ಮೈಸೂರು: ಕರ್ನಾಟಕ ಕಲಾ ಮಂದಿರದಲ್ಲಿ ಜನವರಿ 14 ರಿಂದ 19 ವರೆಗೆ ರಾಷ್ಟ್ರೀಯ ಬಹುರೂಪಿ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಪಿ ಶಿವರಾಜು ತಿಳಿಸಿದರು.
ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಕೈಜೋಡಿಸುವ ಮೂಲಕ ನಾಟಕೋತ್ಸವವನ್ನು ಯಶಸ್ವಿಗೊಳಿಸಲು ಸಹಕರಿಸಿ ಎಂದು ಅಪರ ಜಿಲ್ಲಾಧಿಕಾರಿಗಳಾದ ಡಾ. ಪಿ ಶಿವರಾಜು ಅವರು ತಿಳಿಸಿದರು
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಹುರೂಪಿ ನಾಟಕೋತ್ಸವ -2025 ರ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು,ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಕೈಜೋಡಿಸುವ ಮೂಲಕ ನಾಟಕೋತ್ಸವವನ್ನು ಯಶಸ್ವಿಗೊಳಿಸಲು ಸಹಕರಿಸಬೇಕೆಂದು ಮನವಿ ಮಾಡಿದರು.
ನಾಗರೀಕ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ನಾಟಕಗಳನ್ನು ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆಯ ವತಿಯಿಂದ ಕಲಾಮಂದಿರ ಹಾಗೂ ರಂಗಾಯಣದ ಆವರಣದಲ್ಲಿ ಸ್ವಚ್ಚತೆ ಮಾಡಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಬೇಕು. ನಗರದ ಪ್ರಮುಖ ಸ್ಥಳಗಳಲ್ಲಿ ಸರ್ಕಾರದ ಯೋಜನೆಗಳಿಗೆ ಪ್ರಚಾರ ನೀಡಲು ವ್ಯವಸ್ಥೆ ಮಾಡಿರುವ ಡಿಜಿಟಲ್ ಸ್ಕ್ರಿನ್ ಮೂಲಕ ಉತ್ಸವದ ಪ್ರಚಾರ ಮಾಡಬೇಕು ಎಂದು ಶಿವರಾಜು ಸೂಚಿಸಿದರು.
ಬಹುರೂಪಿ ನಾಟಕೋತ್ಸವ ನಡೆಯುವುದರಿಂದ ಆ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಆಗದಂತೆ ಚೆಸ್ಕಾಂ ಅಧಿಕಾರಿಗಳು ಜಾಗ್ರತೆ ವಹಿಸಬೇಕು. ಉತ್ಸವದ ದಿನಗಳಲ್ಲಿ ಸಂಜೆ 6 ರಿಂದ ರಾತ್ರಿ 10 ಗಂಟೆಯವರೆಗೆ ನಗರದ ವಿವಿಧ ಬಡಾವಣೆಗಳಿಗೆ ನಗರ ಸಾರಿಗೆ ಬಸ್ ಸೌಲಭ್ಯವನ್ನು ಕೆ ಎಸ್ ಆರ್ ಟಿ ಸಿ ವತಿಯಿಂದ ಒದಗಿಸಬೇಕು.ಶಾಲಾ ಕಾಲೇಜು ಶಿಕ್ಷಕರು ಹಾಗೂ ಮಕ್ಕಳು ನಾಟಕೋತ್ಸವದಲ್ಲಿ ಭಾಗವಹಿಸಲು ಅವರಿಗೆ ಮಾಹಿತಿಯನ್ನು ನೀಡಬೇಕು ಎಂದು ಸಲಹೆ ನೀಡಿದರು.
ರಂಗಾಯಣದ ನಿರ್ದೇಶಕರಾದ ಸತೀಶ್ ತಿಪಟೂರು ಮಾತನಾಡಿ ರಂಗಾಯಣ ಪ್ರಾರಂಭವಾಗಿ 35 ವರ್ಷಗಳು ಸಂದಿವೆ. ಬಹುರೂಪಿ ನಾಟಕೋತ್ಸವದಲ್ಲಿ 6 ದಿನಗಳ ಕಾಲ 24 ನಾಟಕಗಳು ಪ್ರದರ್ಶನ ಆಗುತ್ತವೆ. ಇದರಲ್ಲಿ ಬೇರೆ ಬೇರೆ ಭಾಷೆಯ ನಾಟಕಗಳು ಇವೆ. ಈ ಬಾರಿ ಮಕ್ಕಳಿಗಾಗಿ ಮಕ್ಕಳ ನಾಟಕೋತ್ಸವ ವನ್ನು ಒಂದು ವೇದಿಕೆಯಲ್ಲಿ ಮಾಡಲಾಗುತ್ತದೆ. ಎಲ್ಲಾ ಇಲಾಖೆಗಳ ಸಹಕಾರ ನೀಡುವ ಮೂಲಕ ನಾಟಕೋತ್ಸವ ಯಶಸ್ವಿಗೆ ಕೈಜೋಡಿಸಿ ಎಂದು ಕೋರಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಮಲ್ಲಿಕಾರ್ಜುನ ಸ್ವಾಮಿ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಜವರೇಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಟಿ ಕೆ ಹರೀಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.