ಮೈಸೂರು: ಮೈಸೂರಿನಲ್ಲಿ ತಾಪಮಾನ ಏರಿಕೆ ಹಿನ್ನಲೆಯಲ್ಲಿ ಜಿಲ್ಲಾ ಆರೋಗ್ಯ ಕಲ್ಯಾಣ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಕಲ್ಯಾಣ ಅಧಿಕಾರಿ ಡಾ.ಕುಮಾರಸ್ವಾಮಿ ತಿಳಿಸಿದರು.
ಈಗಾಗಲೇ ಎರಡು ಹಂತಗಳಲ್ಲಿ ಬೇಸಿಗೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಹೆಚ್ಚು ಬಿಸಿಲಿನ ಸಮಯದಲ್ಲಿ ಸಾರ್ವಜನಿಕರು ಅನಗತ್ಯವಾಗಿ ಓಡಾಡುವುದನ್ನು ಕಡಿಮೆ ಮಾಡಬೇಕು. ದೇಹದ ನಿರ್ಜಲೀಕರಣ ಆಗದಂತೆ ಗಮನ ವಹಿಸಬೇಕು, ಉಷ್ಣಾಂಶ ಹೆಚ್ಚಾದಾಗ ಕೆಲವು ತೊಂದರೆಗಳು ಆಗುತ್ತವೆ ಎಂದು ಹೇಳಿದರು.
ನಮ್ಮ ಆಶಾ ಕಾರ್ಯಕರ್ತೆಯರ ಮೂಲಕ ಮನೆ ಮನೆಗಳಿಗೆ ಬೇಸಿಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.
ದೇಹ ನಿರ್ಜಲೀಕರಣ ಮನೆಯಲ್ಲೇ ಓಆರ್ಎಸ್ ದ್ರಾವಣ ಹೇಗೆ ತಯಾರಿಸಬೇಕೆಂಬ ಬಗ್ಗೆ ಆಶಾ ಕಾರ್ಯಕರ್ತೆಯರು ಹೇಳಿಕೊಡುತ್ತಾರೆ ಎಂದು ಡಿಹೆಚ್ಒ ತಿಳಿಸಿದರು.
ಸಾಧ್ಯವಾದಷ್ಟು ನೀರು,ತಂಪು ಪಾನೀಯ ಸೇವಿಸಬೇಕು,ಮಾಂಸಹಾರ ಕಡಿಮೆ ಮಾಡಿ, ಸಸ್ಯಹಾರವನ್ನೇ ಹೆಚ್ಚು ಬಳಸಬೇಕು. ರೈತರು ಹೊಲ ಗದ್ದೆಗಳಲ್ಲಿ ದುಡಿಯುವವರು ಮುಂಜಾನೆ ಹೋಗಿ 10.30,11 ಗಂಟೆ ಸಮಯಕ್ಕೆ ಮನೆಗೆ ಬಂದು ವಿರಮಿಸಬೇಕು. ಬಿಸಿಲ ತಾಪದಲ್ಲಿ ಕೆಲಸ ಮಾಡುವುದನ್ನು ಆದಷ್ಟು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.
ಬೇಸಿಗೆ ನಿರ್ವಹಣೆಗೆ ನಾವು ಈಗಾಗಲೇ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿದ್ದೇವೆ ಕೈಪಿಡಿಗಳು,ಪೋಸ್ಟರ್ ಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದೇವೆ ಎಂದು ಡಾ.ಕುಮಾರಸ್ವಾಮಿ ತಿಳಿಸಿದರು.