ಪೊಲೀಸರ ಕಂಡು ಎಸ್ಕೇಪ್ ಆದ ಕಳ್ಳ: ಕದ್ದ ಬ್ಯಾಗ್ ನಲ್ಲಿತ್ತು7.20 ಲಕ್ಷ ಬೆಲೆಯ ಚಿನ್ನಾಭರಣ

Spread the love

ಮೈಸೂರು: ಗಸ್ತಿನಲ್ಲಿದ್ದ ಪೊಲೀಸರ ಕಂಡೊಡನೆ ಸ್ಕೂಟರ್ ಬಿಟ್ಟು ಓಡಿಹೋದ ಕಳ್ಳನ ಬ್ಯಾಗ್ ನಲ್ಲಿ ನಗದು ಸೇರಿ 7.20 ಲಕ್ಷ ಮೌಲ್ಯದ ಚಿನ್ನಾಭರಣ ದೊರೆತಿದೆ.

ಯಾರದ್ದೊ ಮನೆಯಲ್ಲಿ ಕಳ್ಳತನ ಮಾಡಿ ಮಾಲು ಸಮೇತ ಎಸ್ಕೇಪ್ ಆಗುತ್ತಿದ್ದ ವೇಳೆ ಪೊಲೀಸರು ಎದುರಾಗಿದ್ದಾರೆ.ಹೆದರಿದ ಕಳ್ಳ ತಪ್ಪಿಸಿಕೊಂಡ,ಆದರೆ ಆತ ಕದ್ದ ಮಾಲು ಪೊಲೀಸರಿಗೆ ಸಿಕ್ಕಿದೆ.

ಮುಂಜಾನೆ 4.10 ಯಲ್ಲಿ ಮೈಸೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೂಟಗಳ್ಳಿ ಸಿಗ್ನಲ್ ಬಳಿ ಈ ಘಟನೆ ನಡೆದಿದೆ.

ವಿಜಯನಗರ ಠಾಣೆ ಸಿಬ್ಬಂದಿ ಅನಂತ್ ಅವರು ರಾತ್ರಿ ಪಾಳಿ ಗಸ್ತಿನಲ್ಲಿದ್ದರು. ಮುಂಜಾನೆ ಹೂಟಗಳ್ಳಿ ಬಳಿ ಗಸ್ತಿನಲ್ಲಿದ್ದಾಗ ಅಸ್ಪಷ್ಟ ನಂಬರ್ ಪ್ಲೇಟ್ ಇದ್ದ ಸ್ಕೂಟರ್ ನಲ್ಲಿ ವ್ಯಕ್ತಿಯೊಬ್ಬ ತೆರಳುತ್ತಿದ್ದ.

ಈ ವೇಳೆ ಪೊಲೀಸರು ಆತನ ಅಡ್ಡಗಟ್ಟಿ ನಿಲ್ಲಿಸಿದಾಗ ಕಳ್ಳ ಓಡಿಹೋಗಿದ್ದಾನೆ, ಪೊಲೀಸರೂ ಕೂಡಾ ಆತನ ಬೆನ್ನಟ್ಟಿದ್ದಾರೆ.ಆದರೆ ಆತ ಪರಾರಿಯಾಗಿದ್ದ.

ನಂತರ ಸ್ಕೂಟರ್ ಬಳಿ ಬಂದು ಪರಿಶೀಲಿಸಿದಾಗ ಬ್ಯಾಗ್ ದೊರೆತಿದೆ.ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿ ನಂತರ ಸ್ಕೂಟರ್ ಹಾಗೂ ಬ್ಯಾಗ್ ಠಾಣೆಗೆ ತಂದು ತೆರೆದು ನೋಡಿದಾಗ 50 ಸಾವಿರ ನಗದು ಹಾಗೂ 90 ಗ್ರಾಂ ಚಿನ್ನಾಭರಣ ಇದ್ದುದು ಕಂಡು ಬಂದಿದೆ.

ಈ ಸಂಬಂಧ ವಿಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ, ಕಳ್ಳನ ಪತ್ತೆಗಾಗಿ ಬಲೆ ಬೀಸಿದ್ದಾರೆ.