ವಿಜಯ್ ಪ್ರಕಾಶ್ ಹಾಡಿಗೆ ಮನಸೋತ ಮೈಸೂರು ಜನತೆ

Spread the love

ಮೈಸೂರು: ಮೈಸೂರಿನ ವರ ಪುತ್ರ ಕನ್ನಡ ಚಿತ್ರರಂಗದ ಹೆಸರಾಂತ ಗಾಯಕ ವಿಜಯ್ ಪ್ರಕಾಶ್ ಹಾಡುಗಳಿಗೆ ಮೈಸೂರಿಗರು ಮನಸೋತರು.

ನಗರದ ಅರಮನೆ ಆವರಣದ ಅರಮನೆ ವೇದಿಕೆಯಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2025ರ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜಯ್ ಪ್ರಕಾಶ್ ಗೀತೆಗಳಿಗೆ ಜನ ತಲೆದೂಗಿದರು.

ವಿಜಯ್ ಪ್ರಕಾಶ್ ಅವರು ಚಾಮುಂಡೇಶ್ವರಿ ಶಂಕರಿ ಕೀರ್ತನೆಯೊಂದಗೆ ಹಾಡು ಪ್ರಾರಂಭಿಸಿ ಹಂಸಲೇಖ ರಚನೆಯ ಹಬ್ಬ ಹಬ್ಬ ಇದು ಕರಡುನಾಡ ಮನೆ ಮನೆ ಹಬ್ಬ.. ಇದು ಚಾಮುಂಡಿ ತಾಯಿ ತವರ ಹಬ್ಬ ಹಾಡು ಹಾಡಿ ರಂಜಿಸಿದರು.

ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜ ಕುಮಾರ…ಹಾಡಿಗೆ ಪ್ರೇಕ್ಷಕರೆಲ್ಲ ತಮ್ಮ ಮೊಬೈಲ್ ಕ್ಯಾಮರಾ ಟಾರ್ಚ್ ಆನ್ ಮಾಡಿ, ಮೈ ಓಲಾಡಿಸಿ ಧ್ವನಿಗೂಡಿಸಿ ಹಾಡಿ ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸಿದರು.

ಹಲೋ ಹಲೋ ನನ್ನ ಮನಸ್ಸು ಇಲ್ಲೆ ಎಲ್ಲೋ… ಓಪನ್ ಹೇರ್ ಬಿಟ್ಕೊಂಡು ಕೂದಲು ಹಾರಾಡ್ಸ್ಕೊಂಡು, ಸಿಂಗಾರ ಸಿರಿಯೇ.. ಬೆಳಗೆದ್ದು ಯಾರ ಮುಖವಾ ನಾನು ನೋಡಿದೆ. …ಹಾಡುಗಳು ಪ್ರೇಕ್ಷಕರು ಹಾಗೂ ಪ್ರವಾಸಿಗರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದರು.

ಪೃಥ್ವಿ ಭಟ್, ಶಾಶ್ವತಿ ಕಷ್ಯಪ್ ಮತ್ತು ಅಖಿಲ ಅವರು ಸೂಜುಗಾದ ಸೂಜು ಮಲ್ಲಿಗೆ ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ಹಾಡನ್ನು ಹಾಡಿ ಪ್ರೇಕ್ಷಕರ ಮನಗೆದ್ದರು.

ವಿಜಯ್ ಪ್ರಕಾಶ್ ಅವರು ಓಂ ಶಿವೋಂ ಹಂ.. ಓಂ ನಮಃ ಶಿವಾಯ ಎಂದು ಶಿವನ ಸ್ತುತಿಯನ್ನು ಹಾಡಿದಾಗ ನೆರೆದಿದ್ದವರು ಶಿವ ಜಪದಲ್ಲಿ ಮುಳುಗುವಂತೆ ಮಾಡಿತು.

ಕಾಪಿ ರಾಗದಲ್ಲಿ ರೋಜಾ ರೋಜಾ ಹೂವೇ ಎಲ್ಲೆ ನೀ ಎಲ್ಲೆ… ನಗುವ ನಯನ ಮಧುರ ಮೌನ, ಕಲ್ಯಾಣಿ ರಾಗದಲ್ಲಿ ಡಾ.ರಾಜ್ ಕುಮಾರ್ ಅವರ ಕೋಗಿಲೆ ಹಾಡಿದೆ ಕೇಳಿದೆಯ…ಹೊಸ ರಾಗವ ಹಾಡಿದೆ ಆಲಿಸೆಯ, ನಿನ್ನಿಂದಲೇ ನಿನ್ನಿಂದಲೆ ಕನಸೊಂದು ಶುರುವಾಗಿದೆ ಹಾಗೂ ದಾನಿ ರಾಗದಲ್ಲಿ ಯಾವ ಕವಿಯ ಬರೆಯಲಾರ ಒಲವಿನಿಂದ ಹಾಡುಗಳನ್ನು ಹಾಡಿದರು.

ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿಯ ಆಪ್ತಮಿತ್ರ ಸಿನಿಮಾದ ಕಾಲವನ್ನು ತಡೆಯೊರು ಯಾರು ಇಲ್ಲ… ಗಾಳಿಯನ್ನು ಹಿಡಿಯೊರು ಎಲ್ಲೂ ಇಲ್ಲ, ನೀನಾಸಂ ಸತೀಶ್ ಅಭಿನಯದ ಅಯೋಗ್ಯ ಚಿತ್ರದ ಏನಮ್ಮಿ ಏನಮ್ಮಿ ಯಾರಮ್ಮಿ ನೀನಮ್ಮಿ, ಸುದೀಪ್ ನಟನೆಯ ಕೋಟಿಗೊಬ್ಬ-2 ಚಿತ್ರದ ಸಾಲುತ್ತಿಲ್ಲವೆ ಸಾಲುತ್ತಿಲ್ಲವೆ….ನಿನ್ನ ಹಾಗೆ ಮತ್ತು ಬೇರೆ ಏನಿದೆ ಹಾಡುಗಳನ್ನು ಪ್ರೇಕ್ಷಕರು ಬಾಯಲ್ಲಿ ಗುನುಗುಂವೆ ಮಾಡಿದವು.

ವಿಜಯ್ ಪ್ರಕಾಶ್ ಅವರು ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು, ಪ್ರಥ್ವಿ ಭಟ್ ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮಾ, ಗಣೇಶ್ ಅವರು ಕೂರಕ್ ಕುಕ್ಕರಹಳ್ಳಿ ಕೆರೆ, ಶಾಶ್ವತಿ ಶೇಕ್ ಹಿಟ್ ಪುಷ್ಪವತಿ, ಭಾರ್ಗವ್ ಸಿಕ್ಕ ಪಟ್ಟೆ ಇಷ್ಟ ಪಟ್ಟೆ ಹೈ ಲೈಕ್ ಹಿಟ್, ಅಖಿಲ ಕೈನಾಗೆ ಮೈಕ್ ಹಿಟ್ರೆ ನಾನ್ ಸ್ಟಾಂಪ್ ಭಾಷಣ ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ, ಕುಲದಲ್ಲಿ ಕೀಳ್ಯಾವುದೊ ಹುಚ್ಚಪ್ಪ… ಮತದಲ್ಲಿ ಮೇಲ್ಯಾವುದೊ ಎಂದು ಹಾಡಿ ಜೈಹೊ..ಜೈಹೊ…ಹಾಡನ್ನು ಪೊಲೀಸರಿಗೆ ಸಮರ್ಪಿಸಿದರು.

ಇದಕ್ಕೂ ಮೊದಲು ಬೆಂಗಳೂರಿನ ಭೂತಾಯಿ ಬಳಗದಿಂದ ಪರಿವರ್ತನಾ ತತ್ವ ಪದಗಳು ಪ್ರೇಕ್ಷಕರ ಮನ ಮುಟ್ಟಿದರೆ, ತದನಂತರ ಅಂತರರಾಷ್ಟ್ರೀಯ ಖ್ಯಾತ ಕಲಾವಿದರಿಂದ
ಕುಚ್ಚುಪುಡಿ ನೃತ್ಯ ನೋಡಗರ ಮನ ಸೂರೆಗೊಂಡಿತು.