲ್ಲ. ಓದುವ ಆಸಕ್ತಿ ಮುಖ್ಯ. ಹೀಗಾಗಿ ನನಗೆ ಇಂಗ್ಲಿಷ್ ಬರಲ್ಲ, ಹಿಂದಿ ಬರಲ್ಲ ಎನ್ನುವ ಹಿಂಜರಿಕೆ ಬೇಡ. ನಿಮಗೆ ದೃಢವಿರುವ ಮಾಧ್ಯಮದಲ್ಲೇ ಓದಿ ಪರೀಕ್ಷೆ ಎದುರಿಸಿ ಎಂದು ದೈರ್ಯ ತುಂಬಿದರು
ಕುಲಪತಿ ಪ್ರೊ.ವಿ.ಶರಣಪ್ಪ ಹಲಸೆ ಅವರು 2017ನೇ ಸಾಲಿನಲ್ಲಿ ದೇಶಕ್ಕೆ ಪ್ರಥಮ ರ್‍ಯಾಂಕ್ ಪಡೆದು ಆಯ್ಕೆಯಾದ ಮಂಡ್ಯ ಜಿಲ್ಲಾ ಪಂಚಾಯತ್ ಸಿಇಒ ಕೆ.ಆರ್. ನಂದಿನಿ ಅವರನ್ನು ಕರಾಮುವಿ ಪರವಾಗಿ ಅಭಿನಂದಿಸಿ ಮಾತನಾಡಿ, ನಮ್ಮ ರಾಜ್ಯಕ್ಕೆ ಹೆಮ್ಮೆ ತಂದ ನಂದಿನಿ ಅವರು ಶಿಕ್ಷಕರ ಮಗಳಾಗಿ ಇಡೀ ಶಿಕ್ಷಕ ವೃಂದಕ್ಕೆ ಹಾಗೂ ರಾಜ್ಯಕ್ಕೆ ಮಾದರಿಯಾಗಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ್, ಪರೀಕ್ಷಾಂಗ ಕುಲಸಚಿವ ಪ್ರೊ.ಎಚ್.ವಿಶ್ವನಾಥ್, ಅಧ್ಯಯನ ಕೇಂದ್ರದ ಡೀನ್ ಪ್ರೊ.ರಾಮನಾಥಂ ನಾಯ್ಡು, ಹಣಕಾಸು ಅಧಿಕಾರಿ ಪ್ರೊ.ಎಸ್.ನಿರಂಜನ್ ರಾಜ್, ಕೇಂದ್ರದ ಸಂಯೋಜಕ ಜೈನಹಳ್ಳಿ ಸತ್ಯನಾರಾಯಣಗೌಡ, ಸಿಬ್ಬಂದಿ ಸಿದ್ದೇಶ್ ಹೊನ್ನೂರು. ಬಿ. ಗಣೇಶ್ ಕೆ.ಜಿ. ಕೊಪ್ಪಲ್ ಮತ್ತಿತರರು ಉಪಸ್ಥಿತರಿದ್ದರು.