ಮೈಸೂರು: ಶತಮಾನ ಪೂರೈಸಿರುವ ಮೈಸೂರು ವಿಶ್ವವಿದ್ಯಾನಿಲಯವು ಇದೇ ಮೊದಲ ಬಾರಿಗೆ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಒಂದೇ ಸೂರಿನಡಿ ನಡೆಸುವ ಮೂಲಕ ಪರೀಕ್ಷಾ ಚಟುವಟಿಕೆಗಳಲ್ಲಿ ಸುಧಾರಣೆಗೆ ಮುನ್ನುಡಿ ಬರೆದಿದೆ.
ಈವರೆಗೆ ಆಯಾಯ ಅಧ್ಯಯನ ವಿಭಾಗಗಳಲ್ಲೇ ಪರೀಕ್ಷೆಗಳನ್ನು ನಡೆಸ ಲಾಗುತ್ತಿತ್ತು. ಆದರೆ, 2025-26ನೇ ಶೈಕ್ಷಣಿಕ ವರ್ಷದಲ್ಲಿ ಸ್ನಾತಕೋತ್ತರ ಪದವಿ ಪರೀಕ್ಷೆ ಗಳನ್ನು ಮೈಸೂರು ವಿವಿಯ ಮೌಲ್ಯ ಭವನ ದಲ್ಲಿ ನಡೆಸಲಾಗುತ್ತದೆ.
ಪ್ರಸಕ್ತ ಶೈಕ್ಷಣಿಕ ಸಾಲಿನ 2ನೇ ಮತ್ತು ನಾಲ್ಕನೇ ಸೆಮಿಸ್ಟರ್ ಸ್ನಾತಕೋತ್ತರ ಪದವಿ ಪರೀಕ್ಷೆಗಳು ಜುಲೈ 3 ರಿಂದಲೇ ಪ್ರಾರಂಭವಾಗಿದ್ದು, ಈ ಮೂಲಕ ಮೈಸೂರು ವಿವಿಯು ಮಹತ್ವದ ಹೆಜ್ಜೆ ಇರಿಸಿದೆ.
ವಿಶ್ವವಿದ್ಯಾನಿಲಯದ 54 ವಿಭಾಗಗಳ ವಿದ್ಯಾರ್ಥಿಗಳು ಒಂದೇ ಸೂರಿನಡಿ ಪರೀಕ್ಷೆ ಬರೆದಾಗ ಸಾರ್ಥಕ ಭಾವನೆ ಬರುತ್ತದೆ. ಇದರಿಂದ ವಿದ್ಯಾರ್ಥಿಗಳಿಗೂ ಪರೀಕ್ಷೆಯ ಬಗ್ಗೆ ಶಿಸ್ತು ಬರಲಿದೆ.
ಇಲ್ಲಿಯವರೆಗೆ ಆಯಾ ವಿಭಾಗಗಳಲ್ಲೇ ಪರೀಕ್ಷೆಗಳು ನಡೆಯುತ್ತಿದ್ದಾಗ ಅದೇ ವಿಭಾಗಗಳ ಅಧ್ಯಾಪಕರು, ಪರಿವೀಕ್ಷಕ ರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಬೇರೆ ಬೇರೆ ವಿಭಾಗದವರು ಪರಿವೀಕ್ಷಕರಾಗಿ ಪರೀಕ್ಷೆಯ ಮೇಲ್ವಿಚಾರಣೆ ನಡೆಸುವುದರಿಂದ ಇನ್ನಷ್ಟು ಶಿಸ್ತು ಕಾಣುತ್ತದೆ.
ವಿದ್ಯಾರ್ಥಿಗಳು ಅತ್ತ ಇತ್ತ ತಿರುಗಿ ನೋಡುವ ಪರಿಪಾಟಕ್ಕೂ ಬ್ರೇಕ್ ಬಿದ್ದಿದೆ.
ಸದ್ಯ ಸ್ನಾತಕೋತ್ತರ ಪದವಿಯ 2ನೇ ಮತ್ತು ನಾಲ್ಕನೇ ಸೆಮಿಸ್ಟರ್‌ಗಳಲ್ಲಿ ಒಟ್ಟು 4,500 ವಿದ್ಯಾರ್ಥಿಗಳು ಪರೀಕ್ಷೆ ಬರೆಯು ತ್ತಿದ್ದಾರೆ.
ಪರೀಕ್ಷೆಗಳು ಎರಡು ಅವಧಿಗಳಲ್ಲಿ ನಡೆಯುತ್ತಿವೆ ಎನ್ನುತ್ತಾರೆ ಮೈಸೂರು ವಿಶ್ವವಿದ್ಯಾನಿಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ನಾಗರಾಜು ಅವರು.
ಈ ಹಿಂದೆ ಪರೀಕ್ಷಾ ಸಮಯದಲ್ಲಿ ನಿತ್ಯ ಆಯಾ ವಿಭಾಗಕ್ಕೆ ಹೋಗಿ ಪ್ರಶ್ನೆ ಪತ್ರಿಕೆ ನೀಡುವುದು, ಬಳಿಕ ಉತ್ತರ ಪತ್ರಿಕೆ ಸಂಗ್ರಹಿಸುವ ಕಾರ್ಯ ಮಾಡಲಾಗುತ್ತಿತ್ತು. ಇದರಿಂದ ವಿವಿ ಆರ್ಥಿಕತೆಗೂ ಪೆಟ್ಟು ಬೀಳುತ್ತಿತ್ತು. ಆದರೆ ಈಗ ಎಲ್ಲ ವಿಭಾಗ ಗಳ ಪರೀಕ್ಷೆಗಳು ಒಂದೇ ಸೂರಿನಡಿ ನಡೆಯುತ್ತಿರುವುದರಿಂದ ವಿವಿಗೆ ಆರ್ಥಿಕವಾಗಿ ಅನುಕೂಲ ವಾಗಲಿದೆ.
ಅಲ್ಲದೇ, ಈ ಹೊಸ ವ್ಯವಸ್ಥೆಗೆ ವಿದ್ಯಾರ್ಥಿಗಳೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೌಲ್ಯಭವನದಲ್ಲಿ ಪರೀಕ್ಷೆಗಳು ಯಾವುದೇ ಸಮಸ್ಯೆಗಳಿಲ್ಲದೆ ನಡೆಯುತ್ತಿರುವುದು ವಿಶೇಷವೇ ಸರಿ.